ETV Bharat / sports

7 ವರ್ಷಗಳ ಬಳಿಕ ತಮ್ಮ ಹಳೆಯ ತಂಡಕ್ಕೆ ಮರಳಿದ ಗೌತಮ್ ಗಂಭೀರ್

author img

By ANI

Published : Mar 15, 2024, 1:39 PM IST

ಸಹ ಆಟಗಾರರ ಜೊತೆ ಗೌತಮ್ ಗಂಭೀರ್
ಸಹ ಆಟಗಾರರ ಜೊತೆ ಗೌತಮ್ ಗಂಭೀರ್

IPL 2024: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಭಾರತದ ಮಾಜಿ ಕ್ರಿಕೆಟಿಗ, ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳಿದ ಬೆನ್ನಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮೆಂಟರ್ ಆಗಿ ಮತ್ತೆ ಕ್ರಿಕೆಟ್​ ಅಂಗಳಕ್ಕೆ ಮರಳಿದ್ದಾರೆ. ರಾಜಕೀಯ ಕರ್ತವ್ಯಗಳಿಂದ ಹೊರಬರುತ್ತಿದ್ದಂತೆ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಅದರಂತೆ ಶುಕ್ರವಾರ ಅವರು ಈ ಹಿಂದಿನ ತಮ್ಮದೇ ನಾಯಕತ್ವದ ಕೆಕೆಆರ್ ತಂಡದ ತರಬೇತಿ ಶಿಬಿರ ಸೇರಿಕೊಂಡರು. 2012 ಮತ್ತು 2014ರಲ್ಲಿ ಕೆಕೆಆರ್ ತಂಡಕ್ಕೆ ಟ್ರೋಫಿ ತಂದುಕೊಟ್ಟಿದ್ದ ಗಂಭೀರ್, 2019ರ ಲೋಕಸಭಾ ಚುನಾವಣೆ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದರು.

ಆದರೆ, ಕ್ರಿಕೆಟ್​ಗೆ ಮರಳುವ ಹಿನ್ನೆಲೆ ಇತ್ತೀಚೆಗಷ್ಟೇ ರಾಜಕೀಯ ಚಟುವಟಿಕೆಗಳಿಂದ ಮುಕ್ತಿ ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಮನವಿ ಮಾಡಿದ್ದರು. ನಾನು ಮುಂಬರುವ ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚು ಗಮನ ಹರಿಸಬಹುದಾಗಿದೆ. ಹಾಗಾಗಿ ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ಗೌರವಾನ್ವಿತ ಗೃಹ ಸಚಿವ ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಜೈ ಹಿಂದ್! ಎಂದು ಗಂಭೀರ್ ತಮ್ಮ ಎಕ್ಸ್​ ಖಾತೆ ಸಂದೇಶದಲ್ಲಿ ತಿಳಿಸಿದ್ದರು. ಸದ್ಯ ಅವರು 7 ವರ್ಷಗಳ ನಂತರ ತಮ್ಮ ಹಳೆಯ ತಂಡಕ್ಕೆ ಮತ್ತೆ ಮರಳುತ್ತಿದ್ದಾರೆ.

ಕೆಕೆಆರ್​ನ ಅಧಿಕೃತ ಜಾಲತಾಣದಲ್ಲಿ ಗಂಭೀರ್ ಅವರು ಮೆಂಟರ್ ಆಗಿ ಸೇರುತ್ತಿರುವ ಸಣ್ಣದೊಂದು ಕ್ಲಿಪ್ ಅನ್ನು ಹಂಚಿಕೊಂಡಿದೆ. ಗೆದ್ದ ಎರಡು ಟ್ರೋಫಿಗಳೊಂದಿಗೆ ಫೋಟೋಗಳನ್ನು ಸಹ ಕ್ಲಿಕ್ ಮಾಡಿದೆ. ಅವರ ಆಗಮನ ತಂಡಕ್ಕೆ ಮತ್ತೊಂದಿಷ್ಟು ಬಲ ತಂದಿದೆ ಎಂದು ಹೇಳಲಾಗುತ್ತಿದೆ. ಗಂಭೀರ್ ತಮ್ಮ ಹಳೆಯ ತಂಡಕ್ಕೆ ಮರಳುತ್ತಿರುವುದನ್ನು ಕಂಡು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಅವರಿಗಾಗಿ ಕಾಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಮ್ಮ ಪುನರಾಗಮನದ ಕುರಿತು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಂತೆ ಕ್ರೀಡಾಭಿಮಾನಿಗಳ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮದ ನಡುವೆ ಅವರು ಮಾತುಗಳು ಸರಿಯಾಗಿ ಕೇಳಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಜೈಕಾರ ಮೊಳಗಿತ್ತು. ಎಲ್ಲಾ ಕಡೆಯಿಂದ ಗಂಭೀರ್ ಅವರನ್ನು ಸುತ್ತುವರೆದಿದ್ದ ಅಭಿಮಾನಿಗಳು, 'ಬ್ಯಾಕ್​ ಟು ಹೋಮ್'​ ಎಂಬ ಘೋಷಣೆ ಕೂಗುವ ಮೂಲಕ ಅವರನ್ನು ಸ್ವಾಗತಿಸಿದ್ದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಗಂಭೀರ್ ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡದ (2022 ಮತ್ತು 2023) ಮಾರ್ಗದರ್ಶಕರಾಗಿದ್ದರು. ಈ ವೇಳೆ ಲಕ್ನೋ ಪ್ಲೇಆಫ್ ಕೂಡ ತಲುಪಿತ್ತು. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಅವರು ಕೆಕೆಆರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ.

ಕೆಕೆಆರ್ ತಂಡ: ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಶ್ರೇಯಸ್ ಅಯ್ಯರ್, ಫಿಲ್ ಸಾಲ್ಟ್, ಸುನೀಲ್ ನರೈನ್, ಸುಯಶ್ ಶರ್ಮಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ಎ ರಾಣಾ, ವರೀಬ್ ಚರೋನ, ವೈಬ್ ರಾಣಾ, ವೈಬ್ ರಾಣಾ ಭರತ್, ಚೇತನ್ ಸಕರಿಯಾ, ಮಿಚೆಲ್ ಸ್ಟಾರ್ಕ್, ಅಂಗ್‌ಕ್ರಿಶ್ ರಘುವಂಶಿ, ರಮಣದೀಪ್ ಸಿಂಗ್, ಶೆರ್ಫಾನೆ ರುದರ್‌ಫೋರ್ಡ್, ಮನೀಶ್ ಪಾಂಡೆ, ಮುಜೀಬ್ ಉರ್ ರೆಹಮಾನ್, ದುಷ್ಮಂತ ಚಮೀರಾ, ಸಾಕಿಬ್ ಹುಸೇನ್.

ಇದನ್ನೂ ಓದಿ: ತಾಲೀಮಿನ ವೇಳೆ ರಿಷಭ್ ಪಂತ್ ಬ್ಯಾಟಿಂಗ್ ವಿಂಟೇಜ್ ಶೈಲಿಯಲ್ಲಿತ್ತು: ಕೋಚ್​​ ಪ್ರವೀಣ್ ಆಮ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.