ETV Bharat / health

ಪ್ರತಿದಿನ ಲವಂಗ ತಿಂದರೆ ದೇಹಕ್ಕೆ ಒಳ್ಳೆದಾ, ಕೆಟ್ಟದಾ? ನೀವು ಅಗತ್ಯವಾಗಿ ತಿಳಿದಿರಬೇಕಾದ ಮಾಹಿತಿ - Cloves Health Benefits

author img

By ETV Bharat Karnataka Team

Published : May 26, 2024, 12:57 PM IST

'ಮಸಾಲೆ ಪದಾರ್ಥಗಳ ರಾಜ' ಎಂದೇ ಕರೆಯಲ್ಪಡುವ ಲವಂಗವನ್ನು ಸುವಾಸನೆಗಾಗಿ ವಿವಿಧ ಆಹಾರಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮಾಂಸಹಾರಿ ಖಾದ್ಯಗಳಲ್ಲಿ ಈ ಮಸಾಲೆ ಪದಾರ್ಥ ಇರಲೇಬೇಕು. ಆದರೆ, ಪೋಷಕಾಂಶಗಳಿಂದ ಕೂಡಿದ ಲವಂಗವನ್ನು ಪ್ರತಿದಿನ ತಿಂದರೆ ದೇಹಕ್ಕೆ ಯಾವೆಲ್ಲಾ ಲಾಭಗಳಿವೆ ಎನ್ನುವುದನ್ನು ತಿಳಿಯೋಣ.

CLOVES HEALTH BENEFITS  amazing benefits
ಸಂಗ್ರಹ ಚಿತ್ರ (ETV Bharat)

ಲವಂಗ ಅಡುಗೆಮನೆಯ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದು. ಈ ಲವಂಗ ಕರಿಬೇವಿಗಿಂತ ಉತ್ತಮ ರುಚಿ ಮತ್ತು ಪರಿಮಳ ನೀಡುವುದಲ್ಲದೆ, ನಮಗೆ ಬೇಕಾದ ಹಲವಾರು ಪೋಷಕಾಂಶಗಳನ್ನೂ ಒದಗಿಸುವ ಮೂಲಕ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಲವು ಔಷಧೀಯ ಗುಣಗಳನ್ನು ಹೊಂದಿರುವ ಲವಂಗವನ್ನು ಪ್ರತಿನಿತ್ಯ ತಿಂದರೆ ಸಾಕಷ್ಟು ಪ್ರಯೋಜನಗಳಿವೆ.

ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ: ದೈನಂದಿನ ಆಹಾರದಲ್ಲಿ ಲವಂಗವನ್ನು ಸೇರಿಸುವುದರಿಂದ, ಆ್ಯಂಟಿಆಕ್ಸಿಡೆಂಟ್‌ಗಳಾದ ಫ್ಲೇವನಾಯ್ಡ್‌ಗಳು ಮತ್ತು ಐಸೊಫ್ಲಾವೊನ್‌ಗಳು, ಇಂಡಿಪೆಂಡೆಂಟ್​ ರಾಡಿಕಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರ ಜೊತೆಗೆ ಸೆಲ್ಯುಲಾರ್ ಹಾನಿ ತಡೆಯುತ್ತದೆ ಮತ್ತು ಹೃದ್ರೋಗ, ಕ್ಯಾನ್ಸರ್ ಮತ್ತು ಯಕೃತ್ತಿನ ಸಮಸ್ಯೆಗಳಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಮೂಳೆಯ ಆರೋಗ್ಯ ಕಾಪಾಡುತ್ತದೆ: ಲವಂಗದಲ್ಲಿ ಹೇರಳವಾಗಿರುವ ಮ್ಯಾಂಗನೀಸ್ ಮತ್ತು ಫ್ಲೇವನಾಯ್ಡ್‌ಗಳು ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಸಂಯುಕ್ತಗಳು ಮೂಳೆ ಅಂಗಾಂಶವನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ವಿವಿಧ ಮೂಳೆ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಪ್ರತಿದಿನ ಲವಂಗವನ್ನು ತಿನ್ನುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. 'ಜರ್ನಲ್ ಆಫ್ ಫುಡ್ ಆ್ಯಂಡ್ ಡ್ರಗ್ ಅನಾಲಿಸಿಸ್'ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಲವಂಗದಲ್ಲಿರುವ ಅಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದರ ಆ್ಯಂಟಿ-ವೈರಲ್ ಗುಣಲಕ್ಷಣಗಳು ರಕ್ತದಲ್ಲಿನ ವಿಷದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಹೊಟ್ಟೆಯ ಸಮಸ್ಯೆಗಳನ್ನು ಹೋಗಲಾಡಿಸಲು ಲವಂಗವು ಉತ್ತಮ ಮನೆಮದ್ದು ಎಂದು ತಜ್ಞರು ತಿಳಿಸುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಸಹ ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ಉಬ್ಬುವುದು, ಗ್ಯಾಸ್ ಮತ್ತು ಅಜೀರ್ಣದಂತಹ ವಿವಿಧ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು: ಲವಂಗವು ಜಿಂಗೈವಿಟಿ, ಆ್ಯಂಟಿ ಪ್ಲೇಕ್ ಮತ್ತು ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇವು ಹಲ್ಲುಗಳನ್ನು ಆರೋಗ್ಯವಾಗಿಡಲು ತುಂಬಾ ಸಹಕಾರಿ ಎನ್ನುತ್ತಾರೆ ಆಸ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಜಗದೀಶ್ ಜೆ.ಹಿರೇಮಠ. ಲವಂಗ ಸೇವನೆಯಿಂದ ಬಾಯಿಯಲ್ಲಿ ಸೂಕ್ಷ್ಮಾಣುಜೀವಿಗಳನ್ನು ತಡೆಯಲು ಸಹಾಯ ಮಾಡುವುದಲ್ಲದೆ, ಒಸಡುಗಳಲ್ಲಿನ ಸೋಂಕು, ಉರಿಯೂತ ಮತ್ತು ನೋವಿನಿಂದ ಪರಿಹಾರ ಲಭಿಸುತ್ತದೆ. ಪುರುಷರಲ್ಲಿ ಬಾಯಿಯ ದುರ್ವಾಸನೆ ಮತ್ತು ಪಿರಿಯಾಂಟೈಟಿಸ್ ತಡೆಗಟ್ಟಲು ಲವಂಗವು ಚೆನ್ನಾಗಿ ಕೆಲಸ ಮಾಡುತ್ತದೆ.

ಸೋಂಕುಗಳಿಂದ ಪರಿಹಾರ: ಲವಂಗವನ್ನು ನಿಯಮಿತವಾಗಿ ಸೇವಿಸುವುದರಿಂದ ಜ್ವರ, ಶೀತ, ಬ್ರಾಂಕೈಟಿಸ್, ಸೈನಸ್ ಸಮಸ್ಯೆಗಳು ಮತ್ತು ವೈರಲ್ ಸೋಂಕುಗಳಂತಹ ರೋಗಗಳ ಅಪಾಯ ಕಡಿಮೆ ಮಾಡುತ್ತದೆ ಎಂದು ಡಾ.ಜಗದೀಶ್ ಹೇಳುತ್ತಾರೆ. ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಸಹ ಒಳಗೊಂಡಿದೆ.

ಲವಂಗ ಎಷ್ಟು ಸೇವಿಸಿದರೆ ಒಳ್ಳೆಯದು?: ಲವಂಗವನ್ನು ದಿನನಿತ್ಯ ಸೇವಿಸುವುದರಿಂದ ಹಲವಾರು ಆರೋಗ್ಯ ಲಾಭಗಳಿರುವುದರಿಂದ ಹೆಚ್ಚು ಸೇವಿಸಲು ಆಗುವುದಿಲ್ಲ. ಆದ್ರೆ, ದಿನಕ್ಕೆ ಒಂದರಿಂದ ಎರಡು ಲವಂಗಗಳನ್ನು ಸಣ್ಣ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಸೂಚಿಸುತ್ತಾರೆ. ಲವಂಗವನ್ನು ಪುಡಿ ಮಾಡಿ, ಚಹಾದ ರೂಪದಲ್ಲಿ ತೆಗೆದುಕೊಳ್ಳಬಹುದು ಅಥವಾ ಆರೋಗ್ಯ ಪ್ರಯೋಜನಗಳಿಗಾಗಿ ಅಡುಗೆಯಲ್ಲಿ ಬಳಕೆ ಮಾಡಬಹುದು.

ಲವಂಗ ಅತಿಯಾಗಿ ಸೇವಿಸಿದರೆ ಅಪಾಯ: ಲವಂಗವನ್ನು ಪ್ರತಿನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಲಾಭಗಳಿದ್ದರೂ, ಅತಿಯಾದ ಸೇವನೆಯಿಂದ ಲಿವರ್ ಹಾನಿಗೊಳಗಾಗಬಹುದು ಎಂದು ಡಾ.ಹಿರೇಮಠ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಲಿವರ್ ಸಮಸ್ಯೆ ಇರುವವರು ಈ ವಿಷಯದಲ್ಲಿ ಜಾಗರೂಕರಾಗಿರಬೇಕು. ಹಾಗೆಯೇ, ಗರ್ಭಿಣಿಯರು ಮತ್ತು ರಕ್ತ ತೆಳುವಾಗಿಸುವ ಔಷಧ ತೆಗೆದುಕೊಳ್ಳುವವರು ಎಚ್ಚರಿಕೆಯಿಂದ ಲವಂಗ ಸೇವಿಸಬೇಕು ಎನ್ನುತ್ತಾರೆ ಡಾ.ಹಿರೇಮಠ.

ಸೂಚನೆ ಗಮನಿಸಿ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಮನೆ ಸುಲಭವಾಗಿ ಸ್ವಚ್ಛಗೊಳಿಸಬೇಕೆ? ಈ 9 ಸಲಹೆಗಳನ್ನು ಅನುಸರಿಸಿದರೆ ಫುಲ್​ ನೀಟ್​ ಅಂಡ್​​ ಕ್ಲೀನ್​! - Home Clean Tips

ETV Bharat Logo

Copyright © 2024 Ushodaya Enterprises Pvt. Ltd., All Rights Reserved.