ETV Bharat / bharat

ಯುಪಿಎ ಸರ್ಕಾರದ ವೇಳೆ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

author img

By ETV Bharat Karnataka Team

Published : Feb 9, 2024, 11:01 PM IST

National security was compromised under UPA: Sitharaman
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

10 ವರ್ಷಗಳ ಯುಪಿಎ ಆಡಳಿತದಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿತ್ತು. ಆಗ ಯುದ್ಧ ಸಾಮಗ್ರಿ ಮತ್ತು ರಕ್ಷಣಾ ಸಾಧನಗಳ ಕೊರತೆಯಿತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ನವದೆಹಲಿ: ದೇಶದಲ್ಲಿ 2004ರಿಂದ 2014ರವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲಾಗಿತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗಂಭೀರ ಆರೋಪ ಮಾಡಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಮಂಡಿಸಲಾದ ದೇಶದ ಆರ್ಥಿಕತೆ ಕುರಿತ ಶ್ವೇತಪತ್ರವನ್ನು ಸಮರ್ಥಿಸಿಕೊಂಡ ಅವರು, ಯುಪಿಎ ಆಡಳಿತದಲ್ಲಿ ಹಣದುಬ್ಬರವು ಎರಡಂಕಿ ದಾಟಿತ್ತು ಎಂದೂ ದೂರಿದರು.

ಲೋಕಸಭೆಯಲ್ಲಿ ಶ್ವೇತಪತ್ರದ ಕುರಿತು ಪ್ರತಿಪಕ್ಷಗಳ ಸಂಸದರು ಎತ್ತಿದ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಉತ್ತರಿಸಿದರು. ಇದೊಂದು ಆಧಾರರಹಿತ ಶ್ವೇತಪತ್ರ ಎಂದು ಕರೆದ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, ''ಶ್ವೇತಪತ್ರವು ಸಂಪೂರ್ಣವಾಗಿ ಸಾಕ್ಷ್ಯ ಮತ್ತು ಸತ್ಯಗಳನ್ನು ಆಧರಿಸಿದೆ'' ಎಂದರು. ಅಲ್ಲದೇ, ಭ್ರಷ್ಟಾಚಾರ, ಹಗರಣಗಳು, ಹಣದುಬ್ಬರದಿಂದ ಉದ್ಯೋಗದವರೆಗೆ ಒಂದಲ್ಲ ಒಂದು ವಿಷಯದ ಬಗ್ಗೆ ಹಿಂದಿನ ಯುಪಿಎ ಸರ್ಕಾರವನ್ನು ಬಯಲಿಗೆ ಎಳೆಯುವ ಮೂಲಕ ಟೀಕಾಪ್ರಹಾರ ನಡೆಸಿದರು.

''2004 ಮತ್ತು 2014ರ ನಡುವೆ ಸರಾಸರಿ ವಾರ್ಷಿಕ ಹಣದುಬ್ಬರವು ಶೇ.8.2ರಷ್ಟಿತ್ತು. ಅದರಲ್ಲೂ, 2011ರಿಂದ 2014ರ ಅವಧಿಯಲ್ಲಿ ಇದು ಶೇ.9.8ಕ್ಕೆ ತಲುಪಿತ್ತು. ಕೆಲ ಸಂದರ್ಭದಲ್ಲಿ ಈ ಹಣದುಬ್ಬರವು ಎರಡಂಕಿಗಳನ್ನು ಆಗಿತ್ತು. ಯುಪಿಎ ಆಡಳಿತದಲ್ಲಿ ಭಾರತದಲ್ಲಿ ಹಣದುಬ್ಬರವು ಶೇ.9.8ರಷ್ಟಿದ್ದಾಗ, ಜಾಗತಿಕ ಹಣದುಬ್ಬರವು ಕೇವಲ ಶೇ.4-5ರಷ್ಟಿತ್ತು. ಇದು ಇವರ ದಾಖಲೆ" ಎಂದು ವಾಗ್ದಾಳಿ ನಡೆಸಿದರು. "ಯುಪಿಎ ಅಡಿಯಲ್ಲಿ 22 ತಿಂಗಳವರೆಗೆ ಚಿಲ್ಲರೆ ಹಣದುಬ್ಬರವು ಶೇ.9ಕ್ಕಿಂತ ಹೆಚ್ಚಿತ್ತು. ನಮ್ಮ ಚಿಲ್ಲರೆ ಹಣದುಬ್ಬರವು ಹೆಚ್ಚೆಂದರೆ ಶೇ.5ರಷ್ಟಿತ್ತು. ಎಂದಿಗೂ ಶೇ.8ರಷ್ಟನ್ನು ದಾಟಲಿಲ್ಲ" ಎಂದರು.

''ನಮ್ಮ ಸರ್ಕಾರದ ಅವಧಿಯಲ್ಲಿ ಪದವೀಧರರ ನಿರುದ್ಯೋಗ ದರವು ಶೇ.13.4ಕ್ಕೆ ಇಳಿದಿದೆ. ಕಾರ್ಮಿಕ ಮಾರುಕಟ್ಟೆಗಳ ನಿರುದ್ಯೋಗ ದರವು ಕುಸಿಯುತ್ತಿದೆ. 2018-19ರಲ್ಲಿ ಶೇ.5.8ರಷ್ಟಿದ್ದು ಕಾರ್ಮಿಕರ ನಿರುದ್ಯೋಗ ದರವು 2022-23ರಲ್ಲಿ ಶೇ.3.2ಕ್ಕೆ ಇಳಿಕೆಯಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 8,82,191 ಕೇಂದ್ರ ಸರ್ಕಾರದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಯುಪಿಎ ಆಡಳಿತದಲ್ಲಿ ಪ್ರಚಲಿತದಲ್ಲಿದ್ದ ಲಂಚ, ಸ್ವಜನಪಕ್ಷಪಾತ ಮಾಡಿದೆ, ನಮ್ಮ ಸರ್ಕಾರದಲ್ಲಿ ಉದ್ಯೋಗಗಳನ್ನು ನೀಡಲಾಗಿದೆ'' ಎಂದು ವಿವರಿಸಿದರು.

ಮುಂದುವರೆದು, ''10 ವರ್ಷಗಳ ಯುಪಿಎ ಆಡಳಿತದಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿತ್ತು'' ಎಂದು ಆರೋಪಿಸಿದ ವಿತ್ತ ಸಚಿವೆ, ''2014ರಲ್ಲಿ ಯುದ್ಧಸಾಮಗ್ರಿ ಮತ್ತು ರಕ್ಷಣಾ ಸಾಧನಗಳ ಕೊರತೆಯಿತ್ತು. ಯುಪಿಎ ಆಡಳಿತದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭ್ರಷ್ಟಾಚಾರವು ಅತಿರೇಕವಾಗಿತ್ತು. ನಾವು ಕಳೆದ 10 ವರ್ಷಗಳಲ್ಲಿ ರಕ್ಷಣಾ ಬಜೆಟ್​ಅನ್ನು 2024-25ರಲ್ಲಿ 6.22 ಲಕ್ಷ ಕೋಟಿಗೆ ದ್ವಿಗುಣಗೊಳಿಸಿದ್ದೇವೆ'' ಎಂದು ತಿಳಿಸಿದರು.

ಮೋದಿ ಸರ್ಕಾರವು ಜಾರಿ ನಿರ್ದೇಶನಾಲಯವನ್ನು (ಇಡಿ) ದುರುಪಯೋಗಪಡಿಸಿಕೊಂಡಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿ ಸೀತಾರಾಮನ್, ''ಯುಪಿಎ ಆಡಳಿತದ ಅವಧಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆ ನಡೆಸಲು ಇಡಿಗೆ ಅನುಮತಿ ನೀಡಿರಲಿಲ್ಲ. ಏಕೆಂದರೆ, ಆ ಸಂಸ್ಥೆಯನ್ನು ಪಂಜರದ ಹಕ್ಕಿಯಂತೆ ಇರಿಸಲಾಗಿತ್ತು. ಈಗ ತನಿಖಾ ಸಂಸ್ಥೆಗೆ ಸ್ವಾತಂತ್ರ್ಯ ನೀಡಲಾಗಿದೆ. ಆದ್ದರಿಂದ 1,022ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. 10 ವರ್ಷಗಳಲ್ಲಿ 58 ಮಂದಿಗೆ ಶಿಕ್ಷೆಯಾಗಿದೆ. 2005-2014ರ ನಡುವೆ ಕೇವಲ 102 ಪಿಎಂಎಲ್‌ಎ ಅಡಿ ಕಾನೂನು ಕ್ರಮಗಳು ತೆಗೆದುಕೊಳ್ಳಲಾಗಿದೆ. ಶಿಕ್ಷೆಯಾಗಿದ್ದು ಮಾತ್ರ ಶೂನ್ಯ'' ಎಂದು ಚಾಟಿ ಬೀಸಿದರು.

ಇದನ್ನೂ ಓದಿ: ಬಿಜೆಪಿಯೊಂದಿಗೆ ಮೈತ್ರಿ ಸುಳಿವು ನೀಡಿದ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.