ETV Bharat / bharat

ಒಂದು ಕುಟುಂಬದ ಉದ್ಧಾರಕ್ಕಾಗಿ ದುಡಿದ ಕಾಂಗ್ರೆಸ್​: ಪ್ರಧಾನಿ ಮೋದಿ ಟೀಕೆ

author img

By PTI

Published : Feb 25, 2024, 8:14 PM IST

ಪ್ರಧಾನಿ ಮೋದಿ ಟೀಕೆ
ಪ್ರಧಾನಿ ಮೋದಿ ಟೀಕೆ

PM Modi: ದ್ವಾರಕಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಹಗರಣಗಳನ್ನು ಮಾಡಲು 5 ವರ್ಷ ಸರ್ಕಾರ ನಡೆಸಿತು ಎಂದು ಆರೋಪಿಸಿದರು.

ದ್ವಾರಕಾ (ಗುಜರಾತ್): ಒಂದು ಕುಟುಂಬದ ಉದ್ಧಾರಕ್ಕಾಗಿ ಕಾಂಗ್ರೆಸ್​ ತನ್ನ ಇಡೀ ಶಕ್ತಿಯನ್ನು ವ್ಯಯ ಮಾಡಿತು. ಐದು ವರ್ಷಗಳ ಕಾಲಾವಧಿಯ ಸರ್ಕಾರವನ್ನು ಹೇಗೆ ನಡೆಸಬೇಕು ಎಂಬ ದೂರದೃಷ್ಟಿ ಇಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಕುಟುಂಬವನ್ನು ಟೀಕಿಸಿದರು.

ದ್ವಾರಕಾದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಆಡಳಿತದ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರವನ್ನು ಮರೆಮಾಚಲು, ಕಾಂಗ್ರೆಸ್​ ಸಂಪೂರ್ಣ ಶಕ್ತಿಯನ್ನು ಬಳಸಿತು. 10 ವರ್ಷದಲ್ಲಿ 11ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವ ಶಕ್ತಿ ಕೈ ಪಕ್ಷಕ್ಕಿದೆ ಎಂದು ಕಾಂಗ್ರೆಸ್​ ಆರ್ಥಿಕ ನೀತಿ ಬಗ್ಗೆ ವ್ಯಂಗ್ಯವಾಡಿದರು.

ಜನರ ಮೂಲಸೌಕರ್ಯಕ್ಕಾಗಿ ಬಳಸಬೇಕಾದ ಬಜೆಟ್ ಅನ್ನು ಹಗರಣಗಳನ್ನು ನಡೆಸಿ ಲೂಟಿ ಮಾಡಲಾಯಿತು. 2ಜಿ, ಕಾಮನ್​​ವೆಲ್ತ್, ಹೆಲಿಕಾಪ್ಟರ್ ಹಗರಣ, ಮತ್ತು ಜಲಾಂತರ್ಗಾಮಿ ಹಗರಣ ಸೇರಿದಂತೆ ದೇಶದ ಪ್ರತಿಯೊಂದು ಅತ್ಯಮೂಲ್ಯ ಯೋಜನೆಗಳಲ್ಲಿ ಕಾಂಗ್ರೆಸ್​ ದ್ರೋಹ ಮಾಡಿದೆ. ಹಿಂದಿನ ಸರಕಾರಗಳ ಅವಧಿಯಲ್ಲಿ ನಡೆಯುತ್ತಿದ್ದ ಸಾವಿರಾರು ಕೋಟಿ ಮೌಲ್ಯದ ಹಗರಣಗಳನ್ನು ಈಗ ನಿಲ್ಲಿಸಲಾಗಿದೆ. 10 ವರ್ಷಗಳಲ್ಲಿ ರಾಷ್ಟ್ರವು 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಪಕ್ಷದ ಕೆಲಸ ಕುಟುಂಬ ರಕ್ಷಣೆಯಲ್ಲ: ಒಂದು ರಾಷ್ಟ್ರೀಯ ಪಕ್ಷದ ಕೆಲಸ ಕುಟುಂಬವನ್ನು ರಕ್ಷಣೆ ಮಾಡುವುದಲ್ಲ. ಆದ್ರೆ ತನ್ನೆಲ್ಲಾ ಶಕ್ತಿಯನ್ನು ಕಾಂಗ್ರೆಸ್‌ ಇದಕ್ಕೇ ಬಳಸಿದೆ. ಒಂದೇ ಕುಟುಂಬಕ್ಕಾಗಿ ಎಲ್ಲವನ್ನೂ ಮಾಡಿದಲ್ಲಿ, ದೇಶವನ್ನು ಕಟ್ಟುವ ಬಗ್ಗೆ ಯಾರು ಚಿಂತಿಸುತ್ತಾರೆ. ಕೈ ಪಕ್ಷದ ಶಕ್ತಿಯು ಐದು ವರ್ಷಗಳ ಕಾಲ ಸರ್ಕಾರವನ್ನು ಹೇಗೆ ನಡೆಸುವುದು ಎಂಬುದರ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಪ್ರಧಾನಿ ಮೋದಿ ಹರಿಹಾಯ್ದರು.

ಆದರೆ, ಇಂದು ಹಿಂದಿನ ಸರ್ಕಾರ ಮಾಡುತ್ತಿದ್ದ ಎಲ್ಲ ಹಗರಣಗಳಿಗೆ ಕೊನೆ ಹಾಡಲಾಗಿದೆ. ದೇಶದ ಪ್ರಗತಿ ಮತ್ತು ಮೂಲಸೌಕರ್ಯಗಳನ್ನು ಸೃಷ್ಟಿಸಲಾಗುತ್ತಿದೆ. ಇದರ ಪರಿಣಾಮವಾಗಿ, ದೇಶದಲ್ಲಿನ ತೀರ್ಥಕ್ಷೇತ್ರಗಳು ಪುನರುತ್ಥಾನ ಪಡೆಯುತ್ತಿವೆ. ಇನ್ನೊಂದು ಕಡೆ ಬೃಹತ್ ಯೋಜನೆಗಳ ಮೂಲಕ ನವ ಭಾರತದ ಅಭಿವೃದ್ಧಿಯಾಗುತ್ತಿದೆ ಎಂದು ಮೋದಿ ಹೇಳಿದರು.

ಮುಳುಗಿದ ದ್ವಾರಕಾಗೆ ಪೂಜೆ: ಇದಕ್ಕೂ ಮೊದಲು ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಮುಳುಗಿರುವ ಪ್ರಾಚೀನ ದ್ವಾರಕಾ ನಗರಕ್ಕೆ ಸ್ಕೂಬಾ ಡೈವಿಂಗ್​ ಮೂಲಕ ನೀರಲ್ಲಿ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿದರು. ಅಲ್ಲಿನ ಐತಿಹಾಸಿಕ ಸ್ಥಳವನ್ನೂ ಇದೇ ವೇಳೆ ವೀಕ್ಷಿಸಿದರು. ದೈವಿಕ ಅನುಭವ ಪಡೆದೆ ಎಂದು ಹೇಳಿದ್ದಾರೆ.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಗುಜರಾತ್​ಗೆ ಭಾನುವಾರ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು, ಪಂಚಕುಯಿ ಕರಾವಳಿ ಪ್ರದೇಶಕ್ಕೆ ತೆರಳಿದ್ದರು. ದ್ವಾಪರಯುಗದಲ್ಲಿ ಮುಳುಗಿದೆ ಎಂದು ಐತಿಹಾಸಿಕ ಪುರಾವೆಗಳು ಸಿಕ್ಕಿರುವ ಶ್ರೀಕೃಷ್ಣನು ನಿರ್ಮಿಸಿದ್ದ ದ್ವಾರಕಾನಗರದ ಜಾಗಕ್ಕೆ ಈಜುಗಾರರ ಸಹಾಯದೊಂದಿಗೆ ತೆರಳಿದ ಪ್ರಧಾನಿ, ಅಲ್ಲಿ ನವಿಲುಗರಿಯನ್ನು ಇಟ್ಟು ಕೆಲ ಹೊತ್ತು ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ಮುಳುಗಿರುವ ದ್ವಾರಕಾ ನಗರಕ್ಕೆ ಸ್ಕೂಬಾ ಡೈವಿಂಗ್​ ಮೂಲಕ ತೆರಳಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.