ETV Bharat / bharat

ಮೊದಲ ಹಂತದಲ್ಲಿ ವೋಟ್​ ಮಾಡಿದವರಿಗೆ ಧನ್ಯವಾದ ಸಲ್ಲಿಸಿದ ಮೋದಿ: ವೋಟಿಂಗ್​ ಮಾಡಿದ್ದಕ್ಕೆ ನಮೋ ನಮಃ ಎಂದ ಪ್ರಧಾನಿ - MODI THANKS TO VOTERS

author img

By ETV Bharat Karnataka Team

Published : Apr 20, 2024, 6:50 AM IST

pm-modi-thanks-voters-says-people-are-voting-for-nda-in-record-numbers
ಮೊದಲ ಹಂತದ ಚುನಾವಣೆ ಮತದಾರರಿಗೆ ಪ್ರಧಾನಿ ಧನ್ಯವಾದ ಸಲ್ಲಿಕೆ: ವೋಟಿಂಗ್​ ಮಾಡಿದ್ದಕ್ಕೆ ನಮೋ ನಮಃ ಎಂದ ಪ್ರಧಾನಿ

17 ರಾಜ್ಯಗಳು ನಾಲ್ಕು ಕೇಂದ್ರಾಡಳಿತ ಪ್ರದೇಶದ 102 ಮತಕ್ಷೇತ್ರಗಳಲ್ಲಿ ಮತದಾನ ಮಾಡಿದ ಎಲ್ಲ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. ಜನರು ದಾಖಲೆ ಸಂಖ್ಯೆಯಲ್ಲಿ ಎನ್ ಡಿಎಗೆ ಮತ ಹಾಕುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ನವದೆಹಲಿ: 2024ರ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ತಮ್ಮ ಹಕ್ಕು ಚಲಾಯಿಸಿದ ಎಲ್ಲ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಧನ್ಯವಾದ ಸಲ್ಲಿಸಿದ್ದಾರೆ. ದೇಶದ ಜನರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ದಾಖಲೆ ಸಂಖ್ಯೆಯಲ್ಲಿ ಮತ ಹಾಕುತ್ತಿದ್ದಾರೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 102 ಸ್ಥಾನಗಳನ್ನು ಒಳಗೊಂಡ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಶೇ 63 ಪ್ರತಿಶತದಷ್ಟು ಮತದಾನ ದಾಖಲಾಗಿದೆ ಎಂದು ವರದಿಯಾಗಿದೆ. ಇದು ಪ್ರಾಥಮಿಕ ಮಾಹಿತಿಯಾಗಿದ್ದು, ಚುನಾವಣಾ ಆಯೋಗ ಇಂದು ತನ್ನ ಅಧಿಕೃತ ಮಾಹಿತಿಯನ್ನು ಬಹಿರಂಗ ಪಡಿಸಲಿದೆ. ಆ ಬಳಿಕ ಎಷ್ಟು ಮತದಾನ ಆಗಿದೆ ಎಂಬ ಬಗ್ಗೆ ಅಂಕಿ- ಸಂಖ್ಯೆ ಗೊತ್ತಾಗಲಿದೆ. 2019ನೇ ಇಸ್ವಿಗಿಂತ ಈ ಬಾರಿ ಮತದಾನ ತುಸು ಕಡಿಮೆ ಆಗಿದೆ.

X ಆ್ಯಪ್​ನ ಹ್ಯಾಂಡಲ್​​ನಿಂದ ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿ, "ಮೊದಲ ಹಂತದಲ್ಲಿ ಮತದಾರ ಉತ್ತಮ ಪ್ರತಿಕ್ರಿಯೆ ತೋರಿಸಿದ್ದಾರೆ. ಮತ ಚಲಾಯಿಸಿದ ಎಲ್ಲರಿಗೂ ಧನ್ಯವಾದಗಳು. ಭಾರತದಾದ್ಯಂತ ಜನರು ಎನ್‌ಡಿಎಗೆ ದಾಖಲೆಯಲ್ಲಿ ಮತ ಹಾಕುತ್ತಿದ್ದಾರೆ‘‘ ಎಂದು ಹೇಳಿದ್ದಾರೆ.

ಏಳು ಹಂತಗಳ ಚುನಾವಣೆಯಲ್ಲಿ ಮೊದಲ ಹಂತದ ಚುನಾವಣೆ ಬಹುತೇಕ ಶಾಂತಿಯುತ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮತದಾರರು ಹೆಚ್ಚಿನ ಭಾಗಗಳಲ್ಲಿ ಬಿಸಿಲಿನ ಪ್ರಖರತೆಯಿಂದ ಸಂಕಷ್ಟಕ್ಕೆ ಸಿಲುಕಿದರು, ಕೆಲವು ಸ್ಥಳಗಳಲ್ಲಿ ಸುರಿಯುವ ಮಳೆಯಲ್ಲೇ ಮತದಾರರು ತಾಳ್ಮೆಯಿಂದ ಕಾಯ್ದು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆ ವರೆಗೂ ನಡೆಯಿತು.

ಭಾರತೀಯ ಜನತಾ ಪಕ್ಷ ಈ ಬಾರಿ ತಮಿಳುನಾಡಿನಲ್ಲಿ ಖಾತೆ ತೆರೆಯುವ ಸನ್ನಾಹದಲ್ಲಿದೆ. ಏಳು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಸ್ಥಾನಗಳಿಗೆ ಮೊದಲ ಹಂತದ ಚುನಾವಣೆಯಲ್ಲೇ ಏಕಕಾಲಕ್ಕೆ ಮತದಾನ ನಡೆಯಿತು.

ಪ್ರಧಾನಿ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಏರಲು ತುದಿಗಾಲ ಮೇಲೆ ನಿಂತಿದೆ. ಆದರೆ ವಿರೋಧ ಪಕ್ಷವಾದ ಇಂಡಿಯಾ ಮೈತ್ರಿಕೂಟ ಬಿಜೆಪಿ ಆಡಳಿತಕ್ಕೆ ಕೊನೆ ಹಾಡಲು ಎಲ್ಲ ಸಿದ್ಧತೆಗಳನ್ನು ನಡೆಸಿದ್ದು, ಭರ್ಜರಿ ಕಸರತ್ತು ನಡೆಸಿದೆ.

ಇದನ್ನು ಓದಿ: ಗಾಂಧಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೃಹ ಸಚಿವ ಅಮಿತ್ ಶಾ ನಾಮಪತ್ರ ಸಲ್ಲಿಕೆ - Amit Shah Nomination

ETV Bharat Logo

Copyright © 2024 Ushodaya Enterprises Pvt. Ltd., All Rights Reserved.