ETV Bharat / health

ವಿಶ್ವದಲ್ಲೇ ಮೊದಲ ಪ್ರಕರಣ; ವ್ಯಕ್ತಿಯ ಮೂರು ವಿಭಿನ್ನ ಕಾಯಿಲೆಗಳಿಗೆ ಏಕಕಾಲದಲ್ಲೇ ಶಸ್ತ್ರಚಿಕಿತ್ಸೆ ನೀಡುವಲ್ಲಿ ವೈದ್ಯರ ತಂಡ ಯಶಸ್ವಿ - doctors team successful

author img

By ETV Bharat Karnataka Team

Published : May 27, 2024, 6:35 PM IST

ಹೃದ್ರೋಗ ಸಮಸ್ಯೆ, ಕರುಳಿನ ಕ್ಯಾನ್ಸರ್‌ ಹಾಗೂ ಪಿತ್ತಕೋಶದಲ್ಲಿ ಕಲ್ಲು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಏಕಕಾಲದಲ್ಲೇ ಮೂರು ಶಸ್ತ್ರಚಿಕಿತ್ಸೆಗಳನ್ನು ಕೈಗೊಂಡು ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.

Fortis Hospital doctors team
ಫೋರ್ಟಿಸ್‌ ಆಸ್ಪತ್ರೆಯ ವೈದ್ಯರ ತಂಡ (ETV Bharat)

ಬೆಂಗಳೂರು: ವಿಶ್ವದಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಮೂರು ವಿಭಿನ್ನ ಕಾಯಿಲೆಗಳಿಗೆ ಏಕಕಾಲದಲ್ಲೇ ಸಂಕೀರ್ಣ ಶಸ್ತ್ರಚಿಕಿತ್ಸೆ ನೀಡುವುದರೊಂದಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯಕೀಯ ತಂಡವು ಯಶಸ್ವಿಯಾಗಿದೆ.

ಕನ್ನಿಂಗ್‌ಹ್ಯಾಮ್‌ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಹೃದ್ರೋಗ ಸಮಸ್ಯೆ, ಕರುಳಿನ ಕ್ಯಾನ್ಸರ್‌ ಹಾಗೂ ಪಿತ್ತಕೋಶದಲ್ಲಿ ಕಲ್ಲು ಇರುವ 44 ವರ್ಷದ ವ್ಯಕ್ತಿಗೆ ಏಕಕಾಲದಲ್ಲೇ ಮೂರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ. ಫೋರ್ಟಿಸ್ ಆಸ್ಪತ್ರೆಯ ಹೃದಯತಜ್ಞ ಡಾ. ವಿವೇಕ್ ಜವಳಿ, ಮಿನಿಮಲ್ ಆಕ್ಸೆಸ್ ಮತ್ತು ಬಾರಿಯಾಟ್ರಿಕ್ ಸರ್ಜರಿ ನಿರ್ದೇಶಕ ಡಾ. ಜಿ. ಐ. ಗಣೇಶ್ ಶೆಣೈ ಅವರ ವೈದ್ಯರ ತಂಡ ಈ ಚಿಕಿತ್ಸೆ ನೆರವೇರಿಸಿದೆ.

ಈ ಕುರಿತು ಮಾತನಾಡಿರುವ ಡಾ. ವಿವೇಕ್‌ ಜವಳಿ, 44 ವರ್ಷದ ಕೊಪ್ಪರಂ ಎಂಬ ವ್ಯಕ್ತಿ ಹೃದ್ರೋಗ ಚಿಕಿತ್ಸೆ ಪಡೆಯಲು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೊರೊನರಿ ಆರ್ಟರಿ ಬೈಪಾಸ್ ಸರ್ಜರಿ ಮಾಡುವ ಅವಶ್ಯಕತೆ ಇತ್ತು. ರೋಗಿಯು ತಾವು ಮೊದಲಿನಿಂದಲೂ ಹೊಟ್ಟೆ ನೋವು ಅನುಭವಿಸುತ್ತಿರುವ ಬಗ್ಗೆಯೂ ನಮಗೆ ತಿಳಿಸಿದರು. ಇದಕ್ಕೆ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದೆವು.

ಈ ವೇಳೆ, ಅವರಿಗೆ ಪಿತ್ತಕೋಶದಲ್ಲಿ ಕಲ್ಲು ಇರುವುದು ಕಂಡು ಬಂದಿತ್ತು. ಹೀಗಾಗಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗ ಕರುಳಿನ ಕ್ಯಾನ್ಸರ್‌ ಇರುವುದು ಸಹ ಪತ್ತೆಯಾಯಿತು. ಕರುಳಿನ ಕ್ಯಾನ್ಸರ್‌ ಬಹುಪಾಲು ದೊಡ್ಡಮಟ್ಟದಲ್ಲಿ ಅವರಿಗೆ ಹಾನಿ ಮಾಡುತ್ತಿತ್ತು. ಹೀಗಾಗಿ ಅವರಿಗೆ ಹೃದಯ ಬೈಪಾಸ್‌ ಸರ್ಜರಿಯ ಜೊತೆಗೆ ಕರುಳಿನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯೂ ಹೆಚ್ಚು ಅನಿವಾರ್ಯವಾಗಿತ್ತು.

ಆದರೆ, ಹೃದಯದ ಬೈಪಾಸ್‌ ಸರ್ಜರಿ ಬಳಿಕ 3 ತಿಂಗಳು ಯಾವುದೇ ಚಿಕಿತ್ಸೆಗೆ ಒಳಪಡುವುದು ಹೆಚ್ಚು ಅಪಾಯಕಾರಿಯಾಗಿದೆ. ಆದರೆ, ಮೂರು ತಿಂಗಳವರೆಗೂ ಕರುಳಿನ ಕ್ಯಾನ್ಸರ್‌ನನ್ನು ಹಾಗೇ ಬಿಡಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಈ ವ್ಯಕ್ತಿಗೆ ಏಕಕಾಲದಲ್ಲೇ ಹೃದಯದ ಬೈಪಾಸ್‌ ಸರ್ಜರಿ, ಕರುಳಿನ ಕ್ಯಾನ್ಸರ್‌ ಹಾಗೂ ಪಿತ್ತಕೋಶದಲ್ಲಿ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲು ಅವರ ಕುಟುಂಬದವರ ಒಪ್ಪಿಗೆ ಪಡೆದುಕೊಂಡೆವು ಎಂದು ತಿಳಿಸಿದರು.

ವ್ಯಕ್ತಿ ಸಂಪೂರ್ಣ ಆರೋಗ್ಯ: ಮೊದಲಿಗೆ ಆಫ್- ಪಂಪ್ ಕರೋನರಿ ಆರ್ಟರಿ ಬೈಪಾಸ್ ವಿಶೇಷ ಶಸ್ತ್ರಚಿಕಿತ್ಸಾ ತಂತ್ರದ ಮೂಲಕ ಕೊರೊನರಿ ಆರ್ಟರಿ ಬೈಪಾಸ್ ಸರ್ಜರಿಗೆ ನಡೆಸಿದೆವು. ಈ ಅವಧಿಯಲ್ಲೇ ಬಾರಿಯಾಟ್ರಿಕ್ ಸರ್ಜನ್‌ ಡಾ. ಜಿ. ಐ. ಗಣೇಶ್ ಶೆಣೈ ಲ್ಯಾಪರೊಸ್ಕೋಪಿಕ್ ತಂತ್ರಜ್ಞಾನ ಬಳಸಿಕೊಂಡು ಲ್ಯಾಪರೊಸ್ಕೋಪಿಕ್ ಎಕ್ಸ್ಟೆಂಡೆಡ್ ರೈಟ್ ಹೆಮಿಕೊಲೆಕ್ಟಮಿಯಿಂದ ಕ್ಯಾನ್ಸರ್‌ನ ಕರುಳಿನ ಭಾಗವನ್ನು ತೆಗೆದುಹಾಕಿದರು. ಜೊತೆಗೆ ಪಿತ್ತಕೋಶದ ಕಲ್ಲುಗಳನ್ನು ಸಹ ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿ ಮೂಲಕ ತೆಗೆದುಹಾಕುವಲ್ಲಿ ಯಶಸ್ವಿಯಾದರು. ಈ ಎಲ್ಲ ಶಸ್ತ್ರಚಿಕಿತ್ಸೆಗೆ 7 ಗಂಟೆಗಳಲ್ಲಿ ನಡೆಸಲಾಯಿತು. ರೋಗಿಯು ಶಸ್ತ್ರಚಿಕಿತ್ಸೆಯಾದ 15 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ವಿವರಣೆ ನೀಡಿದರು.

ಇದನ್ನೂಓದಿ:ಬಿಸಿಲಿನ ತಾಪದಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಲ್ಬಣ: ಇದಕ್ಕೆ ಪರಿಹಾರವೇನು? - Kidney Stones

ETV Bharat Logo

Copyright © 2024 Ushodaya Enterprises Pvt. Ltd., All Rights Reserved.