ETV Bharat / sports

IPL 2024: ವರುಣ್​ ಸ್ಪಿನ್​ ಬಲೆಗೆ ಬಿದ್ದ ಡೆಲ್ಲಿ: ಕೆಕೆಆರ್​ಗೆ 7 ವಿಕೆಟ್​ಗಳ ಭರ್ಜರಿ ಜಯ​ ​ - KKR Beat DC

author img

By PTI

Published : Apr 30, 2024, 6:54 AM IST

Updated : Apr 30, 2024, 7:09 AM IST

IPL: ವರುಣ್​ ಸ್ಪಿನ್​ ಬಲೆಗೆ ಬಿದ್ದ ಡೆಲ್ಲಿ: ಕೆಕೆಆರ್​ಗೆ 7 ವಿಕೆಟ್​ಗಳ ಜಯ​ ​
IPL: ವರುಣ್​ ಸ್ಪಿನ್​ ಬಲೆಗೆ ಬಿದ್ದ ಡೆಲ್ಲಿ: ಕೆಕೆಆರ್​ಗೆ 7 ವಿಕೆಟ್​ಗಳ ಜಯ​ ​

ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸೋಲನುಭವಿಸಿದೆ.

ಕೋಲ್ಕತ್ತಾ, ಪಶ್ಚಿಮ ಬಂಗಾಳ: ನಿನ್ನೆ ನಡೆದ ಐಪಿಎಲ್​ನ 47ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ್ದ ಡೆಲ್ಲಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಕಲೆ ಹಾಕಿತು. ಇದಕ್ಕುತ್ತರವಾಗಿ ಕೆಕೆಆರ್ 16.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು. ಕೆಕೆಆರ್ ಪರ ಫಿಲ್​ ಸಾಲ್ಟ್ ಬಿರುಸಿನ ಇನ್ನಿಂಗ್ಸ್ ಆಡಿದರು. 33 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 68 ರನ್ ಚಚ್ಚಿದರು. ಸುನಿಲ್ ನರೈನ್ (10)ಯೊಂದಿಗೆ ಮೊದಲ ವಿಕೆಟ್‌ಗೆ 79 ರನ್ ಸೇರಿಸಿ ಭದ್ರ ಬುನಾದಿ ಹಾಕಿದರು. ಅಕ್ಷರ್ ಪಟೇಲ್ ಏಳನೇ ಓವರ್‌ನಲ್ಲಿ ನರೈನ್ ಮತ್ತು ಒಂಬತ್ತನೇ ಓವರ್‌ನಲ್ಲಿ ಸಾಲ್ಟ್ ಅವರನ್ನು ಔಟ್ ಮಾಡಿದರು. ರಿಂಕು ಸಿಂಗ್ (11) ಕೂಡ ಬಹು ಬೇಗ ವಿಕೆಟ್ ಕಳೆದುಕೊಂಡರು.

ಬಳಿಕ ನಾಯಕ ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ನಾಲ್ಕನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ 6ನೇ ಗೆಲವಿನೊಂದಿಗೆ ಕೆಕೆಆರ್​ 2ನೇ ಸ್ಥಾನವನ್ನು ಭದ್ರವಾಗಿರಿಸಿಕೊಂಡಿದೆ. ಡೆಲ್ಲಿ ಪರ ಅಕ್ಷರ್​ ಪಟೇಲ್​ 2, ವಿಲಿಯಮ್ಸ್​ ಲಿಜಾದ್​ ಒಂದು ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಮೊದಲು ಬ್ಯಾಟ್​ ಮಾಡಿದ್ದ ಡೆಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಎಡವಿತು. ಪವರ್​ ಪ್ಲೇನಲ್ಲೇ ಪೃಥ್ವಿ ಶಾ (13), ಫ್ರೇಸರ್-ಮೆಕ್‌ಗುರ್ಕ್ (12), ಶಾಹಿ ಹೋಪ್​ (6) ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡಿತು. ಬಳಿಕ ಅಭಿಷೇಕ್ ಪೊರೆಲ್ (18) ಮತ್ತು ನಾಯಕ ರಿಷಭ್​ ಪಂತ್​ (27), ಅಕ್ಷರ್​ (15), ಸ್ಟಬ್ಸ್​​ (4), ಕುಶಾಗ್ರ (1), ರಾಶಿಕ್​ ಸಲಾಮ್​ (8) ಕೂಡ ಪೆವಿಲಿಯನ್​ ಪರೇಡ್​ ಮಾಡಿದರು. 111 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡಿದ್ದ ಡೆಲ್ಲಿ 120ರ ಗಡಿ ತಲುಪುವುದು ಕಷ್ಟವೆಂದೆನಿಸಿತ್ತು.

ಈ ವೇಳೆ, ಆಸರೆಯಾದ ಸ್ಪಿನ್ನರ್​ ಕುಲದೀಪ್ ಯಾದವ್ 35 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದರು. 26 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ತಂಡದ ಸ್ಕೋರ್ 150ರ ಗಡಿಗೆ ಕೊಂಡೊಯ್ಯಲು ಸಹಾಯ ಮಾಡಿದರು. ಕೆಕೆಆರ್ ಪರ ವರುಣ್ ಚಕ್ರವರ್ತಿ 3, ಹರ್ಷಿತ್ ರಾಣಾ, ವೈಭವ್ ಅರೋರಾ ತಲಾ 2, ಸುನಿಲ್ ನರೈನ್, ಮಿಚೆಲ್ ಸ್ಟಾರ್ಕ್ ತಲಾ 1 ವಿಕೆಟ್ ಪಡೆದರು.

ಇದನ್ನೂ ಓದಿ: ಟಿ20 ವಿಶ್ವಕಪ್‌: ಸಂಜು ಸ್ಯಾಮ್ಸನ್ ಟೀಂ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಸಾಧ್ಯತೆ - Sanju Samson

Last Updated :Apr 30, 2024, 7:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.