ETV Bharat / entertainment

ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾಗೆ 'ವಿಶ್ವ ಸುಂದರಿ' ಕಿರೀಟ, ಕನ್ನಡತಿ ಸಿನಿ ಶೆಟ್ಟಿಗೆ ನಿರಾಸೆ

author img

By ETV Bharat Karnataka Team

Published : Mar 10, 2024, 7:08 AM IST

ಕ್ರಿಸ್ಟಿನಾ ಪಿಸ್ಕೋವಾಗೆ ವಿಶ್ವ ಸುಂದರಿ ಕಿರೀಟ
ಕ್ರಿಸ್ಟಿನಾ ಪಿಸ್ಕೋವಾಗೆ ವಿಶ್ವ ಸುಂದರಿ ಕಿರೀಟ

ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 112 ದೇಶಗಳ ಸುಂದರಿಯರಲ್ಲಿ ಭಾರತದ ಸಿನಿ ಶೆಟ್ಟಿ ಅವರು ಅಗ್ರ 8ನೇ ಸ್ಥಾನ ಪಡೆದರು.

ಮುಂಬೈ (ಮಹಾರಾಷ್ಟ್ರ): ಭಾರತದಲ್ಲಿ 28 ವರ್ಷಗಳ ಬಳಿಕ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಅವರು 2024 ನೇ ಸಾಲಿನ 'ವಿಶ್ವ ಸುಂದರಿ'ಯಾಗಿ ಹೊರಹೊಮ್ಮಿದ್ದಾರೆ. ಭಾರತದ ಸುಂದರಿ ಮತ್ತು ಕನ್ನಡತಿ ಸಿನಿ ಶೆಟ್ಟಿ ಟಾಪ್​ ನಾಲ್ಕರಲ್ಲಿ ಸ್ಥಾನ ಪಡೆಯಲು ವಿಫಲವಾಗಿ ನಿರಾಸೆ ಅನುಭವಿಸಿದರು.

ಶನಿವಾರ ರಾತ್ರಿ ಇಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪೋಲೆಂಡ್​ನ ವಿಶ್ವ ಸುಂದರಿ ಕರೋಲಿನಾ ಬಿಲಾಸ್ಕಾ ಅವರು ವಿಶ್ವ ಸುಂದರಿ ಕಿರೀಟವನ್ನು ಕ್ರಿಸ್ಟಿನಾ ಅವರಿಗೆ ತೊಡಿಸಿದರು. ಲೆಬನಾನ್ ಸುಂದರಿ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಪ್ರಶಸ್ತಿ ಪಡೆದರು.

ಸಿನಿ ಶೆಟ್ಟಿಗೆ ನಿರಾಸೆ: ಭಾರತ ಸುಂದರಿ ಪ್ರಶಸ್ತಿ ವಿಜೇತೆ, ಕನ್ನಡತಿ 22 ವರ್ಷದ ಸಿನಿ ಶೆಟ್ಟಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಟಾಪ್​ 4 ಸುಂದರಿಯರ ಆಯ್ಕೆಯಲ್ಲಿ ಲೆಬನಾನ್​ನ ಯಾಸ್ಮಿನಾ ಜೈಟೌನ್ ಅವರ ಎದುರು ಸೋತರು. ದೇಶದಲ್ಲೇ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್​ 4 ರಲ್ಲಿ ಯಾವೊಬ್ಬ ಭಾರತೀಯ ಸುಂದರಿ ಕಾಣಿಸಿಕೊಳ್ಳದೇ ಇರುವುದು ಅಭಿಮಾನಿಗಳಿಗೆ ನಿರಾಸೆ ತರಿಸಿದೆ.

ಸುಂದರಿಯರ ಆಯ್ಕೆ ಜ್ಯೂರಿಯಲ್ಲಿ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ, ನಟಿಯರಾದ ಕೃತಿ ಸನೋನ್, ಪೂಜಾ ಹೆಗ್ಡೆ, ಕ್ರಿಕೆಟಿಗ ಹರ್ಭಜನ್ ಸಿಂಗ್, ಪತ್ರಕರ್ತ ರಜತ್ ಶರ್ಮಾ, ಸಮಾಜ ಸೇವಕಿ ಅಮೃತಾ ಫಡ್ನವಿಸ್, ಉದ್ಯಮಿ ವಿನೀತ್ ಜೈನ್, ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಜೂಲಿಯಾ ಮೊರ್ಲೆ, ಮಿಸ್ ವರ್ಲ್ಡ್ ಇಂಡಿಯಾ ಆಯೋಜಕರಾದ ಜಮಿಲ್ ಸೈದಿ, ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್​ ಸೇರಿದಂತೆ ಇನ್ನಿಬ್ಬರು ಮಾಜಿ ವಿಶ್ವ ಸುಂದರಿಯರು ಇದ್ದರು.

ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಮತ್ತು ಮಾಜಿ ವಿಶ್ವ ಸುಂದರಿ ಮೇಗನ್ ಯಂಗ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಗಾಯಕರಾದ ಶಾನ್, ನೇಹಾ ಕಕ್ಕರ್ ಮತ್ತು ಟೋನಿ ಕಕ್ಕರ್ ಅದ್ಭುತ ಪ್ರದರ್ಶನ ನೀಡಿದರು.

ಭಾರತದ ಸುಂದರಿಯರು: ಭಾರತವು 6 ಬಾರಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ರೀಟಾ ಫರಿಯಾ (1966), ಐಶ್ವರ್ಯಾ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಮಾನುಷಿ ಚಿಲ್ಲರ್ (2017) ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 71ನೇ ಸೌಂದರ್ಯ ಸ್ಪರ್ಧೆಯಲ್ಲಿ ವಿಶ್ವದ 112 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ವಿಶ್ವ ಸುಂದರಿ ಸ್ಪರ್ಧೆ; ಭಾರತದ ಪ್ರತಿನಿಧಿಯಾಗಿ ಕನ್ನಡತಿ ಸಿನಿ ಶೆಟ್ಟಿ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.