ETV Bharat / sports

ಚೆನ್ನೈನಲ್ಲಿಂದು IPL ಫೈನಲ್: ಪೈಪೋಟಿಗೆ ಹೈದರಾಬಾದ್​-ಕೋಲ್ಕತ್ತಾ ರೆಡಿ; ಕೌನ್‌ ಬನೇಗಾ ಚಾಂಪಿಯನ್? - IPL Final

author img

By PTI

Published : May 26, 2024, 7:23 AM IST

ಇಂದು ಸಂಜೆ ಐಪಿಎಲ್​ನ ಅಂತಿಮ ಮಹಾಕದನ ಚೆನ್ನೈನಲ್ಲಿ ನಡೆಯಲಿದೆ. ಫೈನಲ್​ ಗುದ್ದಾಟಕ್ಕೆ ಸನ್​​ರೈಸರ್ಸ್​ ಹೈದರಾಬಾದ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಸಿದ್ಧವಾಗಿವೆ.

ಐಪಿಎಲ್ ಫೈನಲ್​ ಪಂದ್ಯ
ಐಪಿಎಲ್ ಟ್ರೋಫಿಯೊಂದಿಗೆ ಶ್ರೇಯಸ್‌ ಅಯ್ಯರ್ ಮತ್ತು ಪ್ಯಾಟ್ ಕಮಿನ್ಸ್‌ (IPL X Handle)

ಚೆನ್ನೈ(ತಮಿಳುನಾಡು): ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ ಫೈನಲ್​ಗೆ ವೇದಿಕೆ ಸಜ್ಜಾಗಿದೆ. ಇಂದು (ಭಾನುವಾರ) ಸಂಜೆ 7.30ಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ (ಎಸ್‌ಆರ್‌ಎಚ್)​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​(ಕೆಕೆಆರ್) ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಇತ್ತಂಡಗಳು ಮಾಜಿ ಚಾಂಪಿಯನ್​ಗಳಾಗಿದ್ದು, ಈ ಬಾರಿಯ ಪ್ರಶಸ್ತಿ ಯಾರ ಪಾಲಾಗಲಿದೆ ಎಂಬುದು ಕುತೂಹಲದ ಸಂಗತಿಯಾಗಿದೆ.

ಟೂರ್ನಿಯುದ್ದಕ್ಕೂ ಪ್ರಾಬಲ್ಯ ಮೆರೆದು ಮೊದಲ ತಂಡವಾಗಿ ಫೈನಲ್​ ಪ್ರವೇಶಿಸಿದ್ದ ಕೆಕೆಆರ್​ ಮೂರನೇ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಮೊದಲ ಕ್ವಾಲಿಫೈಯರ್​​ನಲ್ಲಿ ಕೆಕೆಆರ್​ ವಿರುದ್ಧ ಸೋತಿದ್ದ ಸನ್‌ರೈಸರ್ಸ್​ ಹೈದರಾಬಾದ್​ ಎರಡನೇ ಕ್ವಾಲಿಫೈಯರ್​ನಲ್ಲಿ ರಾಜಸ್ಥಾನ ರಾಯಲ್ಸ್​ ಸೋಲಿಸಿ ಫೈನಲ್​ ತಲುಪಿದೆ. ಕೆಕೆಆರ್​ ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ಮೂಲಕ 2ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಲು ಸನ್​ ಪಡೆ ತಂತ್ರ ರೂಪಿಸಿದೆ.

ಕೆಕೆಆರ್​ ಬಲಾಬಲ: ಇತ್ತಂಡಗಳು ಟೂರ್ನಿಯಲ್ಲಿ ಬಲಿಷ್ಠವಾಗಿದ್ದು, ಹೋಲಿಕೆಯಲ್ಲಿ ಕೆಕೆಆರ್​ ತುಸು ಮುಂದಿದೆ. ಸರ್ವಾಂಗೀಣ ಪ್ರದರ್ಶನ ನೀಡುತ್ತಾ ಬಂದಿರುವ ಶ್ರೇಯರ್​ ಅಯ್ಯರ್​ ನೇತೃತ್ವದ ಪಡೆ ಯಾವುದರಲ್ಲಿ ಕಮ್ಮಿ ಇಲ್ಲ ಎಂಬಂತೆ ಆಡಿದೆ. ಸುನಿಲ್​​ ನರೈನ್​, ವೆಂಕಟೇಶ್​ ಅಯ್ಯರ್​, ನಾಯಕ ಶ್ರೇಯಸ್​ ಬ್ಯಾಟಿಂಗ್​ ಮಿಂಚುತ್ತಿದ್ದಾರೆ. ಆ್ಯಂಡ್ರೆ ರಸೆಲ್​ ಆಲ್​ರೌಂಡರ್ ಪ್ರದರ್ಶನ ತಂಡದ ಪ್ಲಸ್​ ಪಾಯಿಂಟ್​. ವರುಣ್​ ಚಕ್ರವರ್ತಿ ಸ್ಪಿನ್​ ಜಾದು ಮಾಡಿದೆ. ಯುವ ವೇಗಿಗಳಾದ ಹರ್ಷಿತ್​ ರಾಣಾ, ವೈಭವ್​ ಅರೋರಾ ನಿರೀಕ್ಷೆ ಹುಟ್ಟಿಸಿದ್ದಾರೆ. ₹24 ಕೋಟಿಯ ಒಡೆಯ ಮಿಚೆಲ್​ ಸ್ಟಾರ್ಕ್​ ನಿರ್ಣಾಯಕ ಘಟ್ಟದಲ್ಲಿ ಲಯ ಕಂಡುಕೊಂಡಿದ್ದು ತಂಡಕ್ಕೆ ಬಲ ಹೆಚ್ಚಿಸಿದೆ.

ಎಸ್​ಆರ್​ಎಚ್​ ಶಕ್ತಿ: ಬಿರುಸಾದ ಬ್ಯಾಟಿಂಗ್​ನಿಂದಲೇ ಸದ್ದು ಮಾಡಿರುವ ಹೈದರಾಬಾದ್​, ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಟ್ರಾವಿಸ್​ ಹೆಡ್​, ಅಭಿಷೇಕ್​ ಶರ್ಮಾ, ಹೆನ್ರಿಚ್​ ಕ್ಲಾಸಿನ್​ ತಂಡದ ಟ್ರಂಪ್​ಕಾರ್ಡ್​. ನಿತೀಶ್​ ರೆಡ್ಡಿ ಆಲ್​​ರೌಂಡ್​ ವಿಭಾಗದಲ್ಲಿ ನಂಬಿಕೆ ಉಳಿಸಿಕೊಂಡಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​ ಜೊತೆಗೆ ನಟರಾಜ್​, ಭುವನೇಶ್ವರ್​ ಕುಮಾರ್​ ಇದ್ದರೆ, ಕಳೆದ ಪಂದ್ಯದಲ್ಲಿ ಸ್ಪಿನ್​ ಮೋಡಿ ಮಾಡಿರುವ ಶಹಬಾಜ್​ ಅಹ್ಮದ್​ ಫೈನಲ್​ನಲ್ಲಿ ಮಿಂಚುವ ಹಂಬಲ ಹೊಂದಿದ್ದಾರೆ.

ಗಂಭೀರ್​ v/s ಕಮಿನ್ಸ್​: ಫೈನಲ್​ ಹೋರಾಟ ಕೆಲ ವಿಶೇಷಗಳಿಗೆ ಕಾರಣವಾಗಲಿದೆ. ಸದ್ಯ ಕೆಕೆಆರ್​ ಮೆಂಟರ್​ ಆಗಿರುವ ಗೌತಮ್​ ಗಂಭೀರ್​ ತಂಡದ ಮಾಜಿ ನಾಯಕರೂ ಹೌದು. 2 ಬಾರಿ (2012, 2014) ಫ್ರಾಂಚೈಸಿಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಈ ಬಾರಿ ಡಕೌಟ್​ನಲ್ಲಿ ತಂತ್ರಗಾರ. ಹೈದರಾಬಾದ್​ ತಂಡದ ನಾಯಕ ಪ್ಯಾಟ್​ ಕಮಿನ್ಸ್​ ಮಾಜಿ ಕೆಕೆಆರ್​ ಆಟಗಾರ. 2014ರಲ್ಲಿ ಟ್ರೋಫಿ ಗೆದ್ದಾಗ ತಂಡದ ಭಾಗವಾಗಿದ್ದರು. ಈ ಬಾರಿ ಸನ್​ ಪಡೆಯನ್ನು ಫೈನಲ್‌ಗೆ​ ತಂದಿದ್ದಾರೆ. ಆಸೀಸ್​ ನಾಯಕನಾಗಿ ಏಕದಿನ ವಿಶ್ವಕಪ್​, ಟೆಸ್ಟ್ ಚಾಂಪಿಯನ್​ಶಿಪ್​ ಗೆದ್ದಿರುವ ಕಮಿನ್ಸ್​ ಐಪಿಎಲ್​ ಟ್ರೋಫಿ ಗೆಲ್ಲುವ ಗುರಿ ಹೊಂದಿದ್ದಾರೆ.

ಸಂಭಾವ್ಯ ತಂಡಗಳು: ಕೆಕೆಆರ್​- ಸುನಿಲ್ ನರೈನ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಎಸ್​ಆರ್​ಎಚ್​: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡನ್ ಮಾರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ.ನಟರಾಜನ್.

ಎಲ್ಲಿ, ಯಾವಾಗ?: ಚೆಪಾಕ್​ ಕ್ರೀಡಾಂಗಣ, ಚೆನ್ನೈ, ಸಮಯ 7.30ಕ್ಕೆ

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋಸಿನಿಮಾ

ಇದನ್ನೂ ಓದಿ: ಭಾರತ ತಂಡಕ್ಕೆ ರೈಸಿಂಗ್​ ಸ್ಟಾರ್ ಅಭಿಷೇಕ್​ ಶರ್ಮಾ​ ಕೊಟ್ಟ ಯುವರಾಜ್​ ​: ಯುವಿ ಹೊಗಳಿದ ರೈನಾ - Rising Star Abhishek Sharma

ETV Bharat Logo

Copyright © 2024 Ushodaya Enterprises Pvt. Ltd., All Rights Reserved.