ETV Bharat / international

ಇಸ್ರೇಲ್ ಮೇಲೆ ಇರಾನ್ ದಾಳಿ: ಜಿ7 ನಾಯಕರ ಸಭೆ ಕರೆದ ಯುಎಸ್ ಅಧ್ಯಕ್ಷ ಬೈಡನ್ - Iran attacks Israel

author img

By ETV Bharat Karnataka Team

Published : Apr 14, 2024, 1:00 PM IST

ಇಸ್ರೇಲ್ ಪರವಾಗಿ ಇರಾನ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲು ಜಿ7 ರಾಷ್ಟ್ರಗಳ ನಾಯಕರ ಸಭೆ ಕರೆಯುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

US Prez to convene G7 leaders
US Prez to convene G7 leaders

ವಾಷಿಂಗ್ಟನ್ : ಇಸ್ರೇಲ್ ಮೇಲಿನ ಇರಾನ್ ದಾಳಿಗೆ ಏಕೀಕೃತ ರಾಜತಾಂತ್ರಿಕ ಪ್ರತಿಕ್ರಿಯೆಯನ್ನು ಸಂಘಟಿಸಲು ಭಾನುವಾರ ಗ್ರೂಪ್ ಆಫ್ ಸೆವೆನ್ (ಜಿ 7) ರಾಷ್ಟ್ರಗಳ ನಾಯಕರ ಸಭೆ ಕರೆಯುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. "ಇರಾನ್​ನ ದಾಳಿಗೆ ಏಕೀಕೃತ ರಾಜತಾಂತ್ರಿಕ ಪ್ರತಿಕ್ರಿಯೆಯನ್ನು ಸಂಘಟಿಸಲು ಜಿ 7 ರಾಷ್ಟ್ರಗಳ ನಾಯಕರ ಸಭೆ ಕರೆಯಲಿದ್ದೇನೆ" ಎಂದು ಬೈಡನ್ ಶನಿವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್​ನ ಭದ್ರತೆಗಾಗಿ ಅಮೆರಿಕವು ದೃಢ ನಿಲುವು ಹೊಂದಿರುವುದಾಗಿ ದೂರವಾಣಿ ಕರೆಯ ಸಂದರ್ಭದಲ್ಲಿ ಬೈಡನ್ ನೆತನ್ಯಾಹು ಅವರಿಗೆ ಭರವಸೆ ನೀಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅನಿರೀಕ್ಷಿತ ದಾಳಿಗಳನ್ನು ಎದುರಿಸುವಲ್ಲಿ ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಇಸ್ರೇಲ್ ಅದ್ಭುತ ಸಾಮರ್ಥ್ಯ ಪ್ರದರ್ಶಿಸಿದೆ. ಈ ಮೂಲಕ ತನ್ನ ಸುರಕ್ಷತೆಗೆ ಯಾರೂ ಸುಲಭವಾಗಿ ಅಪಾಯ ಉಂಟು ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಇಸ್ರೇಲ್ ರವಾನಿಸಿದೆ ಎಂದು ಬೈಡನ್ ಹೇಳಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚಿದ ಇಸ್ರೇಲ್: ಇರಾನ್ ದಾಳಿಯ ನಂತರ ಇಸ್ರೇಲ್ ತನ್ನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಭಾನುವಾರದಿಂದ ಅನಿರ್ದಿಷ್ಟ ಅವಧಿಗೆ ಮುಚ್ಚಿದೆ. ಇರಾನ್ ಶನಿವಾರ ಇಸ್ರೇಲ್ ಮೇಲೆ ಡ್ರೋನ್​ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ಅವನ್ನು ಗಾಳಿಯಲ್ಲಿಯೇ ನಾಶಪಡಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.

ಐಡಿಎಫ್ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಶನಿವಾರ ರಾತ್ರಿ ಹೇಳಿಕೆಯಲ್ಲಿ, ಭಾನುವಾರದಿಂದ ಯಾವುದೇ ಶಿಕ್ಷಣ ಸಂಸ್ಥೆಗಳು ತೆರೆದಿರುವುದಿಲ್ಲ ಮತ್ತು ಯಾವುದೇ ಶಿಬಿರ ಕಾರ್ಯಕ್ರಮಗಳು ಅಥವಾ ಪಠ್ಯೇತರ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಹೇಳಿದರು. ಎಚ್ಚರಿಕೆಯ ಸೈರನ್ ಮೊಳಗಿದಾಗ ಇಸ್ರೇಲಿ ನಾಗರಿಕರು ಜಾಗರೂಕರಾಗಿರಬೇಕು ಮತ್ತು ಹತ್ತು ನಿಮಿಷಗಳ ಕಾಲ ಆಶ್ರಯ ತಾಣಗಳಲ್ಲಿ ಅಡಗಿಕೊಳ್ಳಬೇಕೆಂದು ಡೇನಿಯಲ್ ಹಗರಿ ಕರೆ ನೀಡಿದರು.

ಸಿರಿಯಾದ ಡಮಾಸ್ಕಸ್​ನಲ್ಲಿರುವ ತನ್ನ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಏಪ್ರಿಲ್ 1 ರಂದು ದಾಳಿ ನಡೆಸಿದ ನಂತರ ಇಸ್ರೇಲ್ ಮೇಲೆ ದಾಳಿ ಮಾಡುವುದಾಗಿ ಇರಾನ್ ಹೇಳಿತ್ತು. ಡಮಾಸ್ಕಸ್ ಮೇಲಿನ ದಾಳಿಯಲ್ಲಿ ಬ್ರಿಗೇಡ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಸೇರಿದಂತೆ ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್​ಜಿಸಿ) ನ ಏಳು ಉನ್ನತ ಅಧಿಕಾರಿಗಳು ಸಾವನ್ನಪ್ಪಿದ್ದರು.

ಇದನ್ನೂ ಓದಿ : ಸುಡಾನ್​ ಸಂಘರ್ಷಕ್ಕೆ ಒಂದು ವರ್ಷ: ಸಾವಿರಾರು ಸಾವು, ಲಕ್ಷಾಂತರ ನಾಗರಿಕರ ಪಲಾಯನ - SUDAN CONFLICT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.