ETV Bharat / sports

'ದೇಶಿ ಪಂದ್ಯಾವಳಿಗಳು ರಾಷ್ಟ್ರೀಯ ಆಟಗಾರರಿಗೆ ಮೂಲಭೂತ ಅಂಶಗಳನ್ನು ಮರುಶೋಧಿಸಲು ಅವಕಾಶ ನೀಡುತ್ತದೆ'

author img

By PTI

Published : Mar 6, 2024, 9:05 AM IST

Domestic tournaments  Sachin Tendulkar  BCCI  Ishan Kishan  Shreyas Iyer
ದೇಶೀಯ ಪಂದ್ಯಾವಳಿಗಳು ರಾಷ್ಟ್ರೀಯ ಆಟಗಾರರಿಗೆ ಮೂಲಭೂತ ಅಂಶಗಳನ್ನು ಮರುಶೋಧಿಸಲು ಅವಕಾಶ ನೀಡುತ್ತವೆ: ತೆಂಡೂಲ್ಕರ್

ದೇಶೀಯ ಪಂದ್ಯಾವಳಿಗಳು ರಾಷ್ಟ್ರೀಯ ಆಟಗಾರರಿಗೆ ಮೂಲಭೂತ ಅಂಶಗಳನ್ನು ಮರುಶೋಧಿಸಲು ಅವಕಾಶ ನೀಡುತ್ತವೆ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟರು.

ಮುಂಬೈ(ಮಹಾರಾಷ್ಟ್ರ): ''ರಣಜಿ ಟ್ರೋಫಿಯಲ್ಲಿ ಆಡುವುದು ರಾಷ್ಟ್ರೀಯ ತಂಡದ ಆಟಗಾರರಿಗೆ ತಮ್ಮ ಮೂಲಭೂತ ಅಂಶಗಳನ್ನು ಮರುಶೋಧಿಸಲು ಅವಕಾಶವನ್ನು ಒದಗಿಸುತ್ತದೆ. ಇದರ ಜೊತೆಗೆ ದೇಶೀಯ ಪಂದ್ಯಾವಳಿಯ ಮಟ್ಟವನ್ನೂ ಇದು ಉನ್ನತೀಕರಿಸುತ್ತದೆ'' ಎಂದು ಭಾರತದ ಕ್ರಿಕೆಟ್​ ದಂತಕಥೆ ಸಚಿನ್ ತೆಂಡೂಲ್ಕರ್ ಮಂಗಳವಾರ ಹೇಳಿದ್ದಾರೆ.

ಬಿಸಿಸಿಐ ಇತ್ತೀಚೆಗೆ, ತನ್ನ ಕೇಂದ್ರೀಯ ಒಪ್ಪಂದದ ಆಟಗಾರರು ರಾಷ್ಟ್ರೀಯ ಕರ್ತವ್ಯದಲ್ಲಿ ಅಥವಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಇಲ್ಲದೇ ಇದ್ದರೆ ದೇಶೀಯ ಕೆಂಪು-ಬಾಲ್ ಕ್ರಿಕೆಟ್ ಆಡುವುದನ್ನು ಕಡ್ಡಾಯಗೊಳಿಸಿದೆ. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ತಮ್ಮ ರಾಜ್ಯ ತಂಡದ ರಣಜಿ ಟ್ರೋಫಿ ಪಂದ್ಯಗಳನ್ನು ತಪ್ಪಿಸಿಕೊಂಡ ನಂತರ ಬಿಸಿಸಿಐ ತನ್ನ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಇಬ್ಬರನ್ನೂ ಹೊರಗಿಟ್ಟಿತ್ತು.

ಆಟಗಾರರಿಗೆ ತೆಂಡೂಲ್ಕರ್ ಸಲಹೆ: "ಭಾರತದ ಆಟಗಾರರು ತಮ್ಮ ದೇಶೀಯ ತಂಡಗಳಿಗೆ ತಿರುಗಿದಾಗ ಅವರ ಆಟದ ಗುಣಮಟ್ಟ ಹೆಚ್ಚುತ್ತದೆ. ಕೆಲವೊಮ್ಮೆ ಹೊಸ ಪ್ರತಿಭೆಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಇದು ರಾಷ್ಟ್ರೀಯ ಆಟಗಾರರಿಗೆ ಮೂಲಭೂತ ಅಂಶಗಳನ್ನು ಮರುಶೋಧಿಸಲು ಅವಕಾಶ ಒದಗಿಸುತ್ತದೆ" ಎಂದು ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣ ವೇದಿಕೆ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ. "ನನ್ನ ವೃತ್ತಿಜೀವನದುದ್ದಕ್ಕೂ ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಮುಂಬೈಗಾಗಿ ಆಡಲು ಉತ್ಸಾಹ ಹೊಂದಿದ್ದೆ" ಎಂದು ಕ್ರಿಕೆಟ್​ ನೆನಪುಗಳನ್ನು ಸಚಿನ್ ಮೆಲುಕು ಹಾಕಿದ್ದಾರೆ.

25ರ ಹರೆಯದ ಇಶಾನ್ ಕಿಶನ್ ವೈಯಕ್ತಿಕ ಕಾರಣಗಳಿಂದಾಗಿ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ತೊರೆದ ನಂತರ ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿದ್ದರೂ ರಣಜಿ ಟ್ರೋಫಿಯಲ್ಲಿ ತಂಡದ ಯಾವುದೇ ಪಂದ್ಯಗಳಲ್ಲೂ ಜಾರ್ಖಂಡ್‌ ಪರವಾಗಿ ಆಡಲಿಲ್ಲ. ಇದರ ಬದಲಿಗೆ ಅವರು ತಮ್ಮ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ಗಾಗಿ ಐಪಿಎಲ್‌ಗೆ ತಯಾರಿ ಮಾಡುವತ್ತ ಗಮನಹರಿಸಿದರು.

ಮತ್ತೊಂದೆಡೆ, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ನಂತರ ಭಾರತೀಯ ತಂಡದಿಂದ ಹೊರಗಿಡಲ್ಪಟ್ಟ ನಂತರ ಶ್ರೇಯಸ್​ ಅಯ್ಯರ್, ಬರೋಡಾ ವಿರುದ್ಧ ಮುಂಬೈನ ರಣಜಿ ಕ್ವಾರ್ಟರ್‌ಫೈನಲ್‌ ಮ್ಯಾಚ್​ನಲ್ಲಿ ಆಡಲಿಲ್ಲ. ಆದರೆ, ಅಯ್ಯರ್ ತಮಿಳುನಾಡು ವಿರುದ್ಧದ ಮುಂಬೈನ ರಣಜಿ ಸೆಮಿಫೈನಲ್​ ಆಡಿದರು.

''ಭಾರತದ ಸ್ಟಾರ್ ಆಟಗಾರರು ತಮ್ಮ ರಾಜ್ಯ ತಂಡಗಳಿಗಾಗಿ ಆಡುವುದರಿಂದ ದೇಶೀಯ ಪಂದ್ಯಾವಳಿಗಳಲ್ಲಿ ಹೆಚ್ಚಿನ ಆಸಕ್ತಿ ಉಂಟುಮಾಡುತ್ತದೆ. ದೇಶೀಯ ಪಂದ್ಯಾವಳಿಗಳಲ್ಲಿ ಉನ್ನತ ದರ್ಜೆಯ ಆಟಗಾರರು ಭಾಗವಹಿಸುವುದರೊಂದಿಗೆ, ಕೆಲವು ಸಮಯದ ಅವಧಿಯಲ್ಲಿ, ಅಭಿಮಾನಿಗಳು ತಮ್ಮ ದೇಶೀಯ ತಂಡಗಳನ್ನು ಅನುಸರಿಸಲು ಮತ್ತು ಬೆಂಬಲಿಸಲು ಪ್ರಾರಂಭಿಸುತ್ತಾರೆ. ಬಿಸಿಸಿಐ ದೇಶೀಯ ಕ್ರಿಕೆಟ್‌ಗೆ ಸಮಾನ ಆದ್ಯತೆ ನೀಡುವುದು ಅದ್ಭುತವೆನಿಸುತ್ತದೆ" ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.

ರಣಜಿಯಲ್ಲಿ ಮುಂಬೈ ತಂಡ 48ನೇ ಸಲ ಫೈನಲ್‌ಗೆ ಅರ್ಹತೆ ಪಡೆದಿದೆ. 41 ಬಾರಿಯ ಚಾಂಪಿಯನ್‌ ಆಗಿರುವ ಮುಂಬೈ ರೋಚಕ ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶವನ್ನು ಎದುರಿಸಲಿದೆ.

ಇದನ್ನೂ ಓದಿ: WPL: ಲ್ಯಾನಿಂಗ್, ಜೆಮಿಮಾ ಅರ್ಧಶತಕ; ಮುಂಬೈ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.