ETV Bharat / sports

IPL 2024: ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡದ SWOT ಏನು?

author img

By ETV Bharat Karnataka Team

Published : Mar 12, 2024, 8:42 PM IST

ipl-2024-sunrisers-hyderabad-aiming-to-change-their-fortunes-with-title-run
IPL 2024: ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡದ SWOT ಏನು?

ಈ ಬಾರಿಯ ಐಪಿಎಲ್ ಟೂರ್ನಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಶಕ್ತಿ, ದೌರ್ಬಲ್ಯ, ಅವಕಾಶ, ಬೆದರಿಕೆಗಳ ಬಗ್ಗೆ 'ಈಟಿವಿ ಭಾರತ್‌'ನ ನಿಶಾದ್ ಬಾಪಟ್ ಮಾಡಿರುವ ವಿಶ್ಲೇಷಣೆ ಹೀಗಿದೆ.

ಹೈದರಾಬಾದ್: ಕಳೆದ ವರ್ಷ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದುಃಸ್ವಪ್ನವಾಗಿ ಪರಿಣಮಿಸಿತ್ತು. ಏಕೆಂದರೆ, ತಾನು ಆಡಿದ್ದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಎಸ್‌ಆರ್‌ಹೆಚ್ ಪಡೆದಿತ್ತು. ಬ್ಯಾಟಿಂಗ್ ವೈಫಲ್ಯದಿಂದ ತಂಡವು ಚುಟುಕು ಟೂರ್ನಿಯ ಅಭಿಯಾನವನ್ನು ತೀರ ನೀರಸವಾಗಿ ಮುಗಿಸಿತ್ತು.

ಎಸ್‌ಆರ್‌ಹೆಚ್​ ಪರ ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ 49.77 ಸರಾಸರಿಯೊಂದಿಗೆ 448 ರನ್ ಗಳಿಸಿ ತಂಡದ ಸ್ಟಾರ್ ಪರ್ಫಾರ್ಮರ್ ಆಗಿದ್ದರು. ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಉಮ್ರಾನ್ ಮಲಿಕ್ ಕ್ರಮವಾಗಿ 16 ಮತ್ತು 12 ವಿಕೆಟ್ ಪಡೆದ್ದರು. ಆದರೆ, ಇತರ ಯಾವುದೇ ಬೌಲರ್‌ಗಳು ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ.

ಇದೀಗ ಈ ವರ್ಷ ಹರಾಜಿನಲ್ಲಿ ಫ್ರಾಂಚೈಸಿಯು ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಅವರನ್ನು 20.50 ಕೋಟಿ ರೂ.ಗಳಿಗೆ ಖರೀದಿಸಿದೆ. ಎಸ್‌ಆರ್‌ಎಚ್ ನಾಯಕರಾಗಿ ನೇಮಕಗೊಂಡಿರುವ ಆಸ್ಟ್ರೇಲಿಯದ ವೇಗಿ, ತಂಡದ ವೇಗದ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅವರನ್ನು ಹೊರತುಪಡಿಸಿ, ಆಸ್ಟ್ರೇಲಿಯಾದ ಸ್ಟಾರ್ ಟ್ರಾವಿಸ್ ಹೆಡ್ ಮತ್ತು ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗಾ ಸೇರಿದಂತೆ ಐದು ಆಟಗಾರರನ್ನು ಎಸ್‌ಆರ್‌ಹೆಚ್ ಖರೀದಿ ಮಾಡಿದೆ. ಪ್ರಸ್ತುತ ತಂಡದ SWOT (Strength - ಶಕ್ತಿ, Weakness - ದೌರ್ಬಲ್ಯ, Opportunities - ಅವಕಾಶಗಳು, Threat - ಬೆದರಿಕೆ) ವಿಶ್ಲೇಷಣೆ ಹೀಗಿದೆ.

ಎಸ್‌ಆರ್‌ಹೆಚ್ ತಂಡದ ಶಕ್ತಿ: ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಾಮ್, ಮಾರ್ಕೊ ಜಾನ್ಸೆನ್, ಗ್ಲೆನ್ ಫಿಲಿಪ್ಸ್ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಒಳಗೊಂಡಂತೆ ಸಾಗರೋತ್ತರ ತಾರೆಗಳು 'ಆರೆಂಜ್ ಆರ್ಮಿ'ಯ ದೊಡ್ಡ ಶಕ್ತಿಯಾಗಿದ್ದಾರೆ. ಮಾರ್ಕ್ರಾಮ್ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಆದರೆ, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಹೆನ್ರಿಚ್ ಕ್ಲಾಸೆನ್ ಮತ್ತು ಗ್ಲೆನ್ ಫಿಲಿಪ್ಸ್ ಬಲ ತುಂಬಬೇಕು.

ಮಾರ್ಕೊ ಜಾನ್ಸೆನ್ ಮತ್ತು ಪ್ಯಾಟ್ ಕಮ್ಮಿನ್ಸ್ ಕೈಯಲ್ಲಿ ಹೊಸ ಚೆಂಡು ಮಾರಕವಾಗಬಹುದು. ಹೊಸ ಬಾಲ್ ಬೌಲರ್‌ಗಳು ತಂಡದ ಶಕ್ತಿಯ ಮತ್ತೊಂದು ಕೇಂದ್ರವಾಗಿದೆ. ಭುವನೇಶ್ವರ್ ಕುಮಾರ್, ಜಾನ್ಸೆನ್ ಮತ್ತು ಕಮ್ಮಿನ್ಸ್ ಹೊಸ ಚೆಂಡಿನೊಂದಿಗೆ ಪರಿಣಾಮಕಾರಿಯಾಗಿರುತ್ತಾರೆ. ಅಲ್ಲದೇ, ಟ್ರಾವಿಸ್ ಹೆಡ್ ಸೇರ್ಪಡೆಯೊಂದಿಗೆ ತಂಡವು ಅಗ್ರಸ್ಥಾನದಲ್ಲಿ ಸ್ಫೋಟಕ ಆರಂಭಿಕರನ್ನು ಹೊಂದಿರುತ್ತದೆ.

ದೌರ್ಬಲ್ಯ: ಭಾರತೀಯ ಆಟಗಾರರ ಫಾರ್ಮ್ ಈ ಋತುವಿನಲ್ಲೂ ತಂಡದ ನಿರ್ವಹಣೆಗೆ ಚಿಂತೆಗೀಡು ಮಾಡುವ ಅಂಶವಾಗಿದೆ. ಬ್ಯಾಟರ್ ರಾಹುಲ್ ತ್ರಿಪಾಠಿ 2023-24ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಏಳು ಪಂದ್ಯಗಳಿಂದ 21.66 ಸರಾಸರಿಯೊಂದಿಗೆ 130 ರನ್ ಗಳಿಸಿದ್ದಾರೆ. ಬ್ಯಾಟರ್ ಮಯಾಂಕ್ ಅಗರ್ವಾಲ್ ಐದು ಪಂದ್ಯಗಳಿಂದ ಕೇವಲ 126 ರನ್ ಕೆಲ ಹಾಕಿದ್ದಾರೆ. ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಐದು ಪಂದ್ಯಗಳಿಂದ ಕೇವಲ 62 ರನ್ ಗಳಿಸಿದ್ದಾರೆ. ಅಲ್ಲದೇ, ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಡೆತ್ ಬೌಲರ್ ಸಹ ತಂಡಕ್ಕೆ ಮತ್ತೊಂದು ಚಿಂತೆಯಾಗಿದೆ. ಸ್ಲಾಗ್ ಓವರ್‌ಗಳಲ್ಲಿ ನೈಲ್ ಯಾರ್ಕರ್‌ಗಳ ಎಸೆಯುವ ವಿಶೇಷ ಬೌಲರ್​ ಹೊಂದಿಲ್ಲ. ವೇಗಿ ಭುವನೇಶ್ವರ್ ಕುಮಾರ್ ತಂಡಕ್ಕಾಗಿ ಈ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆದರೆ, ಅವರ ದೀರ್ಘಕಾಲದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದು, ಇನ್ನಿಂಗ್ಸ್‌ನ ಅಂತಿಮ ಹಂತದ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಲ್ಲದೇ, ಎಡಗೈ ವೇಗಿ ಟಿ.ನಟರಾಜನ್ ಗಾಯದಿಂದ ವಾಪಸಾಗುತ್ತಿದ್ದು, ಪರಿಪೂರ್ಣ ಯಾರ್ಕರ್‌ ಬಲವನ್ನು ಇನ್ನೂ ಪರೀಕ್ಷಿಸಬೇಕಾಗಿದೆ.

ಅವಕಾಶ: ಈ ಪಂದ್ಯಾವಳಿಯು ಉಪೇಂದ್ರ ಯಾದವ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಆಟಗಾರರಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ಉಪೇಂದ್ರ ಯಾದವ್ ವಿಕೆಟ್ ಕೀಪರ್, ಬ್ಯಾಟರ್ ಆಗಿದ್ದು, ಕೆಲವು ಪಂದ್ಯಗಳಲ್ಲಿ ಅವಕಾಶಗಳನ್ನು ಪಡೆಯಬಹುದು. ಮತ್ತೊಂದೆಡೆ, ನಿತೀಶ್ ಕುಮಾರ್ ರೆಡ್ಡಿ ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದು, ತಂಡಕ್ಕಾಗಿ ಕೆಳ ಕ್ರಮಾಂಕದಲ್ಲಿ ಬಲ ತುಂಬಬಹುದು.

ಬೆದರಿಕೆ: ಆಲ್‌ರೌಂಡರ್‌ಗಳ ವಿಭಾಗದಲ್ಲಿ ಬಹು ವಿದೇಶಿ ಆಟಗಾರರು ಲಭ್ಯವಿರುವುದರಿಂದ ವನಿಂದು ಹಸರಂಗ, ಮಾರ್ಕೊ ಜಾನ್ಸೆನ್ ಮತ್ತು ಗ್ಲೆನ್ ಫಿಲಿಪ್ಸ್ ಅವರಲ್ಲಿ ಇಬ್ಬರನ್ನು ಬೆಂಚ್ ಕಾಯುವಂತೆ ಮಾಡಬೇಕಾಗುತ್ತದೆ. ಈ ಮೂವರು ಸಹ ಗುಣಮಟ್ಟದ ಆಯ್ಕೆಯ ಆಟಗಾರರು. ಆದರೆ, ಇದರಲ್ಲಿ ಒಬ್ಬರಿಗೆ ಅವಕಾಶ ಸಿಗುತ್ತದೆ. ಅಲ್ಲದೇ, ತಂಡದಲ್ಲಿ ಅನುಭವಿ ಸ್ಪಿನ್ನರ್ ಕೊರತೆ ಇದೆ. ಇದು ಮಧ್ಯಮ ಹಂತದಲ್ಲಿ ತಂಡವು ಸಾಕಷ್ಟು ರನ್​ಗಳನ್ನು ಬಿಟ್ಟುಕೊಡಲು ಕಾರಣವಾಗಬಹುದು.

ಇದನ್ನೂ ಓದಿ: ಐಪಿಎಲ್​ 2024: ರಿಷಬ್​ ಪಂತ್​ ಫಿಟ್​, ಗಾಯಾಳು ಶಮಿ, ಪ್ರಸಿದ್ಧ್​ ಕೃಷ್ಣ ಟೂರ್ನಿಯಿಂದ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.