ETV Bharat / sports

ಐಪಿಎಲ್‌ಗೆ ಆದ್ಯತೆ ನೀಡಿ ದೇಶೀಯ ಕ್ರಿಕೆಟ್‌ ಕಡೆಗಣಿಸುವುದು ಒಳ್ಳೆಯದಲ್ಲ: ಆಟಗಾರರಿಗೆ ಜಯ್ ಶಾ ಎಚ್ಚರಿಕೆ

author img

By ANI

Published : Feb 19, 2024, 9:58 AM IST

ಐಪಿಎಲ್‌  ದೇಶೀಯ ಕ್ರಿಕೆಟ್‌  ಬಿಸಿಸಿಐ ಕಾರ್ಯದರ್ಶಿ ಜಯ್ ಶಾ  BCCI secretary Jay Shah  IPL
ಐಪಿಎಲ್‌ಗೆ ಆದ್ಯತೆ ನೀಡಿ ದೇಶೀಯ ಕ್ರಿಕೆಟ್‌ಗೆ ಕಡೆಗಣಿಸಿದರೆ ಒಳ್ಳೆಯದಲ್ಲ: ಜಯ್ ಶಾ ಆಟಗಾರರಿಗೆ ಎಚ್ಚರಿಕೆ

''ಐಪಿಎಲ್‌ಗೆ ಆದ್ಯತೆ ನೀಡಿ ದೇಶೀಯ ಕ್ರಿಕೆಟ್‌ ಕಡೆಗಣಿಸುವುದು ಒಳ್ಳೆಯದಲ್ಲ. ಇದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತದೆ'' ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಐಪಿಎಲ್‌ಗಾಗಿ ದೇಶೀಯ ಕ್ರಿಕೆಟ್‌ನಿಂದ ಹೊರಗುಳಿಯುವ ಆಟಗಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ನವದೆಹಲಿ: ''ಕೇಂದ್ರೀಯ ಗುತ್ತಿಗೆ ಪಡೆದಿರುವ ಭಾರತದ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕಾದ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು'' ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. "ಇತ್ತೀಚಿನ ವರ್ಷಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಯಶಸ್ಸಿನಿಂದ ಮಂಡಳಿಯು ನಿಜವಾಗಿಯೂ ಸಂತೋಷವಾಗಿದೆ. ಆದರೆ, ಆಟಗಾರರು ಐಪಿಎಲ್‌ಗೆ ಆದ್ಯತೆ ನೀಡಿ ದೇಶೀಯ ಕ್ರಿಕೆಟ್‌ಗೆ ಕಡೆಗಣಿಸಿದರೆ ಅದು ಅವರಿಗೆ ಒಳ್ಳೆಯದಲ್ಲ. ಇದರ ಪರಿಣಾಮಗಳು ಕೆಟ್ಟದಾಗಿರುತ್ತದೆ'' ಎಂದು ಹೇಳಿದ್ದಾರೆ.

ಈ ರೀತಿಯ ಒಂದು ಪ್ರವೃತ್ತಿಯು ಪ್ರಾರಂಭವಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಕೆಲವು ಆಟಗಾರರು ದೇಶೀಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಒತ್ತು ನೀಡಲು ಆರಂಭಿಸಿದ್ದಾರೆ, ಇದು ಸರಿಯಾದ ಬೆಳವಣಿಗೆಯಲ್ಲ. ದೇಶೀಯ ಕ್ರಿಕೆಟ್ ಯಾವಾಗಲೂ ಭಾರತೀಯ ಕ್ರಿಕೆಟ್​ಗೆ ಅಡಿಪಾಯವಾಗಿ ನಿಂತಿದೆ. ಕ್ರೀಡೆ ದೃಷ್ಟಿಯಲ್ಲಿ ದೇಶೀಯ ಕ್ರಿಕೆಟ್​ನ್ನು ಎಂದಿಗೂ ಕೂಡ ಕಡಿಮೆ ಎಂದು ಭಾವಿಸಿಲ್ಲ" ಎಂದು ಆಟಗಾರರನ್ನು ಉದ್ದೇಶಿಸಿ ಪತ್ರದಲ್ಲಿ ಬರೆದಿರುವ ಜಯ ಶಾ ಉಲ್ಲೇಖಿಸಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಿಡಿ: "ಭಾರತಕ್ಕಾಗಿ ಆಡಲು ಬಯಸುವವರು ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಮಂಡಳಿಯು ಆರಂಭದಿಂದಲೂ ಸ್ಪಷ್ಟ ದೃಷ್ಟಿಕೋನ ಹೊಂದಿದೆ. ದೇಶೀಯ ಕ್ರಿಕೆಟ್ ಭಾರತೀಯ ಕ್ರಿಕೆಟ್‌ನ ಬೆನ್ನೆಲಬು ಆಗಿದೆ. ಮತ್ತು ಟೀಮ್ ಇಂಡಿಯಾಕ್ಕೆ ಫೀಡರ್ ಲೈನ್ ಆಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗುರುತಿಸುವುದು ಅತ್ಯಗತ್ಯ. ಭಾರತೀಯ ಕ್ರಿಕೆಟ್‌ಗೆ ನಮ್ಮ ದೃಷ್ಟಿ ಮೊದಲಿನಿಂದಲೂ ಸ್ಪಷ್ಟವಾಗಿದೆ. ಭಾರತಕ್ಕಾಗಿ ಆಡಲು ಬಯಸುವ ಪ್ರತಿಯೊಬ್ಬ ಕ್ರಿಕೆಟಿಗರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಸಾಬೀತುಪಡಿಸಬೇಕು. ದೇಶೀಯ ಪಂದ್ಯಾವಳಿಗಳಲ್ಲಿನ ಪ್ರದರ್ಶನವು ಆಯ್ಕೆಗೆ ನಿರ್ಣಾಯಕ ಮಾನದಂಡವಾಗಿ ಉಳಿದಿದೆ. ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸದಿರುವುದು ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಿಡಿಕಾರಿದ್ದಾರೆ.

ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹರ್ ಇತ್ತೀಚೆಗೆ ಹಲವಾರು ಕಾರಣಗಳಿಗಾಗಿ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಅಯ್ಯರ್ ಗ್ರೇಡ್-ಬಿ BCCI ಒಪ್ಪಂದವನ್ನು ಹೊಂದಿದ್ದಾರೆ. ಆದರೆ, ಕಿಶನ್ ಗ್ರೇಡ್ - ಸಿ ಒಪ್ಪಂದವನ್ನು ಹೊಂದಿದ್ದಾರೆ. ಆದರೆ, ಬಿಸಿಸಿಐ ಒಪ್ಪಂದದ ನವೀಕರಣಗಳಲ್ಲಿ ಚಹರ್ ಅವರನ್ನು ಸೇರಿಸಲಾಗಿಲ್ಲ.

ಇಶಾನ್ ಕೊನೆಯ ಬಾರಿಗೆ ಗುವಾಹಟಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20ಐ ಸ್ವರೂಪದಲ್ಲಿ ಭಾರತಕ್ಕಾಗಿ ಆಡಿದ್ದರು. ಅದರ ನಂತರ ಅವರು ಮೊದಲ ಹನ್ನೊಂದರಲ್ಲಿ ಸ್ಥಾನ ಪಡೆಯಲು ವಿಫಲರಾದರು. ಇಶಾನ್ ಅವರು ಡಿಸೆಂಬರ್ 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟಿ20ಐ ತಂಡದಲ್ಲಿದ್ದರು. ಆದರೆ, ಮೂರು ಪಂದ್ಯಗಳಲ್ಲಿ ಅವರು ಆಡಲಿಲ್ಲ. ಕಳೆದ ವರ್ಷ, ಅವರು ಭಾರತದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ವಿಕೆಟ್ ಕೀಪರ್ ಆಗಿದ್ದರು. ಆದರೆ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಗೆ ಇಶಾನ್ ಅವರನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಜೊತೆಗೆ ಅವರು ರಣಜಿ ಟ್ರೋಫಿಯಲ್ಲೂ ಭಾಗವಹಿಸಲಿಲ್ಲ.

ಮತ್ತೊಂದೆಡೆ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್‌ಗಳನ್ನು ಆಡಿದ ನಂತರ ಅಯ್ಯರ್ ಅವರನ್ನು ಕೊನೆಯ ಮೂರು ಟೆಸ್ಟ್‌ಗಳಿಗೆ ಭಾರತ ತಂಡದಿಂದ ಕೈಬಿಡಲಾಯಿತು. ಅವರು ಹೈದರಾಬಾದ್ ಮತ್ತು ವೈಜಾಗ್‌ನಲ್ಲಿ ಆಡಿದ ಪಂದ್ಯಗಳಲ್ಲಿ ಕೇವಲ 35 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಚಹರ್ ಅವರ ತಂದೆ ಪಾರ್ಶ್ವವಾಯುವಿಗೆ ಒಳಗಾದ ಹಿನ್ನೆಲೆ, ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20ಐ ಮತ್ತು ನಂತರದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ: 3ನೇ ಟೆಸ್ಟ್​: ಇಂಗ್ಲೆಂಡ್​ ವಿರುದ್ಧ ಭಾರತಕ್ಕೆ 434 ರನ್​ಗಳ ಜಯ; ಟೆಸ್ಟ್​ ಇತಿಹಾಸದಲ್ಲೇ ದೊಡ್ಡ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.