ETV Bharat / bharat

ಆಂಧ್ರ ರೈಲು ದುರಂತಕ್ಕೆ ಚಾಲಕ, ಸಹಾಯಕ ಚಾಲಕನ​ ಕ್ರಿಕೆಟ್​​ ಹುಚ್ಚು ಕಾರಣ: ಸಚಿವ ಅಶ್ವಿನಿ ವೈಷ್ಣವ್​

author img

By PTI

Published : Mar 3, 2024, 8:25 AM IST

ಆಂಧ್ರಪ್ರದೇಶದಲ್ಲಿ ಕಳೆದ ವರ್ಷ ನಡೆದಿದ್ದ ರೈಲುಗಳ ಡಿಕ್ಕಿಯ ವೇಳೆ ಲೋಕೋ ಪೈಲಟ್​ ಮೊಬೈಲ್​ನಲ್ಲಿ ಕ್ರಿಕೆಟ್​ ನೋಡುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದ್ದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ತಿಳಿಸಿದ್ದಾರೆ.

ಆಂಧ್ರ ರೈಲು ದುರಂತ
ಆಂಧ್ರ ರೈಲು ದುರಂತ

ನವದೆಹಲಿ: ಕಳೆದ ವರ್ಷ ಆಂಧ್ರಪ್ರದೇಶದಲ್ಲಿ ಎರಡು ಪ್ಯಾಸೆಂಜರ್​ ರೈಲುಗಳು ಡಿಕ್ಕಿಯಾಗಿ 14 ಜನರು ಬಲಿಯಾಗಿ, 50 ಮಂದಿ ಗಾಯಗೊಂಡಿದ್ದ ದುರಂತಕ್ಕೆ ಲೋಕೋ ಪೈಲಟ್​​ ಮತ್ತು ಆತನ ಸಹಾಯಕ ಮೊಬೈಲ್​ನಲ್ಲಿ ಕ್ರಿಕೆಟ್ ನೋಡುತ್ತಿದ್ದುದು ಕಾರಣ ಎಂದು ತಿಳಿದುಬಂದಿದೆ.

ಈ ಬಗ್ಗೆ ಶನಿವಾರ ಮಾಹಿತಿ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​, 2023ರ ಅಕ್ಟೋಬರ್​ 29ರಂದು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯ ಹೌರಾ-ಚೆನ್ನೈ ಮಾರ್ಗದಲ್ಲಿ ರಾಯಗಡ ಪ್ಯಾಸೆಂಜರ್ ರೈಲು ವಿಶಾಖಪಟ್ಟಣಂ ಪಲಾಸ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪ್ರಕರಣಕ್ಕೆ ಲೋಕೋಪೈಲಟ್​ ಕೆಲಸ ಮರೆತು ಮೊಬೈಲ್​ನಲ್ಲಿ ಕ್ರಿಕೆಟ್​ ನೋಡುತ್ತಿದ್ದುದು ಕಾರಣವಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯ ರೈಲ್ವೆ ಕೈಗೊಳ್ಳುತ್ತಿರುವ ಹೊಸ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡ ವೈಷ್ಣವ್, ಆಂಧ್ರ ರೈಲು ಅಪಘಾತವನ್ನು ಉಲ್ಲೇಖಿಸಿದರು. ಅಂದಿನ ಅಪಘಾತದಲ್ಲಿ 50 ಪ್ರಯಾಣಿಕರು ಗಾಯಗೊಂಡರು. 14 ಮಂದಿ ಸಾವಿಗೀಡಾದರು. ಇದಕ್ಕೆ ಸಿಬ್ಬಂದಿ ಕ್ರಿಕೆಟ್​ ನೋಡುತ್ತಿದ್ದುದು ಕಾರಣ. ಅಪಘಾತಗಳನ್ನು ತಪ್ಪಿಸಲು ಮತ್ತು ಹೆಚ್ಚಿನ ನಿಗಾ ವಹಿಸಲು ರೈಲ್ವೆ ಇಲಾಖೆಯಲ್ಲಿ ಹೊಸ ಸುರಕ್ಷತಾ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.

ಲೋಕೋ ಪೈಲಟ್​ಗಳ ಮೇಲೆ ನಿಗಾಗೆ ತಂತ್ರಜ್ಞಾನ: ಲೋಕೋ ಪೈಲಟ್​​ಗಳು ಮತ್ತು ಸಹಾಯಕ ಪೈಲಟ್​ಗಳ ಮೇಲೂ ನಿಗಾ ವಹಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ನಾವು ಪ್ರಯಾಣಿಕರ ಸುರಕ್ಷತೆಯತ್ತ ಹೆಚ್ಚಿನ ಗಮನಹರಿಸುವುದನ್ನು ಮುಂದುವರಿಸುತ್ತೇವೆ. ಪ್ರತಿ ಘಟನೆಯ ಮೂಲ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇವೆ. ಅದು ಪುನರಾವರ್ತನೆಯಾಗದಂತೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಸಿಬ್ಬಂದಿಗಳಿಬ್ಬರೂ ಸಾವು: ಅಂದು ನಡೆದ ಅಪಘಾತದ ತನಿಖಾ ವರದಿಯನ್ನು ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ಇನ್ನೂ ಬಹಿರಂಗಪಡಿಸಿಲ್ಲ. ದುರಂತದ ಮರುದಿನ ಪ್ರಾಥಮಿಕ ತನಿಖೆಯಲ್ಲಿ ಡಿಕ್ಕಿಗೆ ರಾಯಗಡ ಪ್ಯಾಸೆಂಜರ್ ರೈಲಿನ ಚಾಲಕ ಮತ್ತು ಸಹಾಯಕ ಚಾಲಕರನ್ನು ಹೊಣೆಗಾರರನ್ನಾಗಿ ಮಾಡಲಾಗಿತ್ತು. ಅವರು ನಿಯಮಗಳನ್ನು ಉಲ್ಲಂಘಿಸಿ ದೋಷಯುಕ್ತ ಸಂಕೇತಗಳನ್ನು ರವಾನಿಸಿದ್ದರು ಎಂದು ತನಿಖೆಯಲ್ಲಿ ಹೇಳಲಾಗಿತ್ತು. ಅಪಘಾತದಲ್ಲಿ ಇಬ್ಬರೂ ಸಿಬ್ಬಂದಿ ಸಾವನ್ನಪ್ಪಿದ್ದರು.

ಕ್ರಾಸಿಂಗ್​ ಸಂದರ್ಭದಲ್ಲಿ ಎರಡೂ ಪ್ಯಾಸೆಂಜರ್​ ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದವು. ಸಾವಿಗೀಡಾದವರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ 10 ಲಕ್ಷ ಪರಿಹಾರ ಹಾಗೂ ಗಂಭೀರ ಗಾಯಗೊಂಡವರ ಕುಟುಂಬಸ್ಥರಿಗೆ 2 ಲಕ್ಷ ರೂ ಪರಿಹಾರ ಘೋಷಿಸಲಾಗಿತ್ತು. ಜೊತೆಗೆ ಬೇರೆ ರಾಜ್ಯದ ಮೃತ ಪ್ರಯಾಣಿಕರಿಗೆ 2 ಲಕ್ಷ ರೂ. ಹಾಗೂ ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಆಂಧ್ರ ರೈಲು ಅಪಘಾತ : ಸಾವಿನ ಸಂಖ್ಯೆ 14ಕ್ಕೆ ಏರಿಕೆ..ಸಿಎಂ ಜಗನ್​ ಜೊತೆ ಮಾತುಕತೆ ನಡೆಸಿದ ರೈಲ್ವೆ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.