ETV Bharat / bharat

63 ದಿನಗಳ ಭಾರತ್ ಜೋಡೋ ನ್ಯಾಯ್ ಯಾತ್ರೆ ಮುಕ್ತಾಯ: ನಾಳೆ ಮುಂಬೈನಲ್ಲಿ 'ಇಂಡಿಯಾ' ಮೈತ್ರಿಕೂಟದ ಶಕ್ತಿ ಪ್ರದರ್ಶನ

author img

By PTI

Published : Mar 16, 2024, 11:01 PM IST

ಮಣಿಪುರದ ಇಂಫಾಲ್‌ನಿಂದ ಆರಂಭವಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಶನಿವಾರ ಮಹಾರಾಷ್ಟ್ರದ ಮುಂಬೈಗೆ ತಲುಪಿ ಪೂರ್ಣಗೊಂಡಿದೆ.

Rahul Gandhi concludes Bharat Jodo Nyay Yatra by reading Preamble of Constitution
63 ದಿನಗಳ ಭಾರತ್ ಜೋಡೋ ನ್ಯಾಯ್ ಯಾತ್ರೆ ಮುಕ್ತಾಯ

ಮುಂಬೈ (ಮಹಾರಾಷ್ಟ್ರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆ ಶನಿವಾರ ಸಂಜೆಗೆ ಮುಕ್ತಾಯಗೊಂಡಿದೆ. ಮಣಿಪುರದಿಂದ ಆರಂಭವಾಗಿದ್ದ ಯಾತ್ರೆಯು 63 ದಿನಗಳ ಕಾಲ ಸಂಚರಿಸಿ ಮಹಾರಾಷ್ಟ್ರದ ಮುಂಬೈಗೆ ತಲುಪುವ ಮೂಲಕ ಅಂತ್ಯವಾಗಿದೆ. ಸೆಂಟ್ರಲ್ ಮುಂಬೈನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮಾರಕ 'ಚೈತ್ಯಭೂಮಿ'ಯಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ರಾಹುಲ್ ತಮ್ಮ​ ಯಾತ್ರೆ ಪೂರ್ಣಗಳಿಸಿದರು.

ಜನವರಿ 14ರಂದು ಮಣಿಪುರದ ಇಂಫಾಲ್‌ನಿಂದ ರಾಹುಲ್ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಿಸಿದ್ದರು. ಅಲ್ಲಿಂದ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಸ್ಸೋಂ, ಮೇಘಾಲಯ, ಪಶ್ಚಿಮ ಬಂಗಾಳ, ಛತ್ತೀಸ್​ಗಢ, ಮಧ್ಯಪ್ರದೇಶ, ರಾಜಸ್ಥಾನ ಸೇರಿ ಇತರ ರಾಜ್ಯಗಳಲ್ಲಿ ಸಂಚರಿಸಿ, ಮಹಾರಾಷ್ಟ್ರಕ್ಕೆ ಪ್ರವೇಶಿಸಿತ್ತು. ಇಂದು ಥಾಣೆಯಿಂದ ಮುಂಬೈಗೆ ಪ್ರವೇಶಿಸಿ, ಚೈತ್ಯಭೂಮಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಾಯಿತು. ನಂತರ ಸಂವಿಧಾನದ ಪೀಠಿಕೆ ಓದುವ ಮೂಲಕ ಮುಕ್ತಾಯಗೊಳಿಸಲಾಯಿತು. ರಾಹುಲ್ ಗಾಂಧಿ ಜೊತೆಗೆ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಧಾರಾವಿ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಜಾತಿ ಗಣತಿ ನಡೆಸಲಾಗುವುದು ಮತ್ತು ದೇಶದ ಬಡ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗುವುದು ಎಂದು ತಿಳಿಸಿದರು. ಭಾನುವಾರ ಬೆಳಗ್ಗೆ ಮುಂಬೈನ ಮಣಿ ಭವನದಿಂದ ರಾಹುಲ್​ ಗಾಂಧಿ 'ಆಗಸ್ಟ್ ಕ್ರಾಂತಿ' ಮೈದಾನದವರೆಗೆ ನ್ಯಾಯ ಸಂಕಲ್ಪ ಪಾದಯಾತ್ರೆ ಕೈಗೊಳ್ಳಲಿದ್ದಾರೆ.

'ಇಂಡಿಯಾ' ಮೈತ್ರಿಕೂಟದ ಶಕ್ತಿ ಪ್ರದರ್ಶನ: ಮುಂಬೈನಲ್ಲಿ ಭಾನುವಾರ ಕಾಂಗ್ರೆಸ್​ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಶಕ್ತಿ ಪ್ರದರ್ಶನ ನಡೆಯಲಿದೆ. ರಾಹುಲ್​ ಗಾಂಧಿ ಅವರ ನ್ಯಾಯ ಸಂಕಲ್ಪ ಪಾದಯಾತ್ರೆಯ ಬಳಿಕ ಇಲ್ಲಿನ ಪ್ರಸಿದ್ಧ ಶಿವಾಜಿ ಪಾರ್ಕ್‌ನಲ್ಲಿ ಬಹಿರಂಗ ಸಭೆ ನಡೆಯಲಿದೆ. ಇದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪಾಲ್ಗೊಳ್ಳಲಿದ್ದಾರೆ.

ಪ್ರಮುಖವಾಗಿ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ದೆಹಲಿ ಆರೋಗ್ಯ ಸಚಿವ, ಎಎಪಿ ನಾಯಕ ಸೌರಭ್ ಭಾರದ್ವಾಜ್, ಸಿಪಿಐ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾರ್ಚಾಯ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್, ಮಾಜಿ ಸಿಎಂ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಭಾಗವಹಿಸಲಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್​ ನಾಯಕರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಅನುಕೂಲ ಮಾಡಿಕೊಳ್ಳಲೆಂದೇ ಏಳು ಹಂತದಲ್ಲಿ ಲೋಕಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.