ETV Bharat / sports

ಭಾರತ-ಪಾಕ್​ ನಡುವೆ ದ್ವಿಪಕ್ಷೀಯ ಸರಣಿ ಆಯೋಜಿಸಲು ಆಸಕ್ತಿ ತೋರಿದ ಆಸ್ಟ್ರೇಲಿಯಾ - INDIA vs PAKISTAN

author img

By ETV Bharat Karnataka Team

Published : Mar 27, 2024, 6:12 PM IST

Updated : Mar 27, 2024, 6:20 PM IST

ಭಾರತ- ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ
ಭಾರತ- ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ

ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯನ್ನು ತನ್ನ ನೆಲದಲ್ಲಿ ಆಯೋಜಿಸಲು ಕ್ರಿಕೆಟ್​ ಆಸ್ಟ್ರೇಲಿಯಾ ಆಸಕ್ತಿ ತೋರಿಸಿದೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ಪಂದ್ಯ ಎಂದರೆ ಅಲ್ಲೊಂದು ರೋಚಕತೆ, ಸ್ಪರ್ಧೆ, ಭಾವನೆಗಳು ಇರುತ್ತವೆ. ಇತ್ತಂಡಗಳ ನಡುವಿನ ಸರಣಿ ನಡೆದು 14 ವರ್ಷಗಳು ಕಳೆದಿವೆ. ಮತ್ತೆ ಯಾವಾಗ ಆಯೋಜನೆಯಾಗಲಿದೆ ಎಂದು ಕ್ರಿಕೆಟ್​ಪ್ರಿಯರು ಕಾಯುತ್ತಿದ್ದಾರೆ. ಇದಕ್ಕೆ ಅವಕಾಶ ಸಿಕ್ಕರೆ ನಾವೇ ಪೌರೋಹಿತ್ಯ ವಹಿಸುತ್ತೇವೆ ಎಂದು ವಿಶ್ವದ ಕ್ರಿಕೆಟ್​ ಮಂಡಳಿಗಳು ಚಾತಕ ಪಕ್ಷಿಯಂತೆ ಕಾಯುತ್ತಿವೆ. ಇದೀಗ ಆಸ್ಟ್ರೇಲಿಯಾ ತಾನು ಉಭಯ ರಾಷ್ಟ್ರಗಳ ನಡುವಿನ ಸರಣಿ ಆಯೋಜನೆಗೆ ಸಿದ್ಧ ಎಂದಿದೆ.

ಹೌದು, ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯನ್ನು ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆಸಕ್ತಿ ವ್ಯಕ್ತಪಡಿಸಿದೆ. ಆದರೆ, ಬಿಸಿಸಿಐ ಮತ್ತು ಪಿಸಿಬಿ ಉಭಯ ತಂಡಗಳ ನಡುವಿನ ಪಂದ್ಯಗಳಿಗೆ ಒಪ್ಪಿಗೆ ನೀಡಿದರೆ ಮಾತ್ರ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾಗಿ ವರದಿಯಾಗಿದೆ.

ಮುನ್ನೆಲೆಗೆ ಬಂದಿದ್ಯಾಕೆ?: ಭಾರತದ ಜೊತೆಗೆ ಆಸ್ಟ್ರೇಲಿಯಾ ನವೆಂಬರ್​ 22 ರಿಂದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ತನ್ನ ತವರಿನಲ್ಲಿ ಆಡಲಿದೆ. ಇದಕ್ಕೂ ಮೊದಲು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲಿದೆ. ಎರಡೂ ತಂಡಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವುದರಿಂದ ಇತ್ತಂಡಗಳ ನಡುವಿನ ಸರಣಿಯನ್ನು ಇಲ್ಲಿಯೇ ಆಯೋಜಿಸಲು ತಾನು ಉತ್ಸುಕವಾಗಿದ್ದಾಗಿ ಕ್ರಿಕೆಟ್​ ಆಸ್ಟ್ರೇಲಿಯಾ ಹೇಳಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಮಾಧ್ಯಮ ವರದಿಯ ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನಾವು ಆಯೋಜಿಸಲು ಬಯಸುತ್ತೇವೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ವ್ಯವಸ್ಥಾಪಕ ಪೀಟರ್ ರೋಚ್ ಮಂಗಳವಾರ ಹೇಳಿದ್ದಾರೆ. ಕ್ರಿಕೆಟ್​ ಅಭಿಮಾನಿಗಳಿಗಾಗಿ ದೊಡ್ಡ ಪಂದ್ಯಾವಳಿ ಆಯೋಜಿಸುವ ಆಸಕ್ತಿ ಹೊಂದಿದ್ದೇವೆ. ವಿಶ್ವದ ಪ್ರತಿ ದೇಶವೂ ಭಾರತ ಮತ್ತು ಪಾಕಿಸ್ತಾನ ತಮ್ಮ ರಾಷ್ಟ್ರದಲ್ಲಿ ಕ್ರಿಕೆಟ್​ ಆಡಲಿ ಎಂದು ಬಯಸುತ್ತವೆ. ಅಂಥದ್ದೇ ಆಸೆ ನಮಗಿದೆ ಎಂದಿದ್ದಾರೆ.

ಹಣ ಮಾಡಿಕೊಳ್ಳುವ ಉದ್ದೇಶ: 2022 ರಲ್ಲಿ ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ಉಭಯ ತಂಡಗಳ ನಡುವೆ ಟಿ20 ವಿಶ್ವಕಪ್ ಪಂದ್ಯ ಆಯೋಜಿಸಲಾಗಿತ್ತು. ಅದರ ಟಿಕೆಟ್‌ಗಳು 5 ನಿಮಿಷಗಳಲ್ಲಿ ಮಾರಾಟವಾಗಿದ್ದವು. 90,000 ಕ್ಕೂ ಹೆಚ್ಚು ಅಭಿಮಾನಿಗಳು ಮೈದಾನದಲ್ಲಿ ಪಂದ್ಯ ವೀಕ್ಷಿಸಿದ್ದರು. 2015ರಲ್ಲಿ ಅಡಿಲೇಡ್‌ನಲ್ಲಿ ನಡೆದ ಪಂದ್ಯವೂ ದೊಡ್ಡ ಬೇಡಿಕೆ ಪಡೆದಿತ್ತು. ಹೀಗಾಗಿ ಆಸ್ಟ್ರೇಲಿಯಾ ಭವಿಷ್ಯದಲ್ಲಿ ಪಾಕಿಸ್ತಾನ-ಭಾರತ ಪಂದ್ಯಗಳಿಗೆ ವೇದಿಕೆ ಒದಗಿಸಲು ಸಿದ್ಧ ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು 2012-13 ರಲ್ಲಿ ಕೊನೆಯ ದ್ವಿಪಕ್ಷೀಯ ಸರಣಿಯನ್ನು ಆಡಿದ್ದವು. ಇದಾದ ಬಳಿಕ ಉಭಯ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಉಂಟಾದ ಬಳಿಕ ಕೇಂದ್ರ ಸರ್ಕಾರ ಕ್ರಿಕೆಟ್​ ಆಡಲು ಅನುಮತಿ ನಿರಾಕರಿಸಿದೆ. ಇತ್ತಂಡಗಳು ಐಸಿಸಿ ಆಯೋಜಿಸುವ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗಳಲ್ಲಿ ಮಾತ್ರ ಸೆಣಸಾಡುತ್ತಿವೆ.

ಇದನ್ನೂ ಓದಿ: ಭಾರತದಲ್ಲಿ ನ್ಯೂಜಿಲೆಂಡ್‌ ಕ್ರಿಕೆಟ್ ತಂಡದ ಪಂದ್ಯಗಳ ಪ್ರಸಾರದ ಹಕ್ಕು‌ ಸೋನಿ ತೆಕ್ಕೆಗೆ - Sony Pictures

Last Updated :Mar 27, 2024, 6:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.