ETV Bharat / international

ಅಬುಧಾಬಿಯಲ್ಲಿ ಮೊದಲ ಶಿಲಾಮಯ ಹಿಂದು ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

author img

By PTI

Published : Feb 14, 2024, 8:17 PM IST

ಅಬುಧಾಬಿಯಲ್ಲಿ 27 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಮೊದಲ ಭವ್ಯ ಹಿಂದು ದೇವಾಲಯವನ್ನು ಪ್ರಧಾನಿ ಮೋದಿ ಇಂದು ಸಂಜೆ ಉದ್ಘಾಟಿಸಿದರು.

pm-modi-inaugurates-first-hindu-stone-temple-in-abu-dhabi
ಅಬುಧಾಬಿಯಲ್ಲಿ ಮೊದಲ ಹಿಂದು ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ಅಬುಧಾಬಿ: ಅರಬ್ಬರ ನಾಡು ಅಬುಧಾಬಿಯಲ್ಲಿ ಮೊದಲ ಹಿಂದು ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಜೆ ಉದ್ಘಾಟಿಸಿದರು. ಸ್ವಾಮಿನಾರಾಯಣ ಪಂಥದ ಆಧ್ಯಾತ್ಮಿಕ ನಾಯಕರ ಸಮ್ಮುಖದಲ್ಲಿ ಭಕ್ತಿ ಪಠಣಗಳ ನಡುವೆ ಭವ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಲಾಯಿತು.

ಬೋಚಸನ್​ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯು (ಬಾಪ್ಸ್) ಬೃಹತ್​ ದೇವಸ್ಥಾನವನ್ನು ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. ಇಂದು ಮಂದಿರ ಉದ್ಘಾಟನೆ ನಿಮಿತ್ತ ಸ್ವಾಮಿನಾರಾಯಣ ಪಂಥದ 1,200ಕ್ಕೂ ಹೆಚ್ಚು ದೇವಾಲಯಗಳಲ್ಲಿ ಏಕಕಾಲದಲ್ಲಿ ಜಾಗತಿಕ ಆರತಿ ಬೆಳಗಲಾಯಿತು. ಜಾಗತಿಕ ಆರತಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು.

ರಾಮ, ಹನುಮ, ಶಿವ, ಜಗನ್ನಾಥ, ಕೃಷ್ಣ, ತಿರುಪತಿ ತಿಮ್ಮಪ್ಪ, ಅಯ್ಯಪ್ಪಸ್ವಾಮಿ ಮತ್ತು ಅಷ್ಕರ್ ಪುರುಷೋತ್ತಮ ಮಹಾರಾಜ್ ದೇಗುಲಗಳ ಸಂಕೀರ್ಣ ಇದಾಗಿದೆ. ತಿಳಿ ಗುಲಾಬಿ ಬಣ್ಣದ ರೇಷ್ಮೆ ಧೋತಿ ಮತ್ತು ಕುರ್ತಾ ಮತ್ತು ತೋಳಿಲ್ಲದ ಜಾಕೆಟ್‌ನೊಂದಿಗೆ ಧರಿಸಿದ್ದ ಮೋದಿ, ಮಂದಿರದಲ್ಲಿ ಗಂಗಾ ಮತ್ತು ಯಮುನಾ ನದಿಗಳ ನೀರನ್ನು ಅರ್ಪಿಸಿದರು. ದೇಗುಲ ಉದ್ಘಾಟನೆಗೂ ಮುನ್ನ ಆವರಣವನ್ನು ವೀಕ್ಷಿಸಿದರು. ದೇವಾಲಯದ ನಿರ್ಮಾಣಕ್ಕೆ ಕೊಡುಗೆ ನೀಡಿದ ವಿವಿಧ ಧರ್ಮಗಳ ಪ್ರಮುಖರನ್ನೂ ಅವರು ಭೇಟಿ ಮಾಡಿದರು.

ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಲ್ ರಹ್ಬಾ ಬಳಿಯ ಅಬು ಮ್ರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿ ಈ ದೇವಾಲಯ ತಲೆ ಎತ್ತಿದೆ. ಮಂದಿರದ ವಿನ್ಯಾಸ ಮತ್ತು ನಿರ್ಮಾಣದ ಕಲೆಯನ್ನು ಹಿಂದೂ ಧರ್ಮಗ್ರಂಥಗಳಾದ ಶಿಲ್ಪ ಮತ್ತು ಸ್ಥಾಪತ್ಯ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾದ ಪ್ರಾಚೀನ ಶೈಲಿಯ ನಿರ್ಮಾಣ ಮತ್ತು ರಚನೆಯ ಪ್ರಕಾರ ಭವ್ಯ ದೇವಾಲಯವನ್ನು ನಿರ್ಮಿಸಲಾಗಿದೆ. ವಾಸ್ತುಶಾಸ್ತ್ರದ ವಿಧಾನಗಳನ್ನು ಇಲ್ಲಿ ವೈಜ್ಞಾನಿಕ ತಂತ್ರಗಳೊಂದಿಗೆ ಸಂಯೋಜಿಸಲಾಗಿದೆ ಎಂದು ಬಾಪ್ಸ್ ತಿಳಿಸಿದೆ.

"ತಾಪಮಾನ, ಒತ್ತಡ ಮತ್ತು ಭೂಕಂಪನದಂಥ ಚಟುವಟಿಕೆಗಳನ್ನು ಅಳೆಯಲು ದೇವಾಲಯದ ಪ್ರತಿ ಹಂತದಲ್ಲಿ 300ಕ್ಕೂ ಹೆಚ್ಚು ಹೈಟೆಕ್ ಸಂವೇದಕಗಳನ್ನು ಸ್ಥಾಪಿಸಲಾಗಿದೆ. ಈ ಸಂವೇದಕಗಳು ಲೈವ್ ಡೇಟಾ ಒದಗಿಸುತ್ತವೆ. ಈ ಪ್ರದೇಶದಲ್ಲಿ ಯಾವುದೇ ಭೂಕಂಪ ಸಂಭವಿಸಿದರೆ, ದೇವಾಲಯದಲ್ಲೇ ಅದರ ಬಗ್ಗೆ ತಿಳಿಯಬಹುದು ಮತ್ತು ಅದರ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ" ಎಂದು ಬಿಎಪಿಎಸ್‌ನ ಪ್ರಮುಖ ಸ್ವಾಮಿ ಬ್ರಹ್ಮವಿಹಾರಿದಾಸ್ ಮಾಹಿತಿ ನೀಡಿದ್ದಾರೆ.

"ದೇವಾಲಯದ ನಿರ್ಮಾಣದಲ್ಲಿ ಯಾವುದೇ ಲೋಹ ಬಳಸಿಲ್ಲ. ಅಡಿಪಾಯಕ್ಕೆ ಹಾರುಬೂದಿಯನ್ನು ಬಳಸಲಾಗಿದೆ. ಕಾಂಕ್ರೀಟ್ ಮಿಶ್ರಣದಲ್ಲಿ ಶೇ.55ರಷ್ಟು ಸಿಮೆಂಟ್ ಬಳಸಲಾಗಿದೆ. ಇದರಿಂದ ದೇವಾಲಯದ ಇಂಗಾಲ ಪ್ರಮಾಣ ಕಡಿಮೆ ಮಾಡುತ್ತದೆ. ಅಲ್ಲದೇ, ಶಾಖ ನಿರೋಧಕ ನ್ಯಾನೋ ಟೈಲ್ಸ್ ಮತ್ತು ಭಾರೀ ಗಾಜಿನ ಫಲಕಗಳನ್ನು ಬಳಸಲಾಗಿದೆ. ಯುಎಇಯಲ್ಲಿನ ವಿಪರೀತ ತಾಪಮಾನ ಮತ್ತು ಬಿಸಿ ವಾತಾವರಣದಲ್ಲಿಯೂ ಸಂದರ್ಶಕರಿಗೆ ನಡೆಯಲು ಈ ಟೈಲ್ಸ್ ಆರಾಮದಾಯಕವಾಗಿರುತ್ತದೆ" ಎಂದು ದೇವಸ್ಥಾನದ ನಿರ್ಮಾಣ ವ್ಯವಸ್ಥಾಪಕ ಮಧುಸೂದನ್ ಪಟೇಲ್ ವಿವರಿಸಿದ್ದಾರೆ.

"ದೇವಾಲಯವನ್ನು 18 ಲಕ್ಷ ಇಟ್ಟಿಗೆಗಳು, ಏಳು ಲಕ್ಷ ಮಾನವ ಗಂಟೆಗಳು ಮತ್ತು 1.8 ಲಕ್ಷ ಕ್ಯೂಬಿಕ್ ಮೀಟರ್ ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಈ ದೇಗುಲವನ್ನು ಅಯೋಧ್ಯೆಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ರಾಮ ಮಂದಿರದಂತೆಯೇ ನಾಗರ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಐದು ವರ್ಷಗಳ ಕಾಲ ನಡೆದ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಅನೇಕ ಕಾರ್ಮಿಕರು ಗುಜರಾತ್ ಮತ್ತು ರಾಜಸ್ಥಾನಕ್ಕೆ ಸೇರಿದವರು. ದೇವಾಲಯಕ್ಕೆ ಭೂಮಿಯನ್ನು ಯುಎಇ ಸರ್ಕಾರ ದಾನ ಮಾಡಿದೆ. ದುಬೈನಲ್ಲಿ ಮೂರು ಇತರ ಹಿಂದೂ ದೇವಾಲಯಗಳು ಇದೆ. ಆದರೆ, ಶಿಲೆಯ ವಾಸ್ತುಶಿಲ್ಪದೊಂದಿಗೆ ದೊಡ್ಡ ಪ್ರದೇಶದಲ್ಲಿ ಹರಡಿರುವ ಈ ದೇವಾಲಯವೇ ದೊಡ್ಡದು" ಎಂದು ಬಾಪ್ಸ್ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಅಬುಧಾಬಿ ಹಿಂದು ಮಂದಿರ: ಸಪ್ತ ದೇವರುಗಳ ದೇಗುಲ, ಅರೇಬಿಯನ್​ ಸಂಸ್ಕೃತಿಯೂ ಅನಾವರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.