ETV Bharat / bharat

ಹಾಸನ ವಿಡಿಯೋ ಕೇಸಲ್ಲಿ ಕಾಂಗ್ರೆಸ್​ ಸರ್ಕಾರ ಇದುವರೆಗೂ ಯಾಕೆ ಕ್ರಮ ಜರುಗಿಸಿಲ್ಲ: ಅಮಿತ್​ ಶಾ - HASSAN PEN DRIVE CASE

author img

By ETV Bharat Karnataka Team

Published : Apr 30, 2024, 2:59 PM IST

Updated : Apr 30, 2024, 3:46 PM IST

ಅಮಿತ್​ ಶಾ
ಅಮಿತ್​ ಶಾ

ಕರ್ನಾಟಕ ಸೇರಿ ದೇಶದಲ್ಲಿ ಸಂಚಲನ ಉಂಟು ಮಾಡಿರುವ ಹಾಸನ ವಿಡಿಯೋ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್​ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಟೀಕಿಸಿದ್ದಾರೆ.

ಗುವಾಹಟಿ (ಅಸ್ಸೋಂ): ಹಾಸನ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಸರ್ಕಾರ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದೆ. ಇದುವರೆಗೂ ಯಾಕೆ ಕ್ರಮ ಜರುಗಿಸಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಕರ್ನಾಟಕ ಸರ್ಕಾರವನ್ನು ಟೀಕಿಸಿದರು.

ಗುವಾಹಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, ತಪ್ಪಿತಸ್ಥರ ವಿರುದ್ಧ ಕಾನೂನುರೀತ್ಯಾ ಕ್ರಮ ಜರುಗಿಸಲು ಜೆಡಿಎಸ್​ ಪಕ್ಷವೇ ಸೂಚಿಸಿದೆ. ಇದು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಪ್ರಕರಣವಾಗಿದೆ. ಕೇಂದ್ರ ಸರ್ಕಾರ ಕ್ರಮ ಜರುಗಿಸಲು ಸಾಧ್ಯವಿಲ್ಲ. ಪ್ರಿಯಾಂಕಾ ವಾದ್ರಾ ಅವರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಯಾವ ಸರ್ಕಾರವಿದೆ. ಪ್ರಕರಣವನ್ನು ಶೀಘ್ರವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾದ ಹೊಣೆ ಯಾರದ್ದು ಎಂದು ಪ್ರಶ್ನಿಸಿದರು.

ಹೆಣ್ಣು ಮಕ್ಕಳ (ಮಾತೃಶಕ್ತಿ) ಪರವಾಗಿ ಬಿಜೆಪಿ ಯಾವಾಗಲೂ ನಿಂತಿರುತ್ತದೆ. ಪಕ್ಷ ತನಿಖೆಯನ್ನು ಬೆಂಬಲಿಸುತ್ತದೆ. ನಮ್ಮ ಪಾಲುದಾರ ಪಕ್ಷವಾದ ಜೆಡಿಎಸ್ ಕೂಡ ಆರೋಪಿ ವಿರುದ್ಧ ಕ್ರಮ ಜರುಗಿಸುವುದಾಗಿ ಘೋಷಿಸಿದೆ. ತನಿಖಾ ತಂಡಕ್ಕೂ ಈ ಬಗ್ಗೆ ಹೇಳಿಕೆ ನೀಡಿದೆ. ಇಷ್ಟಿದ್ದರೂ ಅಲ್ಲಿನ ಸರ್ಕಾರ ತನಿಖೆ ವಿಳಂಬ ಮಾಡುತ್ತಿರುವುದೇಕೆ?. ನಾವು ದೇಶದ ಮಹಿಳೆಯರ ಪರ ಯಾವಾಗಲೂ ಇರುತ್ತೇವೆ. ದೇಶದ ಮಾತೃಶಕ್ತಿ ಜೊತೆ ನಿಲ್ಲುತ್ತೇವೆ ಎಂಬುದು ಬಿಜೆಪಿಯ ಸ್ಪಷ್ಟ ನಿಲುವಾಗಿದೆ ಎಂದರು.

ಧರ್ಮಾಧಾರಿತ ಮೀಸಲಾತಿಗೆ ವಿರೋಧ: ಭಾರತೀಯ ಜನತಾ ಪಕ್ಷವು ಧರ್ಮದ ಆಧಾರದ ಮೇಲಿನ ಮೀಸಲಾತಿಯನ್ನು ವಿರೋಧಿಸುತ್ತದೆ. ಇದೊಂದು ಅಸಂವಿಧಾನಿಕ ನಡೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಧರ್ಮದ ಆಧಾರದ ಮೇಲೆ ನೀಡಲಾದ ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಕೇಂದ್ರ ಗೃಹ ಸಚಿವರು ಹೇಳಿದರು.

ಮೀಸಲಾತಿ ಬಗ್ಗೆ ತಮ್ಮ ಹೇಳಿಕೆಯನ್ನು ಕಾಂಗ್ರೆಸ್ ತಿರುಚಿ, ದೇಶದಲ್ಲಿ ಸುಳ್ಳು ಹಬ್ಬುತ್ತಿದೆ. ನಾವು ಧರ್ಮದ ಆಧಾರದ ಮೇಲೆ ವಿಧಿಸಲಾದ ಮೀಸಲಾತಿಯನ್ನು ಕೊನೆಗೊಳಿಸುವ ಮೂಲಕ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನ್ಯಾಯ ಒದಗಿಸುತ್ತೇವೆ. ಸಮೀಕ್ಷೆಗಳಿಲ್ಲದೇ, ಮುಸ್ಲಿಮರಿಗೆ ಮೀಸಲಾತಿಯನ್ನು ನೀಡಲಾಗಿದೆ. ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್​ ಇದನ್ನು ಜಾರಿ ಮಾಡಿದೆ. ಅದರಿಂದಾಗಿ ಒಬಿಸಿ ಮೀಸಲಾತಿ ಕಡಿಮೆಯಾಯಿತು. ನಂತರ ಕರ್ನಾಟಕದಲ್ಲೂ ಇದನ್ನೇ ಮಾಡಿತು ಎಂದು ಟೀಕಿಸಿದರು.

ನಾವು ಎಂದಿಗೂ ಮತದಾರರನ್ನು ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ಎಂಬ ದೃಷ್ಟಿಕೋನದಿಂದ ನೋಡುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಭಾರತದ ಪ್ರಜೆ, ಅವರನ್ನು ಹಾಗೆಯೇ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ಸೇರಿದಂತೆ ದೇಶಾದ್ಯಂತ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ಬಿಜೆಪಿ ಖಂಡಿತವಾಗಿಯೂ 400 ಗುರಿಯನ್ನು ದಾಟಲಿದೆ. ಅಸ್ಸೋಂ, ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರಾಖಂಡ ಸೇರಿ ಹಲವು ರಾಜ್ಯಗಳಲ್ಲಿ ಚುನಾವಣಾ ಯಶಸ್ಸನ್ನು ಸಾಧಿಸಿದ್ದೇವೆ. ದಕ್ಷಿಣ ಭಾರತದಲ್ಲಿಯೂ ಕಮಲ ಅರಳಲಿದೆ ಎಂದು ಶಾ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಹಾಸನ ವಿಡಿಯೋ ಪ್ರಕರಣ: ಜೆಡಿಎಸ್​ನಿಂದ ಪ್ರಜ್ವಲ್ ರೇವಣ್ಣ ಅಮಾನತು - JDS Suspends Prajwal Revanna

Last Updated :Apr 30, 2024, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.