ETV Bharat / entertainment

AIನ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ: ಅಮೀರ್​ ಖಾನ್​ ಆತಂಕ

author img

By PTI

Published : Feb 24, 2024, 9:35 AM IST

Updated : Feb 24, 2024, 4:53 PM IST

Aamir Khan
ಅಮೀರ್​ ಖಾನ್​

ಕೃತಕ ಬುದ್ಧಿಮತ್ತೆ ಕುರಿತು ಬಾಲಿವುಡ್​ ನಟ ಅಮೀರ್​ ಖಾನ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬೈ: ಕೃತಕ ಬುದ್ಧಿಮತ್ತೆ (ಎಐ) ಜಗತ್ತನ್ನು ಸಮಸ್ಯೆಗೆ ದೂಡಲಿದೆ ಎಂಬ ಅಂಶವನ್ನು ಯಾರೂ ನಿರ್ಲಕ್ಷಿಸಲಾಗುವುದಿಲ್ಲ. ತಂತ್ರಜ್ಞಾನವನ್ನು ಉತ್ತಮ ಕೆಲಸಕ್ಕೆ ಬಳಸಿಕೊಳ್ಳಬೇಕು ಎಂದು ಸೂಪರ್ ಸ್ಟಾರ್ ಅಮೀರ್ ಖಾನ್ ಶುಕ್ರವಾರ ತಿಳಿಸಿದ್ದಾರೆ.

ನಾವು ಹೊಸ ರೀತಿಯ ತಂತ್ರಜ್ಞಾನವನ್ನು ಗಮನಿಸೋದನ್ನು ಮುಂದುವರಿಸುತ್ತೇವೆ. ವಿಶ್ವದಲ್ಲೀಗ ಎಐ ಬಿರುಗಾಳಿ ಬೀಸಲು ಆರಂಭಿಸಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ತಂತ್ರಜ್ಞಾನದ ವಿಷಯದಲ್ಲಿ ನಾನು ಹಿಂದೆ ಇದ್ದೇನೆ. ನನ್ನ ಜೀವನ ತಂತ್ರಜ್ಞಾನದ ಬದಲಾಗಿ ಕಥೆಗಳ ಸುತ್ತ ಸುತ್ತುತ್ತದೆ.

ತಂತ್ರಜ್ಞಾನದ ವಿಷಯದಲ್ಲಿ ಹಿಂದೆ ಸರಿಯಲು ಸಾಧ್ಯವಿಲ್ಲ. ಯಾವುದೇ ವೃತ್ತಿಯಾಗಿರಲಿ ಅಥವಾ ಉದ್ಯಮವಾಗಿರಲಿ ಹೊಸ ತಂತ್ರಜ್ಞಾನಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಅದನ್ನು ಸ್ಥಗಿತಗೊಳಿಸುವ ಅಗತ್ಯವೂ ಇಲ್ಲ. ಆದರೆ ನೀವು ಅದರೊಂದಿಗೆ ವಿಕಸನಗೊಳ್ಳಲು ಕಲಿಯಬೇಕು ಎಂದು ನಟ ಎಬಿಪಿ ಐಡಿಯಾಸ್ ಆಫ್ ಇಂಡಿಯಾ ಶೃಂಗಸಭೆ 3.0ರ ಮೊದಲ ದಿನದ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು.

ನಟ ಅಮೀರ್​​ ಖಾನ್ ಅವರ ಮಾಜಿ ಪತ್ನಿ, ನಿರ್ದೇಶಕಿ ಕಿರಣ್ ರಾವ್ ಅವರು ತಮ್ಮ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಲಾಪತಾ ಲೇಡಿಸ್'ನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸೂಪರ್‌ ಸ್ಟಾರ್‌ ಅಮೀರ್​ ಜೊತೆಗೂಡಿ ದೇಶಾದ್ಯಂತ ಪ್ರಚಾರ ಮಾಡುತ್ತಿದ್ದು, 'ಟೆಲ್ಲಿಂಗ್ ಲಾಪತಾ ಟೇಲ್ಸ್' ಎಂಬ ಅಧಿವೇಶನದ ಭಾಗವಾಗಿದ್ದರು. ಆ ಸಂದರ್ಭ ಕಿರಣ್​ ರಾವ್ ಅವರೂ ಕೂಡ ಅಮೀರ್​ ಅವರಂತೆಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಂತ್ರಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಎಐನಿಂದ ನಿಜವಾಗಿಯೂ ಏನಾಗಬಹುದು ಎಂಬುದು ನನಗೆ ತಿಳಿದಿಲ್ಲ. ChatGPT ಶಾಲಾ ಮಕ್ಕಳಿಗೆ ಸಹಾಯ ಮಾಡಬಹುದು. ಇದು ಬರವಣಿಗೆ, ಎಡಿಟಿಂಗ್​ನಲ್ಲಿ ಸಹಾಯ ಮಾಡುತ್ತದೆ ಎಂಬುದು ನಮಗೆ ತಿಳಿದಿದೆ. ಅದನ್ನು ಬರವಣಿಗೆಯಲ್ಲಿ ಅನುಮತಿಸಬೇಕೇ ಅಥವಾ ಬೇಡವೇ ಎಂಬ ಚರ್ಚೆ ಇದೆ. ನೀವು ಎಐ ಬಳಕೆಯನ್ನು ನಿಲ್ಲಿಸಬಹುದು ಎಂದು ನಾನು ಭಾವಿಸುವುದಿಲ್ಲ. ನಾವೆಲ್ಲರೂ ಕೆಲ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ನಾವು ಅದನ್ನು ಹೇಗೆ? ಎಷ್ಟು ಚೆನ್ನಾಗಿ ಬಳಸಬಹುದು? ಎಂಬುದರ ಮೇಲೆ ತಂತ್ರಜ್ಞಾನದ ಬಳಕೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಡಬ್ಲ್ಯುಪಿಎಲ್ 2024: ಶಾರುಖ್​​ ಭರ್ಜರಿ ಡ್ಯಾನ್ಸ್; 'ನಾರಿ ಶಕ್ತಿ' ಬಗ್ಗೆ ಎಸ್​ಆರ್​ಕೆ ಗುಣಗಾನ

ಅಮೀರ್ ಖಾನ್ ಪ್ರೊಡಕ್ಷನ್ಸ್​ ಮತ್ತು ಕೈಂಡ್ಲಿಂಗ್​ ಪ್ರೊಡಕ್ಷನ್ಸ್ ನಿರ್ಮಾಣದ ಲಾಪತಾ ಲೇಡಿಸ್​​ ಗ್ರಾಮೀಣ ಭಾರತದ ಇಬ್ಬರು ವಧುಗಳ ಮೇಲೆ ಹೆಣೆದ ಚಿತ್ರವಾಗಿದೆ. ರೈಲಿನಲ್ಲಿ ಸಂಚರಿಸುತ್ತಿದ್ದ ಸಮಯದಲ್ಲಿ ಪರಿಚಯವಾಗಿ ತಮ್ಮ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ರಂಗ್ ದೇ ಬಸಂತಿ, ತಾರೆ ಝಮೀನ್ ಪರ್‌ನಂತಹ ಸಾಮಾಜಿಕ ಸಂದೇಶವುಳ್ಳ ಚಿತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿರುವ ಖಾನ್ ಅವರು ವಿಷಯಾಧಾರಿತ ಸಿನಿಮಾ ಮೇಲೆ ಗಮನ ಹರಿಸುವುದಾಗಿ ತಿಳಿಸಿದ್ದರು. ಲಾಪತಾ ಲೇಡಿಸ್​​ ಮಾರ್ಚ್ 1ರಂದು ತೆರೆಕಾಣಲಿದೆ.

ಇದನ್ನೂ ಓದಿ: 'ದಂಗಲ್​' ಸಹ ನಟಿ ಸುಹಾನಿ ಭಟ್ನಾಗರ್​ ಕುಟುಂಬಕ್ಕೆ ಅಮೀರ್​ ಖಾನ್​​ ಸಾಂತ್ವನ

Last Updated :Feb 24, 2024, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.