ETV Bharat / sports

'ಸತ್ಯವಂತರ ರಥವನ್ನು ಶ್ರೀ ಕೃಷ್ಣ ಮುನ್ನಡೆಸುತ್ತಾನೆ': ಕೆಕೆಆರ್​ ಮೆಂಟರ್​ ಗೌತಮ್ ಗಂಭೀರ್​ - Gautam Gambhir

author img

By ETV Bharat Karnataka Team

Published : May 27, 2024, 10:13 AM IST

ಸನ್‌ರೈಸರ್ಸ್ ಹೈದರಾಬಾದ್ ಮಣಿಸಿ ಕೋಲ್ಕತ್ತಾ ನೈಟ್ ರೈಡರ್ಸ್​ ಚಾಂಪಿಯನ್​ ಆಗುತ್ತಿದ್ದಂತೆ ತಂಡದ ಆಟಗಾರರು ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ಸಂಭ್ರಮಿಸಿದರು. ಈ ಬಗ್ಗೆ ಕೆಕೆಆರ್​ ಮೆಂಟರ್​ ಗೌತಮ್​ ಗಂಭೀರ್​ ಪ್ರಸಿದ್ಧ ಮಹಾಕಾವ್ಯ 'ಮಹಾಭಾರತ'ದ ಸ್ಪೂರ್ತಿದಾಯಕ ಉಲ್ಲೇಖವೊಂದನ್ನು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

gautam gambhir
ಕೆಕೆಆರ್ ತಂಡ,​ ಮೆಂಟರ್​ ಗಂಭೀರ್ (IANS)

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ 2024 ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರನೇ ಸಲ ಚಾಂಪಿಯನ್​ ಪಟ್ಟಕ್ಕೇರಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಕೆಕೆಆರ್​ ಆಟಗಾರರ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು.

ಖುಷಿಯಿಂದ ಕುಣಿದು ಕುಪ್ಪಳಿಸಿದ ಕೋಲ್ಕತ್ತಾ ಆಟಗಾರರು, ತರಬೇತುದಾರರು ಇತರ ಸಿಬ್ಬಂದಿ ಪರಸ್ಪರ ಆಟಗಾರರನ್ನು ಎತ್ತಿ ಸಂಭ್ರಮಿಸಿದರು. ಈ ಬಾರಿ ಮೆಂಟರ್​ ಆಗಿ ನೈಟ್​​ ರೈಡರ್ಸ್​ ತಂಡಕ್ಕೆ ಮರಳಿದ್ದ ಮಾಜಿ ಆಟಗಾರ ಗೌತಮ್​ ಗಂಭೀರ್​ ಕೂಡ ಗೆಲುವಿನ ಅಲೆಯಲ್ಲಿ ತೇಲಿದರು. ಸಹ ಆಟಗಾರ ವೆಸ್ಟ್​ ಇಂಡೀಸ್​ನ ಸುನೀಲ್​ ನರೈನ್​ ಅವರನ್ನು ಗಂಭೀರ್ ಎತ್ತಿಕೊಂಡರಲ್ಲದೆ, ಬಳಿಕ ನರೈನ್​ ಕೂಡ ತಮ್ಮ ಮೆಂಟರ್​ ಅನ್ನು ಬಿಗಿದಪ್ಪಿ ಎತ್ತಿಕೊಂಡು ಸಂತಸಪಟ್ಟರು.

ಆಟದ ವೇಳೆ ಹೆಚ್ಚು ಖುಷಿ ವ್ಯಕ್ತಪಡಿಸದೆ, ಸದಾ ಗಂಭೀರ ಸ್ವಭಾವದಲ್ಲೇ ಕಂಡುಬರುವ ಇಬ್ಬರೂ ಆಟಗಾರರ ಈ ಅಪರೂಪದ ಸಂಭ್ರಮಾಚರಣೆ ಎಲ್ಲರ ಗಮನ ಸೆಳೆಯಿತು. ಅಲ್ಲದೆ, ಕ್ರಿಕೆಟ್​ ವಲಯದಲ್ಲಿಯೂ ಕೂಡ ಗಂಭೀರ್​ ಹಾಗೂ ಕೋಲ್ಕತ್ತಾ ಆಟಗಾರರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಗೌತಮ್​ ಎಕ್ಸ್​ ಪೋಸ್ಟ್: ಚಾಂಪಿಯನ್ ತಂಡದ ಸಂಭ್ರಮಾಚರಣೆ ಬೆನ್ನಲ್ಲೇ ಗಂಭೀರ್​ ಮಾಡಿರುವ ಎಕ್ಸ್​ ಪೋಸ್ಟ್​ವೊಂದು ಸಾಕಷ್ಟು ವೈರಲ್​ ಆಗುತ್ತಿದೆ. 'ಯಾರ ಆಲೋಚನೆಗಳು ಹಾಗೂ ಕೆಲಸಗಳು ಸತ್ಯದಿಂದ ಕೂಡಿರುತ್ತವೆಯೋ ಅಂಥವರ ರಥವನ್ನು ಶ್ರೀ ಕೃಷ್ಣ ಇಂದಿಗೂ ಮುನ್ನಡೆಸುತ್ತಾನೆ' ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾವಿರಾರು ಜನರು ಲೈಕ್​, ರೀಪೋಸ್ಟ್​ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಚೆನ್ನೈನಲ್ಲಿ ಭಾನುವಾರ ಬಲಿಷ್ಠ ಬ್ಯಾಟಿಂಗ್​ ಪಡೆ ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್​ಗೆ ಶಾಕ್​ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಶಸ್ತಿ ಗೆದ್ದು ಬೀಗಿತು. ಇದರೊಂದಿಗೆ ಮೂರನೇ ಬಾರಿಗೆ ನೈಟ್ ರೈಡರ್ಸ್ ತಂಡ ಚಾಂಪಿಯನ್​ ಆಗಿದೆ. ಈ ಹಿಂದೆ 2012 ಹಾಗೂ 2014ರಲ್ಲಿ ಚಾಂಪಿಯನ್​ ಆಗಿದ್ದಾಗ ಗೌತಮ್​ ಗಂಭೀರ್ ಮುಂದಾಳತ್ವ ವಹಿಸಿದ್ದರು. ಈ ಸಲ ಮೆಂಟರ್​ ಆಗಿರುವ ಗಂಭೀರ್​ ತಂಡ 10 ವರ್ಷಗಳ ಬಳಿಕ ಮತ್ತೊಮ್ಮೆ ಸಾಧನೆ ಮಾಡಿರುವುದು ವಿಶೇಷ.

ಗಂಭೀರ್​ ಸಂದೇಶ: ಗೆಲುವಿನ ಬಳಿಕ ಕೋಲ್ಕತ್ತಾ ಆಟಗಾರ ನಿತೀಶ್ ರಾಣಾ ಮೆಂಟರ್​ ಗಂಭೀರ್​ ಕುರಿತಾದ ವಿಚಾರವೊಂದನ್ನು ಹಂಚಿಕೊಂಡರು. ಕೆಕೆಆರ್​ ಮಾರ್ಗದರ್ಶಕರಾಗಿ ಘೋಷಿಸಲ್ಪಟ್ಟ ಬಳಿಕ ಗಂಭೀರ್​​ ತಮಗೆ ನೀಡಿದ ಪ್ರೇರಣಾದಾಯಕ ಪ್ರತಿಕ್ರಿಯೆ ಕುರಿತಂತೆ ಹೇಳಿಕೊಂಡರು. ಗಂಭೀರ್ (GG ಭಯ್ಯಾ) ಅವರನ್ನು ತಂಡದ ಮಾರ್ಗದರ್ಶಕರಾಗಿ ಆಯ್ಕೆ ಮಾಡಿದಾಗ ಬಹಳ ಸಂತಸಗೊಂಡ ನಾನು ಅವರಿಗೆ ದೀರ್ಘ ಸಂದೇಶವೊಂದನ್ನು ಕಳುಹಿಸಿದ್ದೆ. ಅದನ್ನೀಗ ಹೇಳಿಕೊಳ್ಳಲು ಬಯಸುತ್ತೇನೆ. ನನ್ನ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದ ಗಂಭೀರ್​, 'ಧನ್ಯವಾದ, ಆದರೆ ನಾವು ವೇದಿಕೆ ಮೇಲೆ ಪ್ರಶಸ್ತಿಯನ್ನು ಎತ್ತಿ ಹಿಡಿದು ನಿಂತರೆ ಮಾತ್ರ ನನಗೆ ಸಂತಸವಾಗುತ್ತದೆ' ಎಂದಿದ್ದರು. ಇಂದು ಅವರು ಹೇಳಿದ ಆ ದಿನ ಬಂದಿದೆ. ಆ ಸಂದೇಶವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಸಂಭ್ರಮಾಚರಣೆ ವೇಳೆ ನೆನಪಿಸಿಕೊಂಡರು.

ಇದೇ ವೇಳೆ ಆಲ್​​ರೌಂಡರ್​ ಸುನೀಲ್​ ನರೈನ್​ ಕೂಡ ಗಂಭೀರ್​ ಅವರನ್ನು ಹೊಗಳಿದರು. "ಮೈದಾನಕ್ಕಿಳಿದು ನನ್ನ ಆಟ ತೋರ್ಪಡಿಸಲು ಹಾಗೂ ತಂಡಕ್ಕೆ ಭರ್ಜರಿ ಆರಂಭ ನೀಡುವಲ್ಲಿ ಗಂಭೀರ್​ ಅವರ ಬೆಂಬಲ ಸಾಕಷ್ಟಿದೆ. ಅದು ಅತ್ಯಮೂಲ್ಯವಾದುದು'' ಎಂದು ಹೇಳಿಕೊಂಡರು.

ಇದನ್ನೂ ಓದಿ: ಐಪಿಎಲ್​ ಚಾಂಪಿಯನ್ಸ್​ಗೆ ₹20 ಕೋಟಿ ಬಹುಮಾನ: ವಿರಾಟ್​ಗೆ ಆರೆಂಜ್​ ಕ್ಯಾಪ್​: ಯಾರಿಗೆಲ್ಲ ಪ್ರಶಸ್ತಿ? - IPL 2024 Award Winners

ETV Bharat Logo

Copyright © 2024 Ushodaya Enterprises Pvt. Ltd., All Rights Reserved.