ETV Bharat / sports

IND vs End: 4ನೇ ಟೆಸ್ಟ್‌ನಲ್ಲಿ 5 ವಿಕೆಟ್ ಜಯ, ತವರಿನಲ್ಲಿ ಸತತ 17ನೇ ಸರಣಿ ಗೆದ್ದ ಭಾರತ

author img

By ETV Bharat Karnataka Team

Published : Feb 26, 2024, 1:55 PM IST

Updated : Feb 26, 2024, 3:56 PM IST

ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​
ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​

ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​ನಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಮೂಲಕ 3-1 ಅಂತರದಿಂದ ಮುನ್ನಡೆ ಸಾಧಿಸಿದೆ.

ರಾಂಚಿ: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ ಕ್ರಿಕೆಟ್‌ ಸರಣಿಯ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 5 ವಿಕೆಟ್​ಗಳ ಗೆಲುವಿನೊಂದಿಗೆ ಭಾರತ, 5 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1ರಿಂದ ಕೈವಶ ಮಾಡಿಕೊಂಡಿದೆ.

4ನೇ ದಿನದಾಟದ ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದ ಭಾರತ ತಂಡವು, ನಂತರ ರವೀಂದ್ರ ಜಡೇಜಾ ಹಾಗೂ ಸರ್ಫರಾಜ್ ಖಾನ್ ಅವರ ಅವರ ವಿಕೆಟ್ ಅನ್ನು ತ್ವರಿತವಾಗಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಬ್ಯಾಟಿಂಗ್​ಗೆ ಬಂದ ಧ್ರುವ್ ಜುರೈಲ್ ಮತ್ತು ಶುಭಮನ್ ಗಿಲ್ ಅವರ ಜೊತೆಯಾಟ ಇನ್ನಿಂಗ್ಸ್​​ನ ಜವಾಬ್ದಾರಿ ವಹಿಸಿಕೊಂಡು ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಈ ಮೂಲಕ ಭಾರತ ತಂಡ ತವರಿನಲ್ಲಿ (ಎಲ್ಲ ಫಾರ್ಮಟ್​ನಲ್ಲಿ) ಸತತ 17ನೇ​ ಸರಣಿ ಗೆದ್ದು ಸಾಧನೆ ಮಾಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, ಮೊದಲ ಇನ್ನಿಂಗ್ಸ್​​ನಲ್ಲಿ 353 ರನ್ ಗಳಿಸಿತ್ತು. ಮೊದಲ ದಿನದ ಆಟದಲ್ಲೇ 5 ವಿಕೆಟ್‌ಗಳನ್ನು ಕಳೆದುಕೊಂಡರೂ ಬಳಿಕ ಅದ್ಭುತ ಪುನರಾಗಮನ ಮಾಡಿತು. ಜೋ ರೂಟ್ (122) ಅವರ ಅದ್ಭುತ ಶತಕ ಮತ್ತು ಒಲ್ಲಿ ರಾಬಿನ್ಸನ್ (58) ಅವರ ಅರ್ಧಶತಕದಿಂದಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 352 ರನ್ ಗಳಿಸಲು ಸಾಧ್ಯವಾಯಿತು. ಇವರ ಹೊರತಾಗಿ ಈ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಜಾಕ್ ಕ್ರಾಲಿ 42 ರನ್, ಜಾನಿ ಬೈರ್‌ಸ್ಟೋ 38 ರನ್, ಬೆನ್ ಫಾಕ್ಸ್ 47 ರನ್ ಮತ್ತು ಬೆನ್ ಸ್ಟೋಕ್ಸ್ 3 ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು. ಶೋಯೆಬ್ ಬಶೀರ್ ಮತ್ತು ಜೇಮ್ಸ್ ಆಂಡರ್ಸನ್ ಖಾತೆ ತೆರೆಯದೆ ಪೆವಿಲಿಯನ್​ಗೆ ಮರಳಿದರು. ಭಾರತದ ಪರ ಬೌಲಿಂಗ್​​​ನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಆಕಾಶದೀಪ್ 3, ಮೊಹಮ್ಮದ್ ಸಿರಾಜ್ 2, ಜಡೇಜಾ 4 ಹಾಗೂ ಅಶ್ವಿನ್ 1 ತಲಾ ವಿಕೆಟ್ ಪಡೆದರು.

ಇಂಗ್ಲೆಂಡ್ ನೀಡಿದ 353 ರನ್​​​ಗಳಿಗೆ ಉತ್ತರವಾಗಿ ಬ್ಯಾಟಿಂಗ್​ಗೆ ಇಳಿದ ಭಾರತ ತಂಡ, ಈ ಇನ್ನಿಂಗ್ಸ್​ನಲ್ಲಿ ಎಲ್ಲ ವಿಕೆಟ್​ ಕಷ್ಟಕ್ಕೆ 307 ರನ್ ಗಳಿಸಿ 47 ರನ್ ಹಿನ್ನಡೆ ಸಾಧಿಸಿತ್ತು. ಭಾರತದ ಪರ ಯಶಸ್ವಿ ಜೈಸ್ವಾಲ್ (73), ಧ್ರುವ್ ಜುರೈಲ್ (90), ಶುಭ್‌ಮನ್ ಗಿಲ್ (38) ಮತ್ತು ಕುಲದೀಪ್ ಯಾದವ್ (28) ಹೊರತಾಗಿ ಯಾರು ಹೆಚ್ಚು ಹೊತ್ತು ನಿಲ್ಲಲಿಲ್ಲ. ನಾಯಕ ರೋಹಿತ್ ಶರ್ಮಾ 2 ರನ್, ರವೀಂದ್ರ ಜಡೇಜಾ 12, ಅಶ್ವಿನ್ 1, ರಜತ್ ಪಾಟಿದಾರ್ 17 ರನ್ ಗಳಿಸಿ ಔಟಾದರೆ, ಚೊಚ್ಚಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಸಿಡಿಸಿದ್ದ ಸರ್ಫರಾಜ್ ಖಾನ್ 14, ಆಕಾಶದೀಪ್ 9 ರನ್ ಗಳಿಸಿ ತಮ್ಮ ಅಲ್ಪ ಕಾಣಿಕೆ ನೀಡಿದ್ದರು.

47 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್​ಗೆ ಇಳಿದ ಇಂಗ್ಲೆಂಡ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಸಂಪೂರ್ಣ ವಿಫಲವಾಯಿತು. ಭಾರತದ ಸ್ಪಿನ್ನರ್‌ಗಳ ಕಪಿಮುಷ್ಠಿಗೆ ಸಿಲುಕಿದ ಇಂಗ್ಲೆಂಡ್ ಹೊರಬರಲು ಸಾಧ್ಯವೇ ಆಗಿಲಿಲ್ಲ. ರನ್​ಗಳ ಕೋಟೆ ಕಟ್ಟುವ ಕನಸು ಇಟ್ಟುಕೊಂಡಿದ್ದ ತಂಡವನ್ನು ಇನ್ನಿಲ್ಲದಂತೆ ಕಾಡಿದರು. ಒಂದರ ಹಿಂದೆ ಒಂದರಂತೆ ಎಲ್ಲಾ ವಿಕೆಟ್​ ಕಳೆದುಕೊಂಡ ಇಂಗ್ಲೆಂಡ್ ತಂಡ, ಕೇವಲ 145 ರನ್‌ಗಳಿಗೆ ಶರಣಾಯಿತು. ಇಂಗ್ಲೆಂಡ್‌ ಪರ ಜಾಕ್ ಕ್ರಾಲಿ ಅವರ 60 ರನ್‌ಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್ 30 ರನ್‌ಗಳನ್ನು ತಲುಪಲು ಸಹ ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಜೋ ರೂಟ್ ಎರಡನೇ ಇನ್ನಿಂಗ್ಸ್​ನಲ್ಲಿ 11 ರನ್ ಗಳಿಸಿ ಔಟಾದರೆ, ಹೈದರಾಬಾದ್ ಟೆಸ್ಟ್​​ನಲ್ಲಿ 196 ರನ್ ಗಳಿಸಿ ಅಬ್ಬರಿಸಿದ್ದ ಒಲಿ ಪೋಪ್ ಇಲ್ಲಿ ಖಾತೆ ತೆರೆಯದೇ ತೆರಳಿದರು. ಉಳಿದಂತೆ ಬೆನ್ ಡಕೆಟ್ 15 ರನ್, ಜಾನಿ ಬೈರ್‌ಸ್ಟೋ 30, ಬೆನ್ ಸ್ಟೋಕ್ಸ್ 4 ಮತ್ತು ಬೆನ್ ಫಾಕ್ಸ್ 17 ರನ್ ಗಳಿಸಿ ಔಟಾದರು. ಭಾರತದ ಪರ ರವಿಚಂದ್ರನ್ ಅಶ್ವಿನ್ 5 ವಿಕೆಟ್, ಕುಲದೀಪ್ ಯಾದವ್ 4 ವಿಕೆಟ್ ಮತ್ತು ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು. ಭಾರತದ ಗೆಲುವಿಗೆ 192 ರನ್‌ಗಳ ಅಗತ್ಯವಿತ್ತು.

ಈ ಗುರಿ ಗುರಿ ಬೆನ್ನತ್ತಿದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿತ್ತು. ನಾಲ್ಕನೇ ದಿನ, ಜೈಸ್ವಾಲ್ 37 ರನ್‌ಗಳಿಗೆ ಔಟಾದರೆ ನಂತರ ಬಂದ ನಾಯಕ ರೋಹಿತ್ ಶರ್ಮಾ(55) ಮತ್ತು ಶುಭಮನ್ ಗಿಲ್(ಅಜೇಯ 52) ಅವರ ಅರ್ಧ ಶತಕಗಳ ನೆರವಿನಿಂದ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ರಜತ್ ಪಾಟಿದಾರ್ ಸತತ 6 ಇನ್ನಿಂಗ್ಸ್‌ಗಳಲ್ಲಿ ಒಂದು ರನ್ ಗಳಿಸದೆ ಔಟಾದರೆ, ಸರ್ಫರಾಜ್ ಖಾನ್ ಈ ಟೆಸ್ಟ್​ನ ಎರಡನೇ ಇನ್ನಿಂಗ್ಸ್‌ನಲ್ಲಿಯೂ ವಿಫಲರಾದರು. ಧ್ರುವ್ ಜುರೈಲ್ ಮತ್ತು ಶುಭಮನ್ ಗಿಲ್ ಅವರ ಜೊತೆಯಾಟ ಇನ್ನಿಂಗ್ಸ್​​ನ ಜವಾಬ್ದಾರಿ ವಹಿಸಿಕೊಂಡು ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್:

  • ಇಂಗ್ಲೆಂಡ್ ತಂಡ: ಮೊದಲ ಇನ್ನಿಂಗ್ಸ್​ 353-10 (104.5 Ov), ಎರಡನೇ ಇನ್ನಿಂಗ್ಸ್​ 145-10 (53.5 Ov)
  • ಭಾರತ ತಂಡ: ಮೊದಲ ಇನ್ನಿಂಗ್ಸ್ 307-10 (103.2 Ov), ಎರಡನೇ ಇನ್ನಿಂಗ್ಸ್​ 192-5 (61 Ov)

ಸತತ 17ನೇ ಸರಣಿ ಜಯದ ಗುರಿ: ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 3-1ರಿಂದ ಕೈವಶ ಮಾಡಿಕೊಂಡಿದೆ. ತವರಿನಲ್ಲಿ ಸತತ 17 ಟೆಸ್ಟ್​ ಸರಣಿ ಗೆದ್ದ ದಾಖಲೆಯನ್ನು ಬರೆಯಿತು. ಭಾರತ ತಂಡ 2012ರಲ್ಲಿ ಇಂಗ್ಲೆಂಡ್​ ವಿರುದ್ಧವೇ ಕೊನೆಯದಾಗಿ ತವರಿನಲ್ಲಿ ಟೆಸ್ಟ್​ ಸರಣಿ ಸೋತಿತ್ತು. ನಂತರದಲ್ಲಿ ಆಸ್ಟ್ರೆಲಿಯಾ ಮತ್ತು ವೆಸ್ಟ್​ ಇಂಡೀಸ್​ ವಿರುದ್ಧ ತಲಾ 3 ಬಾರಿ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ ವಿರುದ್ಧ ತಲಾ 2 ಬಾರಿ ಸರಣಿ ಜಯಿಸಿದೆ. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ವಿರುದ್ಧ ತಲಾ 1 ಬಾರಿ ಸರಣಿ ಗೆದ್ದಿದೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಇನ್​​ಸ್ಟಾ ಪೋಸ್ಟ್​​​ಗಳಿಗೆ 100 ಕೋಟಿ ಲೈಕ್ಸ್​: ಮೊದಲ ಭಾರತೀಯನೆಂಬ ದಾಖಲೆ

Last Updated :Feb 26, 2024, 3:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.