ETV Bharat / international

ಇಮ್ರಾನ್​ ಖಾನ್ ಪಕ್ಷದ ಅಭ್ಯರ್ಥಿ ಎದುರು ನವಾಜ್ ಷರೀಫ್​ಗೆ ಸೋಲು: ವರದಿ

author img

By ETV Bharat Karnataka Team

Published : Feb 9, 2024, 7:56 PM IST

Nawaz Sharif loses against PTI-backed Independent candidate in Mansehra
Nawaz Sharif loses against PTI-backed Independent candidate in Mansehra

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮನ್ಸೆಹ್ರಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಲಾಹೋರ್(ಪಾಕಿಸ್ತಾನ): ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ನಿಧಾನವಾಗಿ ಪ್ರಕಟವಾಗುತ್ತಿದ್ದು, ಮಾಜಿ ಪ್ರಧಾನಿ ನವಾಜ್ ಷರೀಫ್​ ಮನ್ಸೆಹ್ರಾದಲ್ಲಿ ಪರಾಜಿತರಾಗಿದ್ದಾರೆ.

ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಗುಸ್ತಾಸಾಪ್ ಖಾನ್ ಅವರು ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಎನ್ಎ-15 ಮನ್ಸೆಹ್ರಾದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಅನಧಿಕೃತ ಫಲಿತಾಂಶಗಳ ಪ್ರಕಾರ, ಗುಸ್ತಾಸಾಪ್ ಖಾನ್ 1,05,249 ಮತಗಳನ್ನು ಪಡೆದರೆ, ನವಾಜ್ ಷರೀಫ್ 80,382 ಮತಗಳನ್ನು ಪಡೆದಿದ್ದಾರೆ ಎಂದು ಎಆರ್​ವೈ ನ್ಯೂಸ್ ವರದಿ ಮಾಡಿದೆ.

ಇದಕ್ಕೂ ಮುನ್ನ, ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಗುರುವಾರ ಮತದಾನ ಪ್ರಕ್ರಿಯೆ ಶಾಂತಿಯುತ ರೀತಿಯಲ್ಲಿ ಕೊನೆಗೊಂಡಿತ್ತು. ರಾಷ್ಟ್ರೀಯ ಅಸೆಂಬ್ಲಿಯ 265 ಸ್ಥಾನಗಳು ಮತ್ತು ಪ್ರಾಂತೀಯ ಅಸೆಂಬ್ಲಿಗಳ 590 ಸ್ಥಾನಗಳಿಗೆ ಮತದಾನ ನಡೆಯಿತು. ಬಲೂಚಿಸ್ತಾನ ವಿಧಾನಸಭೆಯ 51 ಸ್ಥಾನಗಳು, ಖೈಬರ್ ಪಖ್ತುನಖ್ವಾ ವಿಧಾನಸಭೆಯ 130 ಸ್ಥಾನಗಳ ಪೈಕಿ 128, ಪಂಜಾಬ್ ವಿಧಾನಸಭೆಯ 297 ಸ್ಥಾನಗಳ ಪೈಕಿ 296 ಮತ್ತು ಸಿಂಧ್ ವಿಧಾನಸಭೆಯ 130 ಸ್ಥಾನಗಳಿಗೆ ಮತದಾನ ನಡೆಯಿತು.

ಮತ ಎಣಿಕೆಯಲ್ಲಿ ನವಾಜ್ ಷರೀಫ್ ಪರವಾಗಿ ಅಕ್ರಮ ಎಸಗಲಾಗಿದೆ ಎಂದು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ (ಪಿಟಿಐ) ಆರೋಪಿಸಿದೆ. ಎನ್ಎ-130 ಲಾಹೋರ್​ನಲ್ಲಿ ಚಲಾವಣೆಯಾದ ಮತಗಳಿಗಿಂತ ಹೆಚ್ಚು ಮಾನ್ಯ ಮತಗಳು ಮತ್ತು ಎನ್ಎ-151ರಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ತಿರಸ್ಕೃತ ಮತಗಳು ಮತ ಎಣಿಕೆಯಲ್ಲಿನ ದೋಷ ತೋರಿಸುತ್ತಿವೆ ಎಂದು ಪಿಟಿಐ ಆರೋಪಿಸಿದೆ.

ಶುಕ್ರವಾರ ಸಂಜೆಯವರೆಗೆ ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ಅಂಕಿಅಂಶಗಳ ಪ್ರಕಾರ 139 ಕ್ಷೇತ್ರಗಳ ಫಲಿತಾಂಶಗಳನ್ನು ಘೋಷಿಸಲಾಗಿದೆ. ಇದರಲ್ಲಿ 55 ಕ್ಷೇತ್ರಗಳಲ್ಲಿ ಸ್ವತಂತ್ರರು (ಹೆಚ್ಚಾಗಿ ಪಿಟಿಐ ಬೆಂಬಲಿತ), 43 ರಲ್ಲಿ ಪಿಎಂಎಲ್-ಎನ್, 35 ರಲ್ಲಿ ಪಿಪಿಪಿ ಮತ್ತು ಇತರರು ಜಯ ಗಳಿಸಿದ್ದಾರೆ. ಫಲಿತಾಂಶಗಳು ತೀರಾ ನಿಧಾನವಾಗಿ ಬರುತ್ತಿವೆ ಎಂದು ಹಲವಾರು ರಾಜಕೀಯ ಪಕ್ಷಗಳು ಆರೋಪಿಸಿದ ನಂತರ ಇಸಿಪಿ ವೇಗವಾಗಿ ಫಲಿತಾಂಶ ಪ್ರಕಟಿಸಲಾರಂಭಿಸಿದೆ. ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (ಎಚ್ಆರ್ ಸಿಪಿ) ಚುನಾವಣಾ ಫಲಿತಾಂಶ ಘೋಷಣೆಯಲ್ಲಿನ ವಿಳಂಬವನ್ನು ಖಂಡಿಸಿದೆ.

ಹೊಸ ಸರ್ಕಾರ ರಚಿಸಲು ತಾನು ಸಮರ್ಥವಾಗಿರುವುದಾಗಿ ಹೇಳಿಕೊಂಡಿರುವ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ), ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ತಳ್ಳಿಹಾಕಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: ಯುಎಸ್​ ಕಾಂಗ್ರೆಸ್​​ಗೆ ಸ್ಪರ್ಧಿಸಲು ಅರಿಜೋನಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಮಿಶ್ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.