ETV Bharat / sports

ತಾಲೀಮಿನ ವೇಳೆ ರಿಷಭ್ ಪಂತ್ ಬ್ಯಾಟಿಂಗ್ ವಿಂಟೇಜ್ ಶೈಲಿಯಲ್ಲಿತ್ತು: ಕೋಚ್​​ ಪ್ರವೀಣ್ ಆಮ್ರೆ

author img

By ETV Bharat Karnataka Team

Published : Mar 14, 2024, 9:25 PM IST

rishabh-pant
ರಿಷಭ್ ಪಂತ್

ಕ್ರಿಕೆಟ್​ಗೆ​ ಕಮ್​ಬ್ಯಾಕ್​ ಮಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್​ ರಿಷಭ್​ ಪಂತ್, ತಂಡದೊಂದಿಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ವಿಶಾಖಪಟ್ಟಣಂ/ಬೆಂಗಳೂರು : 17ನೇ ಆವೃತ್ತಿಯ ಐಪಿಎಲ್ ಟೂರ್ನಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತಾಲೀಮು ಆರಂಭಿಸಿದೆ. ವಿಶಾಖಪಟ್ಟಣಂನ ಎಸಿಎ - ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ತಮ್ಮ ಮೊದಲ ತರಬೇತಿ ಶಿಬಿರದಲ್ಲಿ ಡೆಲ್ಲಿ ತಂಡದ ಆಟಗಾರರು ಭಾಗಿಯಾಗಿದ್ದಾರೆ. 14 ತಿಂಗಳುಗಳ ಬಳಿಕ ವೃತ್ತಿಪರ ಕ್ರಿಕೆಟ್‌ಗೆ ಪುನರಾಗಮನ ಮಾಡುತ್ತಿರುವ ಸ್ಟಾರ್ ವಿಕೆಟ್‌ ಕೀಪರ್ ಬ್ಯಾಟರ್ ರಿಷಭ್​ ಪಂತ್ ಕೂಡ ತಂಡದೊಂದಿಗೆ ತರಬೇತಿಯಲ್ಲಿ ತೊಡಗಿರುವುದು ವಿಶೇಷವಾಗಿತ್ತು.

ರಿಷಭ್ ಪಂತ್ ಅವರ ಬಹುನಿರೀಕ್ಷಿತ ಕಮ್ ಬ್ಯಾಕ್ ಕುರಿತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಮಾತನಾಡಿದ್ದಾರೆ. "ತರಬೇತಿಯ ಭಾಗವಾಗಿ ಹಾಗೂ ವೈಯುಕ್ತಿಕವಾಗಿ ರಿಷಭ್ ಬ್ಯಾಟಿಂಗ್ ಮಾಡುವುದನ್ನು ನೋಡಲು ನಿಜವಾಗಿಯೂ ಸಂತೋಷವಾಗಿದೆ. ಪಂತ್ ಬಹಳ ಸಮಯದ ನಂತರ ಬ್ಯಾಟಿಂಗ್ ಮಾಡುತ್ತಿರುವಂತೆಯೇ ಅನಿಸಲಿಲ್ಲ, ಅವರ ಬ್ಯಾಟ್ ವಿಂಟೇಜ್ ಶೈಲಿಯಲ್ಲಿ ಸ್ವಿಂಗ್ ಆಗುತ್ತಿತ್ತು. ಇದು ಅವರು ಎಷ್ಟು ಮಾನಸಿಕವಾಗಿ ಬಲಶಾಲಿ ಮತ್ತು ಮೈದಾನಕ್ಕಿಳಿಯುವ ತವಕ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ'' ಎಂದರು.

ಈ ಋತುವಿಗಾಗಿ ತಂಡದ ಮೊದಲ ತರಬೇತಿ ಅವಧಿಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಆಮ್ರೆ, "ನಾವು ಒಟ್ಟಿಗೆ ಸೇರಿ ತರಬೇತಿ ಅನುಭವವನ್ನು ಪಡೆಯಲು ಬಯಸಿದ್ದೇವೆ. ಹೊಸ ಆಟಗಾರರನ್ನು ಸ್ವಾಗತಿಸಲು ಮತ್ತು ತಂಡವಾಗಿ ಸೆಷನ್ ಅನ್ನು ಆನಂದಿಸಲು ಬಯಸಿದ್ದೇವೆ. ಅಭ್ಯಾಸ ಪಂದ್ಯಗಳನ್ನು ಸಹ ಆಡುತ್ತೇವೆ. ಆದ್ದರಿಂದ ಪಂದ್ಯಾವಳಿಗೆ ಮುನ್ನ ಸಕಲ ತಯಾರಿ ಹೊಂದಲು ನಮಗೆ ಸಹಾಯವಾಗಲಿದೆ'' ಎಂದು ಅವರು ತಿಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಎರಡು ತವರಿನ ಪಂದ್ಯಗಳನ್ನು ವಿಶಾಖಪಟ್ಟಣಂನಲ್ಲಿ‌ ಆಡಲಿದೆ. ತಂಡದ ಹೊಸ ತವರು‌ ಮೈದಾನದ ಕುರಿತು ಮಾತನಾಡಿದ ಆಮ್ರೆ, ''ವಿಶಾಖಪಟ್ಟಣಂ ಯಾವಾಗಲೂ ಹೆಚ್ಚು ರನ್‌ಗಳನ್ನು ನಿರೀಕ್ಷಿಸಬಹುದಾದ ಮೈದಾನವಾಗಿದೆ ಮತ್ತು ನಾವು ಬಯಸಿದ್ದು ಕೂಡ ಅದನ್ನೇ. ಕುತೂಹಲದಿಂದ ಎದುರು ನೋಡುತ್ತಿದ್ದೇವೆ'' ಎಂದರು.

ಐಪಿಎಲ್ 2024ರಲ್ಲಿ ಮಾರ್ಚ್ 23ರಂದು ಮೊಹಾಲಿಯ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ: ರಣಜಿ ಟ್ರೋಫಿ 2024: ಫೈನಲ್​ನಲ್ಲಿ ವಿದರ್ಭ ಎದುರು ಗೆದ್ದು, 42ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಮುಂಬೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.