ETV Bharat / bharat

ಮಾಜಿ ಪಿಎಂ ನರಸಿಂಹರಾವ್ ಸೇರಿ ನಾಲ್ವರಿಗೆ ಮರಣೋತ್ತರ 'ಭಾರತ ರತ್ನ' ಪ್ರದಾನ ಮಾಡಿದ ರಾಷ್ಟ್ರಪತಿ - Bharat Ratna

author img

By ANI

Published : Mar 30, 2024, 2:34 PM IST

ಭಾರತ ರತ್ನ'
ಭಾರತ ರತ್ನ'

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಜಿ ಪ್ರಧಾನಿಗಳಾದ ಪಿ ವಿ ನರಸಿಂಹ ರಾವ್ ಮತ್ತು ಚೌಧರಿ ಚರಣ್ ಸಿಂಗ್, ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನವನ್ನು ಪ್ರದಾನ ಮಾಡಿದರು.

ನವದೆಹಲಿ: ಮಾಜಿ ಪ್ರಧಾನಿಗಳಾದ ಪಿವಿ ನರಸಿಂಹರಾವ್ ಮತ್ತು ಚೌಧರಿ ಚರಣ್ ಸಿಂಗ್, ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ'ವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ವರು ದಿಗ್ಗಜರಿಗೆ ಮರಣೋತ್ತರ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಮಾಜಿ ಪ್ರಧಾನಿ ದಿವಂಗತ ನರಸಿಂಹರಾವ್ ಅವರ ಪರವಾಗಿ ಪುತ್ರ ಪಿವಿ ಪ್ರಭಾಕರ್​ ರಾವ್​ ಅವರು ಪ್ರಶಸ್ತಿ ಪಡೆದರೆ, ಇನ್ನೊಬ್ಬ ಮಾಜಿ ಪಿಎಂ ಚೌಧರಿ ಚರಣ್​ ಸಿಂಗ್ ಅವರ ಮೊಮ್ಮಗ ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಅಧ್ಯಕ್ಷ ಜಯಂತ್ ಚೌಧರಿ ಅವರು ಮುರ್ಮು ಅವರಿಂದ ಗೌರವ ಸ್ವೀಕರಿಸಿದರು.

ಹಸಿರು ಕ್ರಾಂತಿಯ ಹರಿಕಾರ ಖ್ಯಾತಿಯ ಎಂಎಸ್​ ಸ್ವಾಮಿನಾಥನ್ ಅವರ ಪರವಾರಿ ಪುತ್ರಿ ನಿತ್ಯಾ ರಾವ್ ಮತ್ತು ಕರ್ಪೂರಿ ಠಾಕೂರ್ ಅವರ ಪರವಾಗಿ ಪುತ್ರ ರಾಮ್​ನಾಥ್ ಠಾಕೂರ್ ಅವರು ರಾಷ್ಟ್ರಪತಿಗಳಿಂದ ಭಾರತ ರತ್ನವನ್ನು ಸ್ವೀಕರಿಸಿದರು. ಅದ್ಧೂರಿ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಎಲ್​ಕೆ ಅಡ್ವಾಣಿ ನಿವಾಸದಲ್ಲಿ ಪ್ರದಾನ: ಕೇಂದ್ರ ಸರ್ಕಾರ ಈ ವರ್ಷ 5 ದಿಗ್ಗಜರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ್ದು, ಅದರಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಧೀಮಂತ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ಅವರೂ ಸೇರಿದ್ದಾರೆ. ಇಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆರೋಗ್ಯ ಸಮಸ್ಯೆ ಕಾರಣ ಅಡ್ವಾಣಿ ಅವರು ಹಾಜರಾಗಿಲ್ಲ. ಅನಾರೋಗ್ಯ ಹಿನ್ನೆಲೆಯಲ್ಲಿ ಎಲ್‌ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಅವರ ನಿವಾಸದಲ್ಲಿ ಪ್ರದಾನ ಮಾಡಲಾಗುತ್ತದೆ.

ಪ್ರಶಸ್ತಿಯ ಬಗ್ಗೆ ಒಂದಷ್ಟು ಮಾಹಿತಿ: ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಜನವರಿ 2, 1954 ರಂದು ನೀಡಲು ಪ್ರಾರಂಭಿಸಿದರು. ಸಿ ರಾಜಗೋಪಾಲಾಚಾರಿ, ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸರ್ ಸಿವಿ ರಾಮನ್ ಅವರಿಗೆ ಮೊದಲ ಭಾರತ ರತ್ನ ನೀಡಿ ಗೌರವಿಸಲಾಗಿತ್ತು. ಮೊದಲು ಮರಣೋತ್ತರವಾಗಿ ಪ್ರಶಸ್ತಿ ನೀಡುವ ಪರಿಕಲ್ಪನೆ ಇರಲಿಲ್ಲ. 1966 ರಲ್ಲಿ ಮರಣಾನಂತರವೂ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.

ಈ ಪ್ರಶಸ್ತಿ ನೀಡಲು ಪ್ರಾರಂಭಿಸಿದ ನಂತರ ಸುಮಾರು 18 ಸಾಧಕರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಈ ವರ್ಷ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಮಾಜಿ ಪ್ರಧಾನಿಗಳಾದ ಚೌಧರಿ ಚರಣ್​ ಸಿಂಗ್​, ಪಿವಿ ನರಸಿಂಹರಾವ್​, ಎಂಎಸ್​ ಸ್ವಾಮಿನಾಥನ್​ ಅವರಿಗೆ ನೀಡಲಾಗಿದೆ. ಈ ಮೂಲಕ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದವರ ಸಂಖ್ಯೆ 53ಕ್ಕೆ ಏರಿಕೆ ಆಗಿದೆ.

ಇದನ್ನೂ ಓದಿ: ಈ ವರ್ಷ ಐವರಿಗೆ ಭಾರತ ರತ್ನ: ಹಾಗಾದರೆ ಪ್ರಶಸ್ತಿಯ ಅರ್ಹತೆ, ವಿಶೇಷತೆ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.