ETV Bharat / sports

ಮೈದಾನದಲ್ಲಿ ಥಲಾ ಆಟಕ್ಕೆ ಅಭಿಮಾನಿಗಳು ಕಿಡಿ, ಪಂಜಾಬ್​ ತಂಡದಿಂದಲೂ ವ್ಯಂಗ್ಯ - MS DHONI

author img

By ETV Bharat Karnataka Team

Published : May 2, 2024, 6:11 PM IST

Updated : May 2, 2024, 7:29 PM IST

ಮೈದಾನದಲ್ಲಿ ಥಾಲಾ ಆಟಕ್ಕೆ ಅಭಿಮಾನಿಗಳು ಕಿಡಿಕಿಡಿ
ಮೈದಾನದಲ್ಲಿ ಥಾಲಾ ಆಟಕ್ಕೆ ಅಭಿಮಾನಿಗಳು ಕಿಡಿಕಿಡಿ (ETV Bharat)

ಪಂಜಾಬ್​ ವಿರುದ್ಧ ಚೆನ್ನೈ ಸೋತ ಬಳಿಕ ಎಂಎಸ್ ಧೋನಿ ಆಟಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆನ್ನೈ: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಐಪಿಎಲ್​ನಲ್ಲಿ ದೊಡ್ಡ ಅಭಿದಾನ ನೀಡುತ್ತಿಲ್ಲವಾದರೂ, ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಒಂದೆರಡು ಪಂದ್ಯಗಳಲ್ಲಿ ಮಾತ್ರ ಅಲ್ಪ ಕಾಣಿಕೆ ನೀಡಿದ್ದಾರೆ. ಈ ಮಧ್ಯೆ, ಬುಧವಾರ ರಾತ್ರಿ ಪಂಜಾಬ್​ ಕಿಂಗ್ಸ್ ಎದುರಿನ ಪಂದ್ಯದಲ್ಲಿನ ಧೋನಿ ನಡೆ ಭಾರೀ ಟೀಕೆಗೆ ಗುರಿಯಾಗಿದೆ.

ಚೆನ್ನೈ ತಂಡದ ನಾಯಕರಾಗಿ ಐದು ಐಪಿಎಲ್​ ಟ್ರೋಫಿಗಳನ್ನು ತಂದುಕೊಟ್ಟಿರುವ ಧೋನಿ, ಸಿಎಸ್​ಕೆ ಅಭಿಮಾನಿಗಳಿಗೆ ಈಗಲೂ ಅಚ್ಚುಮೆಚ್ಚಿನ ಆಟಗಾರ. ಅವರ ಬ್ಯಾಟಿಂಗ್​ಗಾಗಿ ಕಾಯುತ್ತಿರುತ್ತಾರೆ. ಈವರೆಗೂ ದೊಡ್ಡ ಇನಿಂಗ್ಸ್​ ಕಟ್ಟದೇ ಇದ್ದರೂ, ಕೆಲ ಸಿಕ್ಸರ್​, ಬೌಂಡರಿ ಬಾರಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಂತಿಪ್ಪ, ಧೋನಿ ಸ್ವಾರ್ಥಿ (Selfish) ಕ್ರಿಕೆಟರ್ ಎಂಬ ಆಪಾದನೆಗೆ ಗುರಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಧೋನಿಯನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಗುತ್ತಿದೆ. ಅವರು ತಮ್ಮನ್ನು ಜಗತ್ತಿನ ಶ್ರೇಷ್ಠ ಫಿನಿಶರ್​ ಎಂದು ಭಾವಿಸಿದ್ದಾರೆ. ಈವರೆಗೆ ತಂಡಕ್ಕೆ ಯಾವ ಕೊಡುಗೆಯೂ ಸಿಕ್ಕಿಲ್ಲ. ಉಳಿದ ಆಟಗಾರರಿಗೆ ಅವಕಾಶ ನೀಡುತ್ತಿಲ್ಲ. ಪಂಜಾಬ್​ ಪಂದ್ಯದಲ್ಲಿ ಡೇರಿಯಲ್​ ಮಿಚೆಲ್​ರನ್ನು ನಡೆಸಿಕೊಂಡಿದ್ದು ಅತ್ಯಂತ ಕೆಟ್ಟ ಮತ್ತು ಅವಮಾನಕರ ಎಂದು ನೆಟ್ಟಿಗರು ಜರಿಯುತ್ತಿದ್ದಾರೆ.

ಪಂಜಾಬ್ ತಂಡದಿಂದಲೂ ಹಾಸ್ಯ: ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಐಪಿಎಲ್​ನಲ್ಲಿ ಸತತ ಐದನೇ ಗೆಲುವು ದಾಖಲಿಸಿದ ಪಂಜಾಬ್​ ಕಿಂಗ್ಸ್​ ತನ್ನ ಎಕ್ಸ್​ ಖಾತೆಯಲ್ಲಿ ಧೋನಿಯನ್ನು ಹಾಸ್ಯ ಮಾಡಿದೆ. ಧೋನಿ ಔಟಾದ ಬಳಿಕ ಕಿಂಗ್ಸ್‌ನ ಅಧಿಕೃತ ಖಾತೆಯಲ್ಲಿ "ಧೋನಿ ಇಂದು ನಮ್ಮ 7 ನೇ ವಿಕೆಟ್! ಥಲಾ ಫಾರ್​ ಎ ರೀಸನ್​" ಎಂದು ಬರೆದುಕೊಂಡಿದೆ. ಜೊತೆಗೆ ತಂಡ ಪಾಯಿಂಟ್​ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಇರುವುದನ್ನು ವಿಶೇಷವಾಗಿ ಪ್ರಕಟಿಸಿದೆ.

ಪಂದ್ಯದಲ್ಲಿ ಧೋನಿ ಮಾಡಿದ್ದೇನು?: ಪಂಜಾಬ್ ಕಿಂಗ್ಸ್ ವಿರುದ್ಧದ ಇನಿಂಗ್ಸ್‌ನ ಕೊನೆಯ ಓವರ್​ನಲ್ಲಿ ಎಂಎಸ್ ಧೋನಿ ಬ್ಯಾಟ್​ ಮಾಡುತ್ತಿದ್ದಾಗ ಎಡಗೈ ವೇಗಿ ಅರ್ಷ್‌ದೀಪ್ ಸಿಂಗ್ ಅವರ ಎಸೆತವನ್ನು ಎದುರಿಸಿದರು. ಚೆಂಡು ಲಾಂಗ್​ ಆನ್​ನತ್ತ ಹಾರಿತು. ಇನ್ನೊಂದು ತುದಿಯಲ್ಲಿದ್ದ ಡೇರಿಯಲ್​ ಮಿಚೆಲ್​ ಒಂಟಿ ರನ್​ಗಾಗಿ ಓಡಿದರು. ಧೋನಿ ಕ್ರೀಸ್​ ದಾಟಿ ಮುಂದೆ ಬಂದಿದ್ದರು. ತಕ್ಷಣವೇ ಧೋನಿ, ಮಿಚೆಲ್​ರನ್ನು ವಾಪಸ್​ ತೆರಳುವಂತೆ ಕಿರುಚಿ ಸೂಚಿಸಿದರು. ಆದರೆ, ಅದಾಗಲೇ ಮಿಚೆಲ್​ ಕ್ರೀಸ್​ ಮುಟ್ಟಿದ್ದರು. ಆದರೂ, ವೇಗವಾಗಿ ವಾಪಸ್​ ಆಗಿ ರನೌಟ್​ನಿಂದ ತಪ್ಪಿಸಿಕೊಂಡರು. ಲೆಕ್ಕದಲ್ಲಿ ಅದು 2 ರನ್​ ಓಟವಾಗಿತ್ತು.

ತಾವೇ ಇನಿಂಗ್ಸ್ ಮುಗಿಸಬೇಕು ಎಂದುಕೊಂಡಿದ್ದ ಧೋನಿ, ಮಿಚೆಲ್​ರಿಗೆ ಬ್ಯಾಟ್ ನೀಡದೆ ವಾಪಸ್​ ಕಳುಹಿಸಿದರು. ಇದು ಕ್ರಿಕೆಟ್​ಗೆ ಶೋಭೆಯಲ್ಲ. ಮಿಚೆಲ್​ ಕೂಡ ಅದ್ಭುತ ಫಿನಿಶರ್​. ತಾವು ಗುರುತಿಸಿಕೊಳ್ಳಲು ಮಿಚೆಲ್​ರನ್ನು ಅವಮಾನಿಸಿದರು ಎಂಬುದು ನೆಟ್ಟಿಗರ ಆರೋಪ. ಇದನ್ನೇ ವಿರಾಟ್​ ಕೊಹ್ಲಿ ಅಥವಾ ರೋಹಿತ್​ ಶರ್ಮಾ ಮಾಡಿದ್ದರೆ ಟೀಕೆಯ ಸುರಿಮಳೆಯೇ ಆಗುತ್ತಿತ್ತು ಎಂದು ಅಂಪೈರ್​ ರಿಚರ್ಡ್​ ಕೆಟಲ್​​ಬರೋ ಅವರು ಹೇಳಿದ್ದಾರೆ.

ಇದನ್ನೂ ಓದಿ: IPL: ಚೆಪಾಕ್​ನಲ್ಲಿ ಚೆನ್ನೈಗೆ ಮತ್ತೊಂದು ಸೋಲು: ಪಂಜಾಬ್​ ಕಿಂಗ್ಸ್​ ಪ್ಲೇ ಆಫ್​ ಕನಸು ಜೀವಂತ - PBKS Beat CSK

Last Updated :May 2, 2024, 7:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.