ETV Bharat / bharat

ಫೆಬ್ರವರಿ 27 ರಂದು ರಾಜ್ಯಸಭೆಯ 56 ಸ್ಥಾನಗಳಿಗೆ ಚುನಾವಣೆ: ಆಯೋಗದಿಂದ ಪ್ರಕಟ

author img

By ETV Bharat Karnataka Team

Published : Jan 29, 2024, 3:05 PM IST

Updated : Jan 29, 2024, 5:13 PM IST

ರಾಜ್ಯಸಭೆ ಚುನಾವಣೆ
ರಾಜ್ಯಸಭೆ ಚುನಾವಣೆ

ರಾಜ್ಯಸಭೆಯ 56 ಸ್ಥಾನಗಳಿಗೆ ಚುನಾವಣೆ ನಡೆಸಲು ಆಯೋಗ ಮುಹೂರ್ತ ನಿಗದಿ ಮಾಡಿದೆ.

ನವದೆಹಲಿ: ಕರ್ನಾಟಕ ನಾಲ್ಕು ಸೇರಿದಂತೆ 15 ರಾಜ್ಯಗಳಲ್ಲಿ ತೆರವಾಗುವ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸೋಮವಾರ ದಿನಾಂಕ ಪ್ರಕಟಿಸಿದೆ. ಫೆಬ್ರವರಿ 27 ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ಕೂಡ ಮುಗಿಯಲಿದೆ.

ಆಯೋಗದ ಪ್ರಕಟಣೆಯ ಪ್ರಕಾರ, ಫೆಬ್ರವರಿ 8 ರಂದು ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ರಾಜ್ಯಸಭೆಗಳಿಗೆ ನಾಮನಿರ್ದೇಶನ ಮಾಡಲು ಫೆಬ್ರವರಿ 15 ಕೊನೆಯ ದಿನಾಂಕವಾಗಿರಲಿದೆ. ಮರುದಿನ (ಫೆಬ್ರವರಿ 16) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಫೆಬ್ರವರಿ 20 ಕೊನೆಯ ದಿನಾಂಕ. ಫೆಬ್ರವರಿ 27 ರಂದು ಬೆಳಗ್ಗೆ 9 ರಿಂದ ಸಂಜೆ 4 ರ ನಡುವೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ಕೂಡ ನಡೆಯಲಿದೆ ಎಂದು ತಿಳಿಸಿದೆ.

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನ?: ಈಗ ಚುನಾವಣೆ ನಡೆಸಲು ಉದ್ದೇಶಿರುವ ಸ್ಥಾನಗಳ ಅವಧಿಯು ಏಪ್ರಿಲ್ 2 ರಂದು ಮುಗಿಯಲಿದೆ. ಸಂಸದರ ಸ್ಥಾನ ತೆರವಾಗುವ ನಿಟ್ಟಿನಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಗರಿಷ್ಠ 10 ರಾಜ್ಯಸಭಾ ಸದಸ್ಯರು ಅವಧಿ ಮುಗಿಸಲಿದ್ದಾರೆ. ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ತಲಾ 6, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ತಲಾ 5, ಕರ್ನಾಟಕ ಮತ್ತು ಗುಜರಾತ್‌ನಿಂದ ತಲಾ 4, ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ತಲಾ ಮೂರು, ಛತ್ತೀಸ್‌ಗಢ, ಉತ್ತರಾಖಂಡ, ಹರಿಯಾಣ, ಹಿಮಾಚಲ ಪ್ರದೇಶದಿಂದ ತಲಾ ಒಬ್ಬರು ಅವಧಿ ಪೂರ್ಣ ಮಾಡಲಿದ್ದಾರೆ.

ಕರ್ನಾಟಕದ ಸದಸ್ಯರಾರು?: ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್​ ಚಂದ್ರಶೇಖರ್​, ಕಾಂಗ್ರೆಸ್​ನ ಎಲ್​ ಹನುಮಂತಯ್ಯ, ಜಿಸಿ ಚಂದ್ರಶೇಖರ್​, ಸೈಯದ್​ ನಾಸಿರ್​ ಹುಸೇನ್​ ಅವರ ಅವಧಿಯು ಇದೇ ಏಪ್ರಿಲ್​ 2 ರಂದು ಮುಗಿಯಲಿದೆ. ಈ ಪೈಕಿ ರಾಜೀವ್​ ಚಂದ್ರಶೇಖರ್​ ಅವರನ್ನು ಬಿಜೆಪಿ ಮರು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ಕಾಂಗ್ರೆಸ್​ ಮೂರು ಸ್ಥಾನಗಳಿಗೆ ಸ್ಪರ್ಧೆ ನಡೆಸಲಿದೆ.

ಒಡಿಶಾ ಮತ್ತು ರಾಜಸ್ಥಾನದಿಂದ ಆಯ್ಕೆಯಾದ ತಲಾ ಮೂವರು ಏಪ್ರಿಲ್ 3 ರಂದು ಅವಧಿ ಮುಗಿಸಲಿದ್ದು, ಅವರ ಸ್ಥಾನಕ್ಕೂ ಅಂದೇ ಚುನಾವಣೆ ನಡೆಯಲಿದೆ. ರಾಜ್ಯಸಭೆಯು ಸಂಸತ್ತಿನ ಮೇಲ್ಮನೆಯಾಗಿದೆ. ಅಲ್ಲಿನ ಸದಸ್ಯರನ್ನು ರಾಜ್ಯಗಳ ವಿಧಾನಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ. ಅವರು ವರ್ಗಾಯಿಸುವ ಒಂದು ಮತದ ಮೂಲಕ ಅನುಪಾತದ ಪ್ರಾತಿನಿಧ್ಯದ ಮೇಲೆ ಆಯ್ಕೆಯಾಗಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಎನ್​ಡಿಎ ಅಭ್ಯರ್ಥಿ ಎ ಪಿ ರಂಗನಾಥ್ ನಾಮಪತ್ರ ಸಲ್ಲಿಕೆ

Last Updated :Jan 29, 2024, 5:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.