ETV Bharat / bharat

ಭಾರತ್ ಜೋಡೋ ನ್ಯಾಯ ಯಾತ್ರೆ: ಅಸ್ಸೋಂ ಕಾಂಗ್ರೆಸ್​ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆ

author img

By PTI

Published : Jan 21, 2024, 11:02 PM IST

Nyay Yatra: Assam Congress chief assaulted, Ramesh car attacked; party demands probe
ಭಾರತ್ ಜೋಡೋ ನ್ಯಾಯ ಯಾತ್ರೆ: ಅಸ್ಸೋಂ ಕಾಂಗ್ರೆಸ್​ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆ

ಅಸ್ಸೋಂನಲ್ಲಿ ಭಾನುವಾರ ಭಾರತ್ ಜೋಡೋ ನ್ಯಾಯ ಯಾತ್ರೆಯ ಕಾಂಗ್ರೆಸ್​ ಪಕ್ಷದ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರ ಹಲ್ಲೆ ಮಾಡಲಾಗಿದೆ. ಅಲ್ಲದೇ, ಹಿರಿಯ ನಾಯಕ ಜೈರಾಮ್ ರಮೇಶ್ ಕಾರಿನ ಮೇಲೆ ದಾಳಿ ನಡೆಸಲಾಗಿದೆ.

ಗುವಾಹಟಿ (ಅಸ್ಸೋಂ): ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಅಸ್ಸೋಂನಲ್ಲಿ ಭಾನುವಾರ ಅಹಿತರ ಘಟನೆಗಳು ವರದಿಯಾಗಿವೆ. ಸೋನಿತ್‌ಪುರ ಜಿಲ್ಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರ ಹಲ್ಲೆ ನಡೆಸಲಾಗಿದ್ದು, ಹಿರಿಯ ನಾಯಕ ಜೈರಾಮ್ ರಮೇಶ್ ಅವರ ಕಾರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಈ ದಾಳಿಯ ಬಿಜೆಪಿ ಶಾಸಕ ಮತ್ತು ಆತನ ಬೆಂಬಲಿಗರ ಕೈವಾಡವಿದೆ ಎಂದು ಕಾಂಗ್ರೆಸ್​ ಆರೋಪಿಸಿದ್ದು, ಈ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ.

ಅಸ್ಸೋಂ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರು ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಈ ವೇಳೆ, ಜನರ ಗುಂಪೊಂದು ಬೋರಾ ಬೆಂಗಾವಲು ಪಡೆಯ ಮುಂದೆ ಬರುತ್ತಿತ್ತು. ಆಗ ಏನಾಗುತ್ತಿದೆ ಎಂದು ನೋಡಲು ಅಧ್ಯಕ್ಷರು ತಮ್ಮ ಕಾರಿನಿಂದ ಕೆಳಗಿಳಿದರು. ಅಷ್ಟರಲ್ಲೇ, ಗುಂಪಿನಲ್ಲಿದ್ದ ಕೆಲವರು ಬೋರಾ ಅವರ ಮೂಗಿನ ಮೇಲೆ ಗುದ್ದಿದರು. ಇದರಿಂದ ಅವರಿಗೆ ಗಾಯವಾಗಿ ರಕ್ತ ಸುರಿದಿದೆ ಎಂದು ಪಕ್ಷದ ವಕ್ತಾರ ದೇಬಬ್ರತಾ ಬೋರಾ ತಿಳಿಸಿದ್ದಾರೆ.

ಅಲ್ಲದೇ, ಈ ಘಟನೆಯಲ್ಲಿ ಪಕ್ಷದ ಮತ್ತೊಬ್ಬ ಕಾರ್ಯಕರ್ತ ಹೃದಯ್ ದಾಸ್ ಸಹ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಂದೆಡೆ, ರಾಜ್ಯಾಧ್ಯಕ್ಷ ಬೋರಾ ಪ್ರಥಮ ಚಿಕಿತ್ಸೆ ಪಡೆದ ನಂತರ, ಯಾತ್ರೆಯ ಭಾಗವಾಗಿ ನಡೆದ ಸಾರ್ವಜನಿಕ ಸಭೆ ಪಾಲ್ಗೊಂಡರು ಎಂದು ದೇಬಬ್ರತಾ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಘಟನೆ ನಡೆದ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯ ಕಾರ್ಯಕ್ರಮವೊಂದು ಜರುಗುತ್ತಿತ್ತು. ಅದರಲ್ಲಿ ಭಾಗವಹಿಸಿದ್ದ ಜನರೇ ಈ ದಾಳಿ ಮಾಡಿದ್ದಾರೆ ಎಂದು ವಕ್ತಾರರು ಆರೋಪಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಈ ಘಟನೆಯ ಬಗ್ಗೆ ನಮ್ಮ ಸೋನಿತ್‌ಪುರ ಜಿಲ್ಲಾಧ್ಯಕ್ಷರು ಈಗಾಗಲೇ ಜಮುಗುರಿಹಾತ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾವು ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು. ಘಟನೆಯಲ್ಲಿ ಬಿಜೆಪಿ ಶಾಸಕರ ಕೈವಾಡ ಇರುವ ಶಂಕೆ ಇದೆ. ಹೀಗಾಗಿ ಪೊಲೀಸ್ ತನಿಖೆಯ ಮೇಲೆ ನಮಗೆ ನಂಬಿಕೆಯಿಲ್ಲ. ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರ ವಾಹನದ ಮೇಲೂ ದಾಳಿ ನಡೆಸಲಾಗಿದೆ. ಅಲ್ಲದೇ, ಪಕ್ಷದ ಯಾತ್ರೆಯ ಜೊತೆಯಲ್ಲಿದ್ದ ವರದಿಗಾರರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ ಎಂದು ಎಐಸಿಸಿ ಸಂವಹನ ಸಂಯೋಜಕರಾದ ಮಹಿಮಾ ಸಿಂಗ್ ದೂರಿದ್ದಾರೆ. ಜೈರಾಮ್ ರಮೇಶ್ ಅವರ ಕಾರು ಮತ್ತು ಇತರರು ಜಮುಗುರಿಘಾಟ್ ಬಳಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ದಾಳಿ ಮಾಡಲಾಗಿದೆ. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತನಿಖೆಗೆ ಸಿಎಂ ಸೂಚನೆ: ಮತ್ತೊಂದೆಡೆ, ಈ ಘಟನೆ ಕುರಿತು ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ 'ಏಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಹಿಮಂತ ಬಿಸ್ವಾ ಶರ್ಮಾ, ಘಟನೆ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಪ್ರಕರಣವನ್ನು ದಾಖಲಿಸಿಕೊಂಡು ಮತ್ತು ಆರೋಪಗಳ ಬಗ್ಗೆ ವಿಚಾರಣೆ ಮಾಡಿ ಎಂದು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿ ಸಿಎಂ ಪೋಸ್ಟ್ ಮಾಡಿದ್ದಾರೆ.

ಬಹಿರಂಗ ಸಭೆಯಲ್ಲಿ ಖರ್ಗೆ, ರಾಹುಲ್​ ಭಾಗಿ: ಭಾರತ್ ಜೋಡೋ ನ್ಯಾಯ ಯಾತ್ರೆಯ ಭಾಗವಾಗಿ ನಾಗಾಂವ್ ಜಿಲ್ಲೆಯಲ್ಲಿ ಕಾಂಗ್ರೆಸ್​ ಬೃಹತ್​ ಬಹಿರಂಗ ಸಭೆ ನಡೆಸಿತು. ಈ ವೇಳೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್​ ಗಾಂಧಿ ಪಾಲ್ಗೊಂಡು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಯಶಸ್ಸಿನಿಂದ ಆಡಳಿತಾರೂಢ ಬಿಜೆಪಿ ಹೆದರಿದೆ. 2022-23ರಲ್ಲಿ ಪಕ್ಷದ ಮೊದಲ ಭಾರತ್ ಜೋಡೋ ಯಾತ್ರೆಯು ಹಲವಾರು ಬಿಜೆಪಿ ಆಡಳಿತದ ರಾಜ್ಯಗಳ ಮೂಲಕ ಸಾಗಿದೆ. ಆದರೆ, ಯಾತ್ರೆ ವೇಳೆ ಯಾವುದೇ ಕಲ್ಲು ತೂರಾಟದ ಘಟನೆ ನಡೆದಿರಲಿಲ್ಲ. ಹಲವು ರಾಜ್ಯಗಳನ್ನು ದಾಟಿದರೂ ಯಾರೂ ನಮಗೆ ಬೆದರಿಕೆ ಹಾಕಲು ಪ್ರಯತ್ನಿಸಲಿಲ್ಲ. ಅಸ್ಸೋಂನಲ್ಲಿ ಯಾಕೆ ಹೀಗಾಗುತ್ತಿದೆ?. ಯಾಕೆಂದರೆ, ಇಲ್ಲಿ ಪ್ರಧಾನಿ ಮೋದಿ ಅವರ 'ಚೇಲಾ' (ಶಿಷ್ಯ) ಇದ್ದು, ಅವರ ಹೇಳಿದ್ದನ್ನು ಇವರು ಕುರುಡಾಗಿ ಕೇಳುತ್ತಿದ್ದಾರೆ ಎಂದು ಖರ್ಗೆ, ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಟೀಕಾಪ್ರಹಾರ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.