ETV Bharat / bharat

ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಚುನಾವಣಾ ಸಮಿತಿಯ ಸರಣಿ ಸಭೆ; ಇಂದು ಕರ್ನಾಟಕದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಸಾಧ್ಯತೆ

author img

By ETV Bharat Karnataka Team

Published : Mar 19, 2024, 10:07 PM IST

Updated : Mar 20, 2024, 10:45 AM IST

'Our Manifesto Not Just Document': Rahul after Cong CEC discusses Manifesto, Candidates for LS Polls
ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಚುನಾವಣಾ ಸಮಿತಿಯ ಸರಣಿ ಸಭೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮಂಗಳವಾರ ಮಹತ್ವದ ಕಾರ್ಯಕಾರಿ ಸಮಿತಿ, ಕೇಂದ್ರ ಚುನಾವಣಾ ಸಮಿತಿಯ ಸರಣಿ ಸಭೆಗಳನ್ನು ನಡೆಸಿದೆ. ಇಂದು ಕರ್ನಾಟಕದ ಲೋಕಸಭೆ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಂಗಳವಾರ ನಡೆದ ಮಹತ್ವದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ, ಪಕ್ಷದ ಅಭ್ಯರ್ಥಿಗಳ ಕುರಿತಂತೆ ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯ ಸರಣಿ ಸಭೆಗಳನ್ನು ನಡೆಸಲಾಗಿದೆ. ಸಿಡಬ್ಲ್ಯುಸಿಯಲ್ಲಿ ಪ್ರಣಾಳಿಕೆಗೆ ಅಂತಿಮ ರೂಪ ನೀಡಲಾಗಿದ್ದು, ಇದಕ್ಕೆ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಗೆ ಸೂಚಿಸಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಮತ್ತು ಸಮಿತಿಯ ಇತರ ಸದಸ್ಯರು ಭಾಗವಹಿಸಿದ್ದರು. ಸಿಡಬ್ಲ್ಯುಸಿ ಉದ್ದೇಶಿಸಿ ಮಾತನಾಡಿದ ಖರ್ಗೆ, ದೇಶವು ಬದಲಾವಣೆ ಬಯಸುತ್ತಿದೆ. ಸದ್ಯ ಕೇಂದ್ರ ಸರ್ಕಾರವು ಪ್ರಸ್ತುತಪಡಿಸುತ್ತಿರುವ ಗ್ಯಾರಂಟಿಗಳು 2004ರ 'ಪ್ರಕಾಶಿಸುತ್ತಿದೆ ಭಾರತ' ಘೋಷಣೆಯನ್ನೇ ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.

ಇದರ ಬಳಿಕ ನಡೆದ ಸಿಇಸಿ ಸಭೆಯಲ್ಲಿ ಖರ್ಗೆ, ಸೋನಿಯಾ ವಿವಿಧ ರಾಜ್ಯಗಳ ನಾಯಕರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಕರ್ನಾಟಕ, ತೆಲಂಗಾಣ, ಪುದುಚೇರಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ರಾಜ್ಯಗಳ ಲೋಕಸಭೆ ಅಭ್ಯರ್ಥಿಗಳ ಜೊತೆಗೆ ಆಂಧ್ರಪ್ರದೇಶ ಮತ್ತು ಸಿಕ್ಕಿಂನಲ್ಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಸಿಇಸಿ ಸಭೆಯಲ್ಲಿ ಒಟ್ಟು 60 ರಿಂದ 70 ಲೋಕಸಭಾ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈಗಾಗಲೇ 39 ಅಭ್ಯರ್ಥಿಗಳ ಮೊದಲ ಪಟ್ಟಿ ಮತ್ತು 43 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್​ ಪ್ರಕಟಿಸಿದ್ದು, ಇದುವರೆಗೆ 82 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದೆ. ಏಪ್ರಿಲ್ 19 ರಿಂದ ಲೋಕಸಭೆ ಚುನಾವಣೆ ಆರಂಭವಾಗಲಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಕಾಂಗ್ರೆಸ್ ಪ್ರಣಾಳಿಕೆ ದಾಖಲೆಯಲ್ಲ, ಅದೊಂದು ಮಾರ್ಗಸೂಚಿ: ಈ ಮಹತ್ವದ ಸಭೆಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಮ್ಮ 5 ನ್ಯಾಯಗಳು ಮತ್ತು 25 ಗ್ಯಾರಂಟಿಗಳು ಸೇರಿದಂತೆ ಪಕ್ಷದ ಪ್ರಣಾಳಿಕೆಯ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯಿತು. ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆ ಮೂಲಕ ನಾವು ನಿರಂತರವಾಗಿ ಹಳ್ಳಿ, ಬೀದಿಗಳಲ್ಲಿ ಜನರ ನಡುವೆ ಹೋಗಿ ದೇಶದ ಧ್ವನಿ ಆಲಿಸಿದ್ದೇವೆ. ಜನರಿಗೆ ಆಗುತ್ತಿರುವ ಅನ್ಯಾಯ ಮತ್ತು ಅವರ ಜೀವನದ ಹೋರಾಟಗಳನ್ನು ನಾವು ಹತ್ತಿರದಿಂದ ತಿಳಿದುಕೊಂಡಿದ್ದೇವೆ ಮತ್ತು ಅರ್ಥಮಾಡಿಕೊಂಡಿದ್ದೇವೆ ಎಂದು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿನ ಪೋಸ್ಟ್‌ ಮಾಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಮತ್ತು ಗ್ಯಾರಂಟಿಗಳು ಕೇವಲ ದಾಖಲೆಗಳಲ್ಲ. ಕೋಟ್ಯಂತರ ದೇಶವಾಸಿಗಳೊಂದಿಗಿನ ಸಂವಾದದಿಂದ ಪಡೆದ ಮಾರ್ಗಸೂಚಿಯಾಗಿದೆ. ಇದು ಉದ್ಯೋಗ ಕ್ರಾಂತಿ ಮತ್ತು ಸಶಕ್ತ ಭಾಗವಹಿಸುವಿಕೆಯ ಮೂಲಕ ಸಮಾಜದ ಪ್ರತಿಯೊಂದು ವರ್ಗದ ಜೀವನವನ್ನು ಬದಲಾಯಿಸಲಿದೆ. ಐದು ನ್ಯಾಯದ ಪ್ರತಿಜ್ಞೆಯೊಂದಿಗೆ ರೈತರು, ಯುವಕರು, ಕಾರ್ಮಿಕರು, ಮಹಿಳೆಯರು ಮತ್ತು ಹಿಂದುಳಿದವರ ನಡುವೆ ಹೋಗಿ ಜನರ ಜೀವನಕ್ಕೆ ಸಂಬಂಧಿಸಿದ ನೈಜ ಸಮಸ್ಯೆಗಳ ಮೇಲೆ ನೇರವಾಗಿ ಚುನಾವಣೆಗೆ ಸ್ಪರ್ಧಿಸುತ್ತೇವೆ. ಕಾಂಗ್ರೆಸ್‌ನ ಭರವಸೆಗಳು ದೇಶವಾಸಿಗಳ ಜೀವನದಲ್ಲಿ ಸಮೃದ್ಧಿಯನ್ನು ತರುವ ಸಂಕಲ್ಪವಾಗಿದೆ ಎಂದು ರಾಹುಲ್​ ತಿಳಿಸಿದ್ದಾರೆ.

ಇಂದು ಅಭ್ಯರ್ಥಿಗಳ ಪಟ್ಟಿ?: ಮತ್ತೊಂದೆಡೆ, ಸಿಇಸಿ ಸಭೆಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಪಾಲ್ಗೊಂಡಿದ್ದರು. ಈ ಸಭೆ ನಂತರ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಬುಧವಾರ ನಮ್ಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತೇವೆ ಎಂದು ಸ್ಪಷ್ಪಪಡಿಸಿದ್ದಾರೆ.

ಇದೇ ವೇಳೆ, ಬೆಂಗಳೂರಿನ ಘಟನೆ ಬಗ್ಗೆ ಡಿಕೆಶಿ ಮಾತನಾಡಿ, ಬಿಜೆಪಿ ರಾಜ್ಯದ ಲೋಕಸಭೆ ಸದಸ್ಯರನ್ನು ಕಳೆದುಕೊಳ್ಳುವ ಹಂತದಲ್ಲಿದೆ. ಹಾಗಾಗಿ, ಅವರು ಕೇವಲ ವಿಷಯಗಳಿಗೆ ಕೋಮುವಾದ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಆಗುವುದಿಲ್ಲ. ಜೊತೆಗೆ ಬಿಜೆಪಿಯವರು ಕೇವಲ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಅತ್ಯಂತ ಬಲಿಷ್ಠ, ಪ್ರಗತಿಪರ ಸರ್ಕಾರವಿದ್ದು, ಅದನ್ನು ಅರಗಿಸಿಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ''ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ'' : ಸಿಎಂ ಸಿದ್ದರಾಮಯ್ಯ

Last Updated :Mar 20, 2024, 10:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.