ETV Bharat / sports

''ಇಂಜೆಕ್ಷನ್ಸ್​​​ ಹಾಕಿಸಿಕೊಂಡೆ, ಪಾದದ ರಕ್ತ ರಿಮೂವ್​ ಮಾಡಿಸಿದೆ'': ವಿಶ್ವಕಪ್​ಗೆ ಮರಳಲು ಪಟ್ಟ ಸಾಹಸ ಬಿಚ್ಚಿಟ್ಟ ಹಾರ್ದಿಕ್

author img

By PTI

Published : Mar 17, 2024, 7:16 PM IST

pandya
ಹಾರ್ದಿಕ್

ಕಳೆದ ವಿಶ್ವಕಪ್ ಪಂದ್ಯಾವಳಿ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ಮತ್ತೆ ಐಪಿಎಲ್​ ಮೂಲಕ ಕ್ರಿಕೆಟ್​ಗೆ ಮರಳುತ್ತಿರುವ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ, ತಾವು ಅನುಭವಿಸಿದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ.

ಮುಂಬೈ: ವಿಶ್ವಕಪ್​ ಪಂದ್ಯಗಳಿಗೆ ಫಿಟ್‌ನೆಸ್ ಮರಳಿ ಪಡೆಯುವ ಹತಾಶೆಯಲ್ಲಿ ಅನೇಕ ಚುಚ್ಚುಮದ್ದುಗಳನ್ನು ತೆಗೆದುಕೊಂಡಿದ್ದಲ್ಲದೆ, ಪಾದದ ರಕ್ತ ಹೆಪ್ಪುಗಟ್ಟುವಿಕೆ ತಡೆಗೆ ತೀವ್ರ ಕ್ರಮ ಅನುಸರಿಸಿರುವುದು ಗಾಯ ಉಲ್ಬಣಗೊಳ್ಳುವಂತೆ ಮಾಡಿತು. ಅಲ್ಲದೆ, ಟೂರ್ನಿಯಿಂದ ಹೊರಗೆ ಕುಳಿತುಕೊಳ್ಳುವಂತಾಯಿತು ಎಂದು ಭಾರತ ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದ್ದಾರೆ.

ಸದ್ಯ 2024ರ ಐಪಿಎಲ್​ ಟೂರ್ನಿಗೆ ಮುಂಬೈ ತಂಡವನ್ನು ಮುನ್ನಡೆಸಲು ಸಜ್ಜಾಗುತ್ತಿರುವ ಹಾರ್ದಿಕ್​ ಸ್ಟಾರ್ ಸ್ಪೋರ್ಟ್ಸ್‌ ಜೊತೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಶ್ವಕಪ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಪಂದ್ಯದ ವೇಳೆ ತನ್ನ ಮೊದಲ ಓವರ್ ಬೌಲಿಂಗ್ ಮಾಡುವಾಗ ಪಾಂಡ್ಯ ಪಾದದ ಪಾದಕ್ಕೆ ಗಾಯಕ್ಕೀಡಾಗಿದ್ದರು. ತಂಡದ ಫಿಸಿಯೋ ನೆರವಿನೊಂದಿಗೆ ಮೈದಾನದಿಂದ ಹೊರಗೆ ತೆರಳಿದ ಅವರು ಪಂದ್ಯಾವಳಿಯಿಂದ ಹೊರಬಿದ್ದಿದ್ದರು.

"ನಾನು ನನ್ನ ಕಾಲಿನ ಮೂರು ಕಡೆ ಚುಚ್ಚುಮದ್ದನ್ನು ಹಾಕಿಸಿಕೊಂಡಿದ್ದಲ್ಲದೆ, ಊತದಿಂದಾಗಿ ಪಾದದ ರಕ್ತವನ್ನು ತೆಗೆಯಬೇಕಾಯಿತು. ವಿಶ್ವಕಪ್​​ನ ಇನ್ನುಳಿದ ಪಂದ್ಯಗಳಿಂದ ದೂರವಿರಲು ನಾನು ಬಯಸಿರಲಿಲ್ಲ. ಆಡಲು ಶೇಕಡಾ ಒಂದರಷ್ಟು ಅವಕಾಶವಿದ್ದರೂ ಸಹ ತಂಡಕ್ಕಾಗಿ ನನ್ನ ಅತ್ಯುತ್ತಮ ಕೊಡುಗೆ ನೀಡುವ ಪ್ರಯತ್ನ ಮಾಡುತ್ತೇನೆ' ಎಂದು ಪಾಂಡ್ಯ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

''ತವರಿನ ವಿಶ್ವಕಪ್‌ನಲ್ಲಿ ತಂಡದೊಂದಿಗೆ ಇರಲು ತೆಗೆದುಕೊಂಡ ರಿಸ್ಕ್ ಇದು. ಹೀಗೆ ಮಾಡುವುದರಿಂದ ವ್ಯತಿರಿಕ್ತ ಪರಿಣಾಮಗಳಾಗಿ, ದೀರ್ಘಕಾಲದವರೆಗೆ ನಾನು ಗಾಯಾಳುವಾಗಬಹುದು ಎಂಬುದು ನನಗೆ ತಿಳಿದಿತ್ತು. ಗಾಯದಿಂದ ಚೇತರಿಸಿಕೊಳ್ಳಲು ಮೂರು ತಿಂಗಳು ಬೇಕಾಯಿತು. ಆಗ ನನಗೆ ನಡೆಯಲೂ ಸಾಧ್ಯವಿರಲಿಲ್ಲ. ಆದರೆ ನಾನು ಆ ಸಮಯದಲ್ಲಿ ಓಡಲು ಪ್ರಯತ್ನಿಸುತ್ತಿದ್ದೆ" ಎಂದು ಪಾಂಡ್ಯ ನೆನಪಿಸಿಕೊಂಡರು.

ಪಾಂಡ್ಯ ಕೇವಲ ಐದು ದಿನಗಳಲ್ಲಿಯೇ ಗಾಯದಿಂದ ಹಿಂತಿರುಗುವ ವಿಶ್ವಾಸ ಹೊಂದಿದ್ದರು. ಆದರೆ, ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿತು. "ಗಾಯಗೊಂಡು ಮೈದಾನದಿಂದ ಹೊರಬಂದಾಗ, ನಾನು ಐದು ದಿನಗಳಲ್ಲಿಯೇ ಹಿಂತಿರುಗುತ್ತೇನೆ ಎಂದು ತಂಡಕ್ಕೆ ತಿಳಿಸಿದ್ದೆ. ಬಳಿಕ 10 ದಿನಗಳವರೆಗೆ ತಳ್ಳಲು ಪ್ರಯತ್ನಿಸಿದೆ, ಪುನರಾಗಮನಕ್ಕಾಗಿ ನೋವು ನಿವಾರಕಗಳನ್ನು ತೆಗೆದುಕೊಂಡೆ. ಆದರದು ವಿಲಕ್ಷಣವಾದ ಗಾಯವಾಗಿತ್ತು, ಕೆಲವರಿಗೆ ಮಾತ್ರ ಅದರ ಬಗ್ಗೆ ತಿಳಿದಿದೆ. ಬಳಿಕ ನನ್ನ ಗಾಯವು ಉಲ್ಬಣವಾಯಿತು. ಇದರಿಂದಾಗಿ ಹೆಚ್ಚಿನ ಸಮಯ ಅನಿವಾರ್ಯವಾಯಿತು. ಏಕೆಂದರೆ, ಅದು 25 ದಿನಗಳಲ್ಲೇ ಚೇತರಿಸಿಕೊಳ್ಳಬಹುದಾದ ಗಾಯವಾಗಿತ್ತು" ಎಂದು ಅವರು ಹೇಳಿದರು.

ವಿಶ್ವಕಪ್‌ನಲ್ಲಿ ಸಂಪೂರ್ಣವಾಗಿ ಆಡಲು ಆಗದಿರುವುದು ಯಾವಾಗಲೂ ನನ್ನ ಹೃದಯವನ್ನು ಭಾರವಾಗಿಸುತ್ತದೆ ಎಂದ ಪಾಂಡ್ಯ, "ದೇಶಕ್ಕಾಗಿ ಆಡುವುದು ನನಗೆ ದೊಡ್ಡ ಹೆಮ್ಮೆ. ತಂಡ ನನ್ನ ಮಗುವಿದ್ದಂತೆ, ತವರಿನಲ್ಲೇ ವಿಶ್ವಕಪ್ ಆಡುತ್ತಿರುವುದು ನನ್ನ ಮಗು. ಹಾಗಾಗಿ, ನಾನು ಯಾವಾಗಲೂ ತಂಡಕ್ಕಾಗಿ ಇರಲು ಬಯಸುತ್ತೇನೆ. ನಾವು ಗೆಲ್ಲಲಿ ಅಥವಾ ಸೋಲಲಿ, ನನ್ನ ಮಗುವಿನೊಂದಿಗೆ ಇರಬೇಕೆಂದು ನಾನು ಬಯಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ ಎಂಬುದು ಯಾವಾಗಲೂ ನನ್ನ ಹೃದಯವನ್ನು ಭಾರವಾಗಿಸುತ್ತದೆ" ಎಂದು ಪಾಂಡ್ಯ ವಿವರಿಸಿದರು.

''50 ಓವರ್‌ಗಳ ವಿಶ್ವಕಪ್‌ಗಾಗಿ ಒಂದು ವರ್ಷಕ್ಕಿಂತ ಮುಂಚಿತವಾಗಿಯೇ ತಯಾರಿ ಪ್ರಾರಂಭಿಸಿದ್ದೆ. ನಾನು ಆ ಮಾದರಿಯ ಕ್ರಿಕೆಟಿಗ, 2-3 ತಿಂಗಳ ಹಿಂದಷ್ಟೇ ಸಜ್ಜಾಗುವುದಿಲ್ಲ. ವಿಶ್ವಕಪ್‌ಗಾಗಿ ಒಂದು ವರ್ಷದ ಹಿಂದೆಯೇ ನನ್ನ ಪ್ರಯಾಣ ಶುರುಮಾಡಿದ್ದೆ. ಒಂದೂವರೆ ವರ್ಷದ ಹಿಂದೆಯೇ ದಿನಚರಿ ಬಗ್ಗೆ ಯೋಜಿಸಿದ್ದೆ, ಅದರಂತೆಯೇ ಸಜ್ಜಾಗಿದ್ದೆ'' ಎಂದರು.

2022ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಐಪಿಎಲ್ ಚಾಂಪಿಯನ್​ ಪಟ್ಟಕ್ಕೇರಿಸಿದ್ದ ಪಾಂಡ್ಯ ಎದುರು ಇದೀಗ ಮತ್ತೊಂದು ಪ್ರಮುಖ ಜವಾಬ್ದಾರಿ ಇದೆ. ಐಪಿಎಲ್ 2024 ರಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು ಮುನ್ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನನ್ನ ಪ್ರಯಾಣ ಬರೋಡಾದಿಂದ ಮುಂಬೈಗೆ ಬಂದಿದೆ. ಈ ನಗರವು ನನ್ನ ಬೆಳವಣಿಗೆಗೆ ನೆರವಾಗಿದ್ದು, ನನ್ನಲ್ಲಿ ನಮ್ರತೆ ಮತ್ತು ಸ್ಥೈರ್ಯವನ್ನು ಹುಟ್ಟುಹಾಕಿದೆ. ನಗರದಲ್ಲಿನ ಪ್ರೀತಿ ಮತ್ತು ಕಲಿಸಿದ ಪಾಠ ಅತ್ಯಮೂಲ್ಯ. ನನ್ನನ್ನು ಕ್ರಿಕೆಟಿಗನನ್ನಾಗಿ ರೂಪಿಸಿದೆ. ಮುಂಬೈ ಯಾವಾಗಲೂ ಸವಾಲಿನದಾಗಿದೆ. ಎರಡು ವರ್ಷಗಳ ಬಳಿಕ ಮತ್ತೆ ಐಪಿಎಲ್‌ನೊಂದಿಗೆ ನಾನು ನನ್ನ ಮನೆಗೆ ಮರಳಿದ್ದೇನೆ" ಅವರು ಹೇಳಿದರು.

2015ರ ಐಪಿಎಲ್ ನೆನಪಿಸಿಕೊಂಡರೆ, ಅದು ನನ್ನ ಜೀವನ ಬದಲಾಯಿಸಿದ ಅನುಭವವಾಗಿದೆ. ಆ ವರ್ಷವು ನನ್ನ ವೃತ್ತಿ ಜೀವನದಲ್ಲಿ ಪ್ರಮುಖವಾಗಿತ್ತು. ಅನುಭವಿ ಆಟಗಾರರ ನಡುವೆ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುವುದು ನನಗೆ ಮಹತ್ವದ ತಿರುವಾಗಿದೆ. ಅಂತಹ ದೊಡ್ಡ ವೇದಿಕೆಯಲ್ಲಿ ಪ್ರಮುಖ ಆಟಗಾರರೊಂದಿಗೆ ಆಡಲು ಅವಕಾಶ ಸಿಕ್ಕರೆ, ಜೀವನವೇ ಬದಲಾಗುತ್ತದೆ. ನಾಕೌಟ್ ಪಂದ್ಯಗಳಲ್ಲಿ ಹೆಚ್ಚಿನ ಕೊಡುಗೆ ನೀಡಿರುವುದು ಅದೃಷ್ಟಕರ. ಅಂತಹ ಪಂದ್ಯಗಳಲ್ಲಿ ಎರಡು ಪಂದ್ಯಪುರುಷ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದು ಅತಿವಾಸ್ತವಿಕವಾಗಿದೆ. ಅದು ನನಗೆ ಅದ್ಭುತ ಪ್ರಯಾಣಕ್ಕೆ ಸಿಕ್ಕ ಆರಂಭವಾಗಿತ್ತು'' ಎಂದು ಪಾಂಡ್ಯ ನೆನಪಿಸಿಕೊಂಡರು.

ಇದನ್ನೂ ಓದಿ: WPL Final: ಮಂಧಾನ ಪಡೆಗೆ ಲ್ಯಾನಿಂಗ್ ತಂಡದ ಸವಾಲು: ಚೊಚ್ಚಲ ಕಪ್​ ಗೆಲ್ಲುತ್ತಾ ಆರ್​ಸಿಬಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.