ETV Bharat / international

ಪಾಕ್​ ಚುನಾವಣೆಯಲ್ಲಿ ಬಹುಮತ ಪಡೆದಿದ್ದೇವೆ ಎಂದ ಇಮ್ರಾನ್ ಖಾನ್; ಗೆಲುವಿನ ಭಾಷಣದ ಆಡಿಯೋ ಬಿಡುಗಡೆ

author img

By ETV Bharat Karnataka Team

Published : Feb 10, 2024, 7:43 AM IST

ಪಾಕ್​ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಪಾಕ್​ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಪಕ್ಷ ಪಾಕಿಸ್ತಾನ ಚುನಾವಣೆಯಲ್ಲಿ ಬಹುಮತ ಪಡೆದು ಗೆಲುವು ಸಾಧಿಸಿದೆ ಎಂದು ಹೇಳಿಕೊಂಡಿದ್ದಾರೆ.

ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದ ಚುನಾವಣೆಯ ಫಲಿತಾಂಶಗಳ ವಿಳಂಬದ ಬಗ್ಗೆ ಆಯೋಗವನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಈ ನಡುವೆ ಪಾಕಿಸ್ತಾನ್​ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸಂಸ್ಥಾಪಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ತಮ್ಮ ಗೆಲುವಿನ ಆಡಿಯೋ ಭಾಷಣದ ತುಣುಕೊಂದನ್ನು ಸಾಮಾಜಿಕ ಜಾಲತಾಣ X ಆ್ಯಪ್​ನಲ್ಲಿ ಹಂಚಿಕೊಳ್ಳಲಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿ ಮತ್ತು ನಿಮ್ಮ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸುವ ಮೂಲಕ ಸ್ವಾತಂತ್ರ್ಯದ ಮರುಸ್ಥಾಪನೆಗೆ ಅಡಿಪಾಯ ಹಾಕಿದ್ದೀರಿ. ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದ್ದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮ ಮತಗಳನ್ನು ಚಲಾಯಿಸಲು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರುತ್ತೀರಿ ಎಂಬ ಸಂಪೂರ್ಣ ನಂಬಿಕೆ ಇತ್ತು. ನೀವು ನನ್ನ ನಂಬಿಕೆಗೆ ತಕ್ಕಂತೆ ನಡೆದುಕೊಂಡಿದ್ದೀರಿ ಮತ್ತು ಮತದಾನದ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ಅನೇಕರನ್ನು ಆಶ್ಚರ್ಯಗೊಳಿಸಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮುಖ್ಯಸ್ಥ ನವಾಜ್ ಷರೀಫ್ ಅವರ 'ಲಂಡನ್ ಯೋಜನೆ' ವಿಫಲವಾಗಿದೆ ಎಂದು ಇಮ್ರಾನ್ ಖಾನ್ ತಮ್ಮ ಭಾಷಣದಲ್ಲಿ ಕಿಡಿಕಾರಿದ್ದಾರೆ.

ಚುನಾವಣಾ ಕಣದಲ್ಲಿ ಹತ್ತಾರು ಪಕ್ಷಗಳು ಇದ್ದರೂ ಇಮ್ರಾನ್ ಖಾನ್ ಅವರ ಪಿಟಿಐ ಮತ್ತು ನವಾಜ್​​ ಷರೀಫ್ ಅವರ ಪಿಎಂಎಲ್-ಎನ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇದರ ಬೆನ್ನೆಲೆ ನವಾಜ್ ಷರೀಫ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ, ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಲಾಹೋರ್‌ನಲ್ಲಿ ಸಭೆ ನಡೆಸಿದ್ದಾರೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಪಾಕ್​ನಲ್ಲಿ ಯಾವುದೇ ಪಕ್ಷ ಬಹುಮತ ಪಡೆಯದ ಕಾರಣ ಮಿತ್ರಪಕ್ಷಗಳೊಂದಿಗೆ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರವನ್ನು ರಚಿಸಲು ನವಾಜ್ ಷರೀಫ್ ಈ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಪಿಪಿಪಿ ಮತ್ತು ಪಿಎಂಎಲ್ - ಎನ್ ಎರಡೂ ಪಿಡಿಎಂ ಸರ್ಕಾರದ ಭಾಗವಾಗಿದ್ದು, 2022 ರಲ್ಲಿ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಕಚೇರಿಯಿಂದ ಹೊರ ಹಾಕಿದ ನಂತರ ಅಧಿಕಾರ ವಹಿಸಿಕೊಂಡಿತ್ತು.

ಪಾಕಿಸ್ತಾನ ಚುನಾವಣೆಯ ತಾತ್ಕಾಲಿಕ ಫಲಿತಾಂಶಗಳ ಪ್ರಕಾರ ಒಟ್ಟು 266 ಸ್ಥಾನಗಳಲ್ಲಿ ಪಿಟಿಐ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 82 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇನ್ನೊಂದೆಡೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಿಎಂಎಲ್-ಎನ್ 64 ಸ್ಥಾನಗಳೊಂದಿಗೆ ಹಿಂದುಳಿದಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಪಿಪಿಪಿ 40 ಸ್ಥಾನಗಳಲ್ಲಿ ಜಯ ಸಾಧಿಸಿದೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಯಾವುದೇ ಪಕ್ಷ ಅಧಿಕಾರ ನಡೆಸಬೇಕಾದರೆ 134 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾಗುತ್ತದೆ.

ಇದನ್ನೂ ಓದಿ : 154 ಸ್ಥಾನಗಳಲ್ಲಿ ಇಮ್ರಾನ್​ಖಾನ್​​​​ ಪಕ್ಷದ ಬೆಂಬಲಿತರ ಮುನ್ನಡೆ: ಪಾಕ್​​ ನೆಟಿಜನ್​​ಗಳ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.