ETV Bharat / entertainment

ಡಾ. ರಾಜ್ ಜನ್ಮದಿನ: ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದ ನಟಸಾರ್ವಭೌಮ - Dr Raj Birth Anniversary

author img

By ETV Bharat Karnataka Team

Published : Apr 24, 2024, 6:35 AM IST

Rajkumar Birth Anniversary
ರಾಜ್​ಕುಮಾರ್ ಜನ್ಮದಿನ

ಅಣ್ಣಾವ್ರು ಬದುಕಿದ್ದರೆ ಇಂದು ಕೋಟ್ಯಂತರ ಅಭಿಮಾನಿಗಳೊಂದಿಗೆ 95ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು.

ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ದಶಕಗಳ ಕಾಲ ಮಿಂಚಿ, ಕನ್ನಡ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಂಗೊಳಿಸಿದ ಮಹಾನಟ ಡಾ.ರಾಜ್​ಕುಮಾರ್. ನಟಸಾರ್ವಭೌಮ, ಗಾನ ಗಂಧರ್ವ, ರಣಧೀರ ಕಂಠೀರವ ಹೀಗೆ ಅನೇಕ ಬಿರುದುಗಳನ್ನು ಹೊಂದಿರುವ ಕನ್ನಡದ ಏಕೈಕ ನಟ ರಾಜ್​ಕುಮಾರ್. ಇಂದು ಸರಸ್ವತಿ ಪುತ್ರ ಡಾ.ರಾಜ್​ ಜನ್ಮದಿನ. ಅಣ್ಣಾವ್ರು ಬದುಕಿದ್ದರೆ ಕೋಟ್ಯಂತರ ಅಭಿಮಾನಿಗಳೊಂದಿಗೆ 95ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ರಾಜ್​​ ಸದ್ಯ ನೆನಪು ಮಾತ್ರ. ಅವರ ಹೆಸರಿನಲ್ಲಿ ಅನೇಕ ಸಾಮಾಜಿಕ ಕಾರ್ಯಗಳು ಜರುಗುತ್ತಿವೆ.

Rajkumar
ರಾಜ್​ಕುಮಾರ್ ಅಪರೂಪದ ಫೋಟೋ

ಅಭಿಮಾನಿ ದೇವರುಗಳ ಮನದಲ್ಲಿ ನೆಲೆಸಿರುವ ರಾಜ್​ಕುಮಾರ್, ಒಳ್ಳೆಯತನ ಎಂದರೆ ಹೀಗಿರಬೇಕು ಎಂಬುದನ್ನು ತಮ್ಮ ಪ್ರತೀ ಚಿತ್ರದ ಮೂಲಕ ಸಂದೇಶ ಸಾರಿ ಹೋಗಿದ್ದಾರೆ. ಬದುಕಿದ್ದಷ್ಟೂ ದಿನವೂ ಆದರ್ಶದ ನೆಲೆಯಲ್ಲಿಯೇ ಜೀವನ ಸಾಗಿಸಿದವರು. ಸರಳತೆಯ ಸಾಕಾರ ಮೂರ್ತಿಯಾಗಿ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿದವರು. ಇಂದಿಗೂ ಕನ್ನಡ ಚಿತ್ರರಂಗದ ಐಕಾನ್. ಇಡೀ ದಕ್ಷಿಣ ಭಾರತ ಕಂಡ ವರ್ಸಟೈಲ್ ಆ್ಯಕ್ಟರ್.

ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ವಿನಮ್ರ ನಡವಳಿಕೆಗೆ ಹೆಸರುವಾಸಿಯಾದರು. ಅಪ್ರತಿಮ ಪ್ರತಿಭಾ ಕೌಶಲ್ಯಗಳಿಂದ ಜನಮನಸೂರೆಗೊಂಡರು. ಪ್ರತೀ ಪಾತ್ರಕ್ಕೂ ಜೀವ ತುಂಬಿದರು. 70 ರಿಂದ 90ರ ದಶಕದವರೆಗೂ ರಾಜ್ ಚಿತ್ರಗಳು ಜನರ ಜೀವನಾಡಿ ಎಂಬಂತೆ ಬದುಕಿನ ಎಲ್ಲ ಆಗುಹೋಗುಗಳಲ್ಲಿ ಬೆರೆತು ಹೋದವು. ಪ್ರತೀ ಚಿತ್ರಗಳು ಪ್ರಶಾಂತ ನದಿಯಾಗಿ ಜನರ ಹೃದಯದಲ್ಲಿ ವಿಹರಿಸಿದವು.

Rajkumar
ರಾಜ್​ಕುಮಾರ್ ಅಪರೂಪದ ಫೋಟೋ

ಬಂಗಾರದ ಮನುಷ್ಯ ಚಿತ್ರ ಅಸಂಖ್ಯಾತ ಜನರಿಗೆ ಸ್ಫೂರ್ತಿಯಾಗಿ ಬದುಕು ಕಟ್ಟಿಕೊಳ್ಳಲು ನೆರವಾಯಿತು. ಸಾಮಾಜಿಕ ನೆಲೆಯಲ್ಲಿ ಬರುತ್ತಿದ್ದ ಕಾದಂಬರಿ ಆಧಾರಿತ ಚಿತ್ರಗಳು ತುಂಬು ಕುಟುಂಬದ ಅಸ್ತಿತ್ವ ಮೆರೆಯಲು ನೆರವಾದವು. ಮುಖ್ಯವಾಗಿ ರಾಜಣ್ಣ ಆದರ್ಶದ ಗಣಿ. ಹಾಗಾಗಿ ಅಭಿಮಾನಿ ದೇವರುಗಳ ಉಸಿರಲ್ಲಿ ಉಸಿರಾಗಿ ಬೆರೆತು ಹೋದರು.

Rajkumar
ರಾಜ್​ಕುಮಾರ್ ಅಪರೂಪದ ಫೋಟೋ

ನಾಡಿನ ನೆಲ ಜಲದ ವಿಷಯ ಬಂದಾಗ ಹೋರಾಟದ ಹಾದಿ ಹಿಡಿಯುವ ಮುನ್ನ ಎಲ್ಲರ ಗಮನ ರಾಜ್ ಅವರತ್ತ ನೆಲೆಸುತ್ತಿತ್ತು. ಅಣ್ಣ ಹೋರಾಟಕ್ಕೆ ಧುಮುಕಿದರು ಎಂದರೆ ಸರ್ಕಾರ ನಡುಗಿ ಹೋಗುತ್ತಿತ್ತು. ಅದರಲ್ಲೂ ನಾಡು ನುಡಿ ಭಾಷೆಯ ಸಂರಕ್ಷಣೆ ವಿಷಯದಲ್ಲಿ ರಾಜ್ ಸದಾ ಮುಂದೆ. ಆದರೆ ಅವರು ಯಾವಾಗಲೂ ಜನರಿಂದ ನಾನು ಮೇಲೆ ಬಂದೆ ಎಂದು ವಿನಮ್ರವಾಗಿ ಹೇಳುತ್ತಾ ಬಂದರು. ಸಂತನಿರಲಿ ಸಾಧಕನಿರಲಿ, ರಾಜನಿರಲಿ ಮಂತ್ರಿ ಇರಲಿ, ಸಾಮಾನ್ಯ ಕೂಲಿ ಅಥವಾ ಚಾಲಕನೇ ಆಗಿರಲಿ ರಾಜ್ ಆ ಪಾತ್ರಕ್ಕೆ ಜೀವ ತುಂಬುತ್ತಿದ್ದ ರೀತಿ ಮಾತ್ರ ವಿಸ್ಮಯ. ಕಸ್ತೂರಿ ನಿವಾಸ, ಭಕ್ತ ಕುಂಬಾರ, ಸಮಯದ ಗೊಂಬೆ, ಭಕ್ತ ಪ್ರಹ್ಲಾದ, ಬಬ್ರುವಾಹನ ಹೀಗೆ ಅನೇಕ ಚಿತ್ರಗಳಲ್ಲಿ ಅಣ್ಣಾವ್ರಿಗೆ ಅವರೇ ಸಾಟಿ. ಶಂಕರ್ ಗುರು ಚಿತ್ರದ ಮೂರು ಪಾತ್ರಗಳನ್ನು ನಿಭಾಯಿಸಿದ ರೀತಿ ಮಾತ್ರ ಅದ್ಭುತ. ಅವರ ನಟನೆಯ ಬಗ್ಗೆ ಮಾತನಾಡುವುದು ಸುಲಭದ ಕೆಲಸವಲ್ಲ.

Rajkumar
ರಾಜ್​ಕುಮಾರ್ ಅಪರೂಪದ ಫೋಟೋ

ಇಡೀ ಭಾರತೀಯ ಚಿತ್ರರಂಗದಲ್ಲಿ ನಾಯಕ ನಟನಾಗಿ ಮಾತ್ರವಲ್ಲದೇ ಅದ್ಭುತ ಗಾಯಕನಾಗಿಯೂ ಮೆರೆದವರು ಡಾ.ರಾಜ್​ಕುಮಾರ್. ಇಡೀ ಪ್ರಪಂಚದಲ್ಲಿಯೇ ಇಂಥ ನಟನನ್ನು ನೋಡುವುದು ಸಾಧ್ಯವಿಲ್ಲ ಎಂದು ವಿದೇಶಿ ರಾಯಭಾರಿಯೊಬ್ಬರು ಉದ್ಘರಿಸಿದ್ದು ಅತಿಶಯೋಕ್ತಿಯಾಗದು. ಏಕೆಂದರೆ ಇಂದಿಗೂ ಡಾ.ರಾಜ್ ಹಾಡಿಗೆ ಸಾಟಿಯೇ ಇಲ್ಲ ಎಂಬುದು ಅಪಾರ ಸಂಖ್ಯೆಯ ಅಭಿಮಾನಿಗಳ ಅಭಿಪ್ರಾಯ.

ಇದನ್ನೂ ಓದಿ: 6 ಪ್ಯಾನ್‌ ಇಂಡಿಯಾ ಸಿನಿಮಾ: ಇದು ಕನ್ನಡ ನಿರ್ದೇಶಕ ಚಂದ್ರು ಕನಸು - 6 Pan India Movies

ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ದೇವರಾಗಿ ಬೆರೆತ ಅಣ್ಣ, ಅಭಿಮಾನಿಗಳನ್ನೇ ದೇವರು ಎಂದು ಕರೆದ ದೇವತಾ ಮನುಷ್ಯ ನಮ್ಮ ನಡುವೆ ಸದಾ ಅಜರಾಮರ. ಅಣ್ಣಾವ್ರು ಮತ್ತೊಮ್ಮೆ ಹುಟ್ಟಿ ಬರಲಿ ಎಂಬುದು ಅಭಿಮಾನಿಗಳ ಬಯಕೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.