ETV Bharat / bharat

ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಯತ್ನ ಎಂದ ರಾಹುಲ್; ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ದೇಶದಲ್ಲಿ ಸಮೃದ್ಧಿ ಸಾಧ್ಯವಿಲ್ಲ-ಖರ್ಗೆ - INDIA Blocs Rally

author img

By PTI

Published : Mar 31, 2024, 4:25 PM IST

ಪ್ರಧಾನಿ ಮೋದಿ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ತನ್ನ ಈ ಪ್ರಯತ್ನಗಳಲ್ಲಿ ಯಶಸ್ವಿಯಾದರೆ ದೇಶದ ಸಂವಿಧಾನವನ್ನು ಬದಲಾಯಿಸಲಾಗುತ್ತದೆ ಮತ್ತು ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

INDIA BLOCS RALLY
INDIA BLOCS RALLY

ನವದೆಹಲಿ: ಪ್ರಧಾನಿ ಮೋದಿ ಮತ್ತು ಅವರ ಸಿದ್ಧಾಂತವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ದೇಶದಲ್ಲಿ ಸಮೃದ್ಧಿ ಸಾಧ್ಯವಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವುದಕ್ಕಾಗಿ ಈ ಚುನಾವಣೆಯಾಗಿದ್ದು, ನಾವು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನಲ್ಲಿ ಇಂದು ಕಾಂಗ್ರೆಸ್​ ನೇತೃತ್ವದ 'ಇಂಡಿಯಾ' ಮೈತ್ರಿಕೂಟವು ಹಮ್ಮಿಕೊಂಡಿದ್ದ 'ಸಂವಿಧಾನ ಉಳಿಸಿ' ಬೃಹತ್​ ಸಮಾವೇಶದಲ್ಲಿ ಖರ್ಗೆ ಮಾತನಾಡಿದರು. ನಿಮಗೆ ಪ್ರಜಾಪ್ರಭುತ್ವ ಬೇಕೋ ಅಥವಾ ಸರ್ವಾಧಿಕಾರವೋ ಎಂಬುದನ್ನು ನೀವೇ ನಿರ್ಧರಿಸಬೇಕು. ಸರ್ವಾಧಿಕಾರವನ್ನು ಬೆಂಬಲಿಸುವವರನ್ನು ದೇಶದಿಂದ ಹೊರಹಾಕಬೇಕು ಎಂದು ಕರೆ ನೀಡಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಷದಂತೆ, ಅದರ ರುಚಿ ನೋಡಬೇಡಿ. ಅವರು ದೇಶವನ್ನೇ ನಾಶ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ಸಮತಟ್ಟಾದ ಆಟದ ಮೈದಾನವಿಲ್ಲ. ಪ್ರಧಾನಿ ಮೋದಿ ಮೈದಾನವನ್ನು ಅಗೆದು ಅಲ್ಲಿ ಕ್ರಿಕೆಟ್ ಆಡುವಂತೆ ಹೇಳುತ್ತಿದ್ದಾರೆ. ನಾವು ಒಂದಾಗಬೇಕು. ಆಗ ಮಾತ್ರ ನಾವು ಹೋರಾಡಲು ಸಾಧ್ಯವಾಗುತ್ತದೆ. ನಾವು ಪರಸ್ಪರ ಟೀಕಿಸಿಕೊಂಡರೆ ನಾವು ಯಶಸ್ವಿಯಾಗುವುದಿಲ್ಲ ಎಂದು ಖರ್ಗೆ ಕರೆ ನೀಡಿದರು.

ಮೋದಿಯಿಂದ ಮ್ಯಾಚ್ ಫಿಕ್ಸಿಂಗ್ ಯತ್ನ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಪ್ರಧಾನಿ ಮೋದಿ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ತನ್ನ ಈ ಪ್ರಯತ್ನಗಳಲ್ಲಿ ಯಶಸ್ವಿಯಾದರೆ ದೇಶದ ಸಂವಿಧಾನವನ್ನು ಬದಲಾಯಿಸಲಾಗುತ್ತದೆ ಮತ್ತು ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದು ಸಾಮಾನ್ಯ ಚುನಾವಣೆಯಲ್ಲ. ಇದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾಗಿದೆ. ಅಂಪೈರ್‌ಗಳು ಮತ್ತು ನಾಯಕನ ಮೇಲೆ ಒತ್ತಡ ಹೇರಿದಾಗ ಆಟಗಾರರನ್ನು ಖರೀದಿಸಿ ಪಂದ್ಯ ಗೆದ್ದರೆ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರೆ. ನಮ್ಮ ಮುಂದೆ ಲೋಕಸಭೆ ಚುನಾವಣೆ ಇದೆ. ಅಂಪೈರ್‌ಗಳನ್ನು ಆಯ್ಕೆ ಮಾಡಿದವರು ಯಾರು?, ಪಂದ್ಯ ಆರಂಭವಾಗುವ ಮುನ್ನವೇ ಇಬ್ಬರು ಆಟಗಾರರನ್ನು ಬಂಧಿಸಲಾಗಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ರಾಹುಲ್​ ವಾಗ್ದಾಳಿ ನಡೆಸಿದರು.

ಬಿಜೆಪಿ 400 ಸ್ಥಾನಗಳನ್ನು ಗಳಿಸುವ ಘೋಷಣೆಯನ್ನು ಎತ್ತುತ್ತಿದೆ. ಆದರೆ ಇವಿಎಂಗಳು, ಮ್ಯಾಚ್ ಫಿಕ್ಸಿಂಗ್, ವಿಪಕ್ಷದ ನಾಯಕರ ಮೇಲೆ ಒತ್ತಡ ಮತ್ತು ಬಿಜೆಪಿಯವರಿಗೆ 180 ಸ್ಥಾನಗಳನ್ನು ದಾಟಲು ಸಾಧ್ಯವಿಲ್ಲ. ಕಾಂಗ್ರೆಸ್ ಅತಿದೊಡ್ಡ ವಿರೋಧ ಪಕ್ಷವಾಗಿದ್ದು, ಅದರ ಎಲ್ಲ ಬ್ಯಾಂಕ್​ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸಲಾಗಿದೆ. ಇದು ಯಾವ ರೀತಿಯ ಚುನಾವಣೆ?, ಪ್ರಧಾನಿ ಮೋದಿ ಮೂವರು ಬಿಲಿಯನೇರ್‌ಗಳೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದಾರೆ. ಬಡವರಿಂದ ಸಂವಿಧಾನವನ್ನು ಕಿತ್ತುಕೊಳ್ಳಲು ಈ ರೀತಿ ಮಾಡಲಾಗುತ್ತಿದೆ ಎಂದು ರಾಹುಲ್​ ಗಾಂಧಿ ಆರೋಪಿಸಿದರು.

ಸಂವಿಧಾನವು ಜನರ ಧ್ವನಿಯಾಗಿದ್ದು, ಅದು ಮುಗಿದ ದಿನ ಈ ದೇಶವು ಕೊನೆಗೊಳ್ಳುತ್ತದೆ ಎಂದು ಪ್ರತಿಪಾದಿಸಿದ ರಾಹುಲ್​, ಸಂವಿಧಾನ ಹೋದರೆ ಬಡವರ ಹಕ್ಕುಗಳು ಮತ್ತು ಮೀಸಲಾತಿಯೂ ಹೋಗುತ್ತದೆ. 400ಕ್ಕೂ ಹೆಚ್ಚು ಸ್ಥಾನ ಪಡೆದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆ. ಹಾಗೆ ಸುಮ್ಮನೆ ಹೇಳಿದ್ದಲ್ಲ, ಅದು ಕಲ್ಪನೆಯನ್ನು ಪರೀಕ್ಷೆ ಮಾಡುವ ಹೇಳಿಕೆಯಾಗಿದೆ ಎಂದರು.

ಪೊಲೀಸ್, ಸಿಬಿಐ ಮತ್ತು ಇಡಿ ಬೆದರಿಕೆ ಮತ್ತು ಹೆದರಿಕೆಯಿಂದ ದೇಶವನ್ನು ನಡೆಸಬಹುದು ಎಂದು ಅವರು (ಬಿಜೆಪಿಯವರು) ಭಾವಿಸುತ್ತಾರೆ. ಈ ಜನರ ಧ್ವನಿಯನ್ನು ಈ ಜಗತ್ತಿನಲ್ಲಿ ಯಾವುದೇ ಶಕ್ತಿ ಹತ್ತಿಕ್ಕಲು ಸಾಧ್ಯವಿಲ್ಲ. ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮೂಲಕ ಚುನಾವಣೆಯಲ್ಲಿ ಗೆದ್ದು ಸಂವಿಧಾನವನ್ನು ಬದಲಾಯಿಸಿದರೆ, ದೇಶ ಉಳಿಯಲ್ಲ. ಎಲ್ಲೆಡೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಎನ್‌ಸಿಪಿ (ಶರದ್​ಚಂದ್ರ ಪವಾರ್) ನಾಯಕ ಶರದ್ ಪವಾರ್, ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಎನ್‌ಸಿಯ ಫಾರೂಕ್ ಅಬ್ದುಲ್ಲಾ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ತೆರಿಗೆ ಇಲಾಖೆಯಿಂದ ಕಾಂಗ್ರೆಸ್‌ಗೆ ಮತ್ತೊಂದು ನೋಟಿಸ್​: 3,567 ಕೋಟಿ ರೂ ತೆರಿಗೆ ಪಾವತಿಗೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.