ETV Bharat / bharat

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್ - S Jaishankar

author img

By ANI

Published : May 18, 2024, 10:56 AM IST

ನವದೆಹಲಿಯಲ್ಲಿ ಶುಕ್ರವಾರ ನಡೆದ 2024ರ CII ವಾರ್ಷಿಕ ವ್ಯಾಪಾರ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಜಾಗತಿಕ ಮಟ್ಟದಲ್ಲಿ ಭಾರತೀಯ ಕೌಶಲ್ಯ ಮತ್ತು ಪ್ರತಿಭೆಗಳ ಬೆಳವಣಿಗೆಯ ಪಾತ್ರದ ಒತ್ತಿ ಹೇಳಿದರು.

EAM S JAISHANKAR  Vasudaiva Kutumbakam  Make In India  Bharat First
ವಿದೇಶಾಂಗ ಸಚಿವ ಎಸ್. ಜೈಶಂಕರ್ (IANS)

ನವದೆಹಲಿ: ''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ ಚಲನಶೀಲತೆ ಒಪ್ಪಂದಗಳನ್ನು ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿವೆ'' ಎಂದು ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಎಸ್. ಜೈಶಂಕರ್ ಹೇಳಿದರು.

ನವದೆಹಲಿಯಲ್ಲಿ ಶುಕ್ರವಾರ ನಡೆದ 2024ರ CII ವಾರ್ಷಿಕ ವ್ಯಾಪಾರ ಶೃಂಗಸಭೆಯಲ್ಲಿ ಮಾತನಾಡಿದ ಅವರು, "ಇಂದಿನ ಆರ್ಥಿಕತೆಯ ಯುಗದಲ್ಲಿ ಭಾರತೀಯ ಕೌಶಲ್ಯ ಮತ್ತು ಪ್ರತಿಭೆಯ ಪಾತ್ರವನ್ನು ಸಹ ಮರುಮೌಲ್ಯಮಾಪನ ಮಾಡಲಾಗುತ್ತಿದೆ. ತಾಂತ್ರಿಕ ಪ್ರಗತಿಯ ಸ್ವರೂಪವು ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತಿದೆ. ಆದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನಸಂಖ್ಯೆ ಕೊರತೆ ಇದೆ. ಭಾರತದೊಂದಿಗೆ ಚಲನಶೀಲತೆ ಒಪ್ಪಂದಗಳನ್ನು ಮಾಡಿಕೊಳ್ಳಲು ಅಭಿವೃದ್ಧಿ ಹೊಂದಿದ ದೇಶಗಳು ಆಸಕ್ತಿ ತೋರುತ್ತಿವೆ'' ಎಂದರು.

''ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್ ಸಂಸ್ಕೃತಿ ಹರಡುವುದು ಮೋದಿ ಸರ್ಕಾರದ ಚಿಂತನೆಯಾಗಿದೆ. ಇದರಿಂದ ಅಭಿವೃದ್ಧಿ ಹೊಂದಿದ ದೇಶಗಳು ಮೋದಿ ಯೋಚನೆಗಳನ್ನು ಬೆಂಬಲಿಸಿವೆ. ಜೊತೆಗೆ ನಮ್ಮ ಮಾನವ ಸಂಪನ್ಮೂಲಗಳ ಉನ್ನತೀಕರಣದಲ್ಲಿ ವ್ಯಾಪಾರಗಳಿಗೆ ನ್ಯಾಯಯುತ ಪಾಲು ಲಭಿಸಬೇಕಿದೆ'' ಎಂದು ವಿವರಿಸಿದರು.

ವಿದೇಶಗಳಲ್ಲಿಯೂ ಸಹ ಭಾರತೀಯ ನಾಗರಿಕರನ್ನು ಸುರಕ್ಷಿತಗೊಳಿಸುವ ಬಾಧ್ಯತೆಯನ್ನು ಪ್ರತಿಪಾದಿಸಿದ ಸಚಿವರು, ಉಕ್ರೇನ್ ಮತ್ತು ಸುಡಾನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತದ ಯಶಸ್ವಿ ಕಾರ್ಯಾಚರಣೆಗಳನ್ನು ಎತ್ತಿ ತೋರಿಸಿದರು. ಭಾರತವನ್ನು ನಾವೀನ್ಯತೆ, ಸಂಶೋಧನೆ ಮತ್ತು ವಿನ್ಯಾಸಕ್ಕಾಗಿ ಜಾಗತಿಕ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಭರವಸೆ ನೀಡಿದರು.

"ಜಾಗತಿಕ ಕೆಲಸದ ಸ್ಥಳವು ವಿಸ್ತರಿಸಿದಂತೆ, ವಿದೇಶದಲ್ಲಿ ನಮ್ಮ ನಾಗರಿಕರನ್ನು ಸುರಕ್ಷಿತಗೊಳಿಸುವ ಬಾಧ್ಯತೆಯು ಪ್ರಮಾಣಾನುಗುಣವಾಗಿ ಬೆಳೆಯುತ್ತದೆ. ಅದೃಷ್ಟವಶಾತ್, ಇದು ಉಕ್ರೇನ್ ಮತ್ತು ಸುಡಾನ್‌ನಲ್ಲಿ ಇತ್ತೀಚೆಗೆ ಸಾಕ್ಷಿಯಾಗಿರುವಂತೆ ನಾವು ಈಗಾಗಲೇ ಸಾಮರ್ಥ್ಯಗಳನ್ನು ನಿರ್ಮಿಸಿದ ಮತ್ತು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು (ಎಸ್​ಒಪಿ) ರಚಿಸಿರುವ ಪ್ರದೇಶವಾಗಿದೆ. ವಿದೇಶದಲ್ಲಿ ಪ್ರಯಾಣಿಸುವ ಮತ್ತು ಕೆಲಸ ಮಾಡುವ ಭಾರತೀಯರ ಸುಲಭ ಜೀವನಕ್ಕಾಗಿ ನಾವು ತಂತ್ರಜ್ಞಾನವನ್ನು ಹೆಚ್ಚು ವ್ಯಾಪಕವಾಗಿ ಬಳಕೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು.

"ಮೇಕ್ ಇನ್ ಇಂಡಿಯಾ ಪ್ರಾಮುಖ್ಯತೆಯೊಂದಿಗೆ ನಾವೀನ್ಯತೆ, ಸಂಶೋಧನೆ ಮತ್ತು ವಿನ್ಯಾಸಕ್ಕಾಗಿ ನಮ್ಮ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. 'ವರ್ಕ್ ಇನ್ ಇಂಡಿಯಾ' ನೈಸರ್ಗಿಕ ಫಲಿತಾಂಶವಾಗಿದ್ದು, ಇದು 'ಮೇಕ್ ಇನ್ ಇಂಡಿಯಾ'ಗೆ ಆಧಾರವಾಗಿದೆ" ಎಂದರು.

"ಭಾರತವು ಭಯೋತ್ಪಾದನೆ ಮತ್ತು ಉಗ್ರವಾದದ ಪ್ರಭಾವವನ್ನು ತಗ್ಗಿಸುವತ್ತ ಕ್ರಮಗಳನ್ನು ತೆಗೆದುಕೊಂಡಿದೆ. ಜೊತೆಗೆ ಜಗತ್ತನ್ನು ಸಾಧ್ಯವಾದಷ್ಟು ಸ್ಥಿರಗೊಳಿಸುವ ನಿಟ್ಟಿನಲ್ಲಿ ಉತ್ತಮ ಕೊಡುಗೆ ನೀಡುವ ಕಾರ್ಯದಲ್ಲಿ ತೊಡಗಿದೆ. 'ಭಾರತ್ ಫಸ್ಟ್' ಮತ್ತು 'ವಸುದೈವ ಕುಟುಂಬಕಂ' ಈ ವಿವೇಚನಾಯುಕ್ತ ಸಂಯೋಜನೆಯೇ 'ವಿಶ್ವ ಬಂಧು' ಎಂಬುದನ್ನು ವ್ಯಾಖ್ಯಾನಿಸುತ್ತದೆ'' ಎಂದು ಸಚಿವ ಜೈಶಂಕರ್ ವಿವರಿಸಿದರು.

ಇದನ್ನೂ ಓದಿ: ಎಸ್ಐ ಮನೆ ಮೇಲೆ ಎಸಿಬಿ ದಾಳಿ:1 ಕೋಟಿ 8 ಲಕ್ಷ ನಗದು, ಕೆಜಿ ಚಿನ್ನ, ನಿವೇಶನ ದಾಖಲೆ ಜಪ್ತಿ - Anti Corruption Bureau raided

ETV Bharat Logo

Copyright © 2024 Ushodaya Enterprises Pvt. Ltd., All Rights Reserved.