ETV Bharat / bharat

ನಿಮ್ಮ ಪತ್ರ ನನಗೆ ಅಪಾರ ಬೆಂಬಲ, ಶಕ್ತಿ ನೀಡಿದೆ: ರಾಷ್ಟ್ರಪತಿ ಪತ್ರಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ

author img

By ANI

Published : Jan 24, 2024, 10:43 AM IST

PM Narendra Modi  President Droupadi Murmu  ಅಯೋಧ್ಯೆ ರಾಮಮಂದಿರ  ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ  Ayodhya Ram Madir
ನಿಮ್ಮ ಪತ್ರ ನನಗೆ ಅಪಾರ ಬೆಂಬಲ, ಶಕ್ತಿಯನ್ನು ನೀಡಿದೆ: ರಾಷ್ಟ್ರಪತಿ ಮುರ್ಮು ಪತ್ರಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ

ನಿಮ್ಮ ಪತ್ರ ನನಗೆ ಅಪಾರ ಬೆಂಬಲ, ಶಕ್ತಿಯನ್ನು ನೀಡಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬರೆದಿರುವ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಬರೆದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ''ರಾಮಮಂದಿರದಲ್ಲಿ ರಾಮಲಲ್ಲಾನ ಮಹಾಮಸ್ತಕಾಭಿಷೇಕವನ್ನು ವೀಕ್ಷಿಸಿರುವುದು ನನ್ನ ಜೀವನದ "ಅವಿಸ್ಮರಣೀಯ" ಕ್ಷಣಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರ ಪತ್ರ ನನಗೆ ಅಪಾರ ಬೆಂಬಲ ಹಾಗೂ ಶಕ್ತಿ ನೀಡಿತು'' ಎಂದು ಮೋದಿ ಹೇಳಿದ್ದಾರೆ.

"ನಾನು ಮನಸ್ಸಿನಲ್ಲಿ ಅಯೋಧ್ಯೆಯನ್ನು ತುಂಬಿಕೊಂಡು ಮರಳಿದ್ದೇನೆ. ಅಂತಹ ಅಯೋಧ್ಯೆ ನನ್ನಿಂದ ಎಂದಿಗೂ ದೂರವಾಗುವುದಿಲ್ಲ" ಎಂದು ಅವರು ರಾಷ್ಟ್ರಪತಿಗಳ ಪತ್ರಕ್ಕೆ ಉತ್ತರಿಸಿದ್ದಾರೆ. ''ಅಯೋಧ್ಯೆಗೆ ಹೊರಡುವ ಒಂದು ದಿನ ಮೊದಲು ನನಗೆ ನಿಮ್ಮ ಪತ್ರ ಲಭಿಸಿತು. ನಿಮ್ಮ ಶುಭ ಹಾರೈಕೆ ಮತ್ತು ಪ್ರೀತಿಗೆ ನಾನು ತುಂಬಾ ಕೃತಜ್ಞ" ಎಂದು ತಿಳಿಸಿದ್ದಾರೆ.

ಯಾತ್ರಿಕನಾಗಿ ಅಯೋಧ್ಯೆಗೆ ಭೇಟಿ ನೀಡಿದೆ-ಮೋದಿ: "ನಾನು ಯಾತ್ರಿಕನಾಗಿ ಅಯೋಧ್ಯಾ ಧಾಮಕ್ಕೆ ಭೇಟಿ ನೀಡಿದ್ದೇನೆ. ಅಪಾರ ನಂಬಿಕೆ ಮತ್ತು ಇತಿಹಾಸದ ಸಂಗಮದ ಪವಿತ್ರ ಭೂಮಿಗೆ ಭೇಟಿ ನೀಡಿದ ನಂತರ ನನ್ನ ಮನಸ್ಸು ಅನೇಕ ಭಾವನೆಗಳಲ್ಲಿ ಮುಳುಗಿದೆ. ಐತಿಹಾಸಿಕ ಸಂದರ್ಭವನ್ನು ವೀಕ್ಷಿಸುವುದು ಒಂದು ಸೌಭಾಗ್ಯ ಮತ್ತು ಜವಾಬ್ದಾರಿ" ಎಂದಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶವಾಗಲು ರಾಮನ ಚಿಂತನೆಗಳು ಬೇಕು: 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುವ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಭಗವಾನ್ ಶ್ರೀರಾಮನ ಶಾಶ್ವತ ಚಿಂತನೆಗಳು ಸಹಾಯ ಮಾಡುತ್ತವೆ ಎಂದು ಮೋದಿ ಉಲ್ಲೇಖಿಸಿದ್ದಾರೆ. ಕಳೆದ ದಶಕದಲ್ಲಿ, ದೇಶವು ಸುಮಾರು 25 ಕೋಟಿ ಜನರನ್ನು ಬಡತನದಿಂದ ಹೊರತರುವಲ್ಲಿ ಯಶಸ್ವಿಯಾಗಿದೆ. ರಾಮನ ಚಿಂತನೆಗಳು ಭಾರತದ ಭವ್ಯ ಭವಿಷ್ಯಕ್ಕೆ ಆಧಾರವಾಗಿವೆ ಎಂದು ಪ್ರಧಾನಿ ಹೇಳಿದ್ದಾರೆ.

ರಾಷ್ಟ್ರಪತಿ ಮುರ್ಮು ಪತ್ರ: ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾ ಸಮಾರಂಭದ ಮುನ್ನಾದಿನದಂದು ಪ್ರಧಾನಿಗೆ ಬರೆದ ಪತ್ರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಗವಾನ್ ರಾಮನ ನ್ಯಾಯ ಮತ್ತು ಜನರ ಕಲ್ಯಾಣದ ಚಿಂತನೆಗಳು ನಮ್ಮ ದೇಶದ ಆಡಳಿತದ ದೃಷ್ಟಿಕೋನದಲ್ಲಿ ಪ್ರತಿಫಲಿಸುತ್ತಿವೆ. ಪ್ರಧಾನಿ ಮೋದಿ ಅವರು ಕೈಗೊಂಡಿರುವ 11 ದಿನಗಳ ಕಠಿಣ ಅನುಷ್ಠಾನವು ಕೇವಲ ಪವಿತ್ರ ಆಚರಣೆ ಮಾತ್ರವಲ್ಲ, ತ್ಯಾಗ ಮತ್ತು ಪ್ರಭು ಶ್ರೀರಾಮನಿಗೆ ಸಲ್ಲಿಸುವ ಅತ್ಯುನ್ನತ ಆಧ್ಯಾತ್ಮಿಕ ಕಾರ್ಯ.

ಪ್ರಭು ಶ್ರೀರಾಮ ಪ್ರತಿನಿಧಿಸುವ ಸಾರ್ವತ್ರಿಕ ಮೌಲ್ಯಗಳಾದ ಧೈರ್ಯ, ಸಹಾನುಭೂತಿ ಮತ್ತು ಕರ್ತವ್ಯದ ಮೇಲಿನ ನಿರಂತರ ಗಮನವನ್ನು ಈ ಭವ್ಯ ದೇವಾಲಯದ ಮೂಲಕ ಜನರ ಹತ್ತಿರ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಶ್ರೀರಾಮ ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಅತ್ಯುತ್ತಮ ಅಂಶಗಳನ್ನು ತಿಳಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರು ಕೆಟ್ಟದ್ದರೊಂದಿಗೆ ನಿರಂತರ ಯುದ್ಧದಲ್ಲಿರುವ ಒಳ್ಳೆಯದನ್ನು ಪ್ರತಿನಿಧಿಸಿದ್ದಾರೆ ಎಂದು ದ್ರೌಪದಿ ಮುರ್ಮು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ, ಇತರೆ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್: ಅಸ್ಸಾಂ ಸಿಎಂ ಹಿಮಂತ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.