ETV Bharat / bharat

2047ರ ವೇಳೆಗೆ 'ವಿಕ್ಷಿತ್ ಭಾರತ್': ಬಜೆಟ್​​​​​​​​ನಲ್ಲಿ ಸೀತಾರಾಮನ್​ ಘೋಷಣೆ..

author img

By ETV Bharat Karnataka Team

Published : Feb 1, 2024, 6:24 PM IST

Interim Budget: 24-25ರ ಮಧ್ಯಂತರ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಭವಿಷ್ಯದ ಭಾರತದ ಅರ್ಥ ವ್ಯವಸ್ಥೆ ಕುರಿತು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: 2024-25ರ ಮಧ್ಯಂತರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರದ ಸಾಧನೆಗಳು ಮತ್ತು 2047ರ ವೇಳೆಗೆ ಭಾರತವನ್ನು 'ವಿಕ್ಷಿತ್ ಭಾರತ್' ಮಾಡುವ ಯೋಜನೆಗಳ ಮೇಲೆ ಕೇಂದ್ರೀಕರಿಸಿದರು. ತಮ್ಮ ಭಾಷಣದ ನಡು ನಡುವೆ ವಿಕಸಿತ ಭಾರತ, ಪ್ರವಾಸಿ ಭಾರತ, ಅವಕಾಶಗಳ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಸೇರಿದಂತೆ ಹಲವು ಸಕಾರಾತ್ಮಕ ಆಶಯಗಳನ್ನು ಸಹ ಹಂಚಿಕೊಂಡರು. ಬಜೆಟ್​ ಆರಂಭದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಮೂಲಸೌಕರ್ಯ ಮತ್ತು ತೆರಿಗೆ ಸುಧಾರಣೆಗಳು ಸೇರಿದಂತೆ ಹಲವು ಆರ್ಥಿಕ ವಿಚಾರಗಳನ್ನು ಪ್ರಸ್ತಾಪಿಸಿದ ಸಚಿವೆ, ಬಳಿಕ ಭವಿಷ್ಯದ ಅರ್ಥ ವ್ಯವಸ್ಥೆಗೆ ಬಂದರು.

ವಿಕ್ಷಿತ್ ಭಾರತ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು "ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್" ಮಂತ್ರದೊಂದಿಗೆ ಅಂತರ್ಗತ ಬೆಳವಣಿಗೆಯತ್ತ ಗಮನ ಹರಿಸಿದೆ. ಅದೇ ರೀತಿ 2047ರ ವೇಳೆಗೆ 'ವಿಕ್ಷಿತ್ ಭಾರತ್' (ಅಭಿವೃದ್ಧಿ ಹೊಂದಿದ ಭಾರತ) ದೃಷ್ಟಿಕೋನಕ್ಕೆ ಬಜೆಟ್ ಅಡಿಪಾಯ ಹಾಕುತ್ತದೆ ಎಂದರು. ನಮ್ಮ ಸರ್ಕಾರವು ಸರ್ವತೋಮುಖ ಅಭಿವೃದ್ಧಿಯತ್ತ ಕೆಲಸ ಮಾಡುತ್ತಿದೆ. ಇದು ಎಲ್ಲ ಜಾತಿಗಳು ಮತ್ತು ಎಲ್ಲ ಹಂತಗಳಲ್ಲಿ ಜನರನ್ನು ಒಳಗೊಳ್ಳುತ್ತದೆ. 2047ರ ವೇಳೆಗೆ ಭಾರತವನ್ನು ವಿಕ್ಷಿತ ಭಾರತವನ್ನಾಗಿ ಮಾಡಲು ಮೋದಿ ನೇತೃತ್ವದ ಸರ್ಕಾರ ಕೆಲಸ ಮಾಡುತ್ತಿದೆ. 'ವಿಕ್ಷಿತ್ ಭಾರತ್'ನ ದೃಷ್ಟಿಯು ಸಮೃದ್ಧ ಭಾರತವಾಗಿದ್ದು, ಪ್ರಕೃತಿಯೊಂದಿಗೆ ಸಾಮರಸ್ಯ, ಆಧುನಿಕ ಮೂಲಸೌಕರ್ಯ ಮತ್ತು ಎಲ್ಲ ನಾಗರಿಕರು ಎಲ್ಲಾ ಪ್ರದೇಶಗಳಿಗೆ ತಮ್ಮ ಸಾಮರ್ಥ್ಯವನ್ನು ತಲುಪಲು ಅವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ. ಈ ಮಧ್ಯಂತರ ಬಜೆಟ್ ಅಂತರ್ಗತ ಮತ್ತು ನವೀನವಾಗಿದೆ. ಇದು ನಿರಂತರತೆಯ ವಿಶ್ವಾಸವನ್ನು ಹೊಂದಿದೆ. ಇದು ವಿಕ್ಷಿತ್ ಭಾರತದ ಎಲ್ಲಾ 4 ಸ್ತಂಭಗಳಾದ ಯುವ, ಗರೀಬ್, ಮಹಿಳಾ ಮತ್ತು ಕಿಸಾನ್ ಅನ್ನು ಸಶಕ್ತಗೊಳಿಸುತ್ತದೆ. ಈ ಬಜೆಟ್ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡುವ ಭರವಸೆಯನ್ನು ನೀಡುತ್ತದೆ ಎಂದು ಸಚಿವರು ಹೇಳಿದರು.

ಪ್ರವಾಸೋದ್ಯಮ ಮತ್ತು ಹೂಡಿಕೆ ಉತ್ತೇಜನ: ಪ್ರವಾಸೋದ್ಯಮವನ್ನು ಪ್ರಸ್ತಾಪಿಸಿದ ವಿತ್ತ ಸಚಿವೆ, ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸಿ ಕೇಂದ್ರಗಳು ಮತ್ತು ಮೂಲಸೌಕರ್ಯ ಯೋಜನೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದಿದ್ದಾರೆ. ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಒಳಹರಿವು ಗಮನಾರ್ಹ ಹೆಚ್ಚಳವನ್ನು ದಾಖಲಿಸಿದೆ. ಹೆಚ್ಚಿನ ವಿದೇಶಿ ಹೂಡಿಕೆ ಆಕರ್ಷಿಸುವ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. 60 ಸ್ಥಳಗಳಲ್ಲಿ G20 ಸಭೆಯನ್ನು ಆಯೋಜಿಸಿದ ಯಶಸ್ಸು ಜಾಗತಿಕ ಪ್ರೇಕ್ಷಕರಿಗೆ ಭಾರತದ ವೈವಿಧ್ಯತೆಯನ್ನು ಪ್ರಸ್ತುತಪಡಿಸಿದೆ. ನಮ್ಮ ಆರ್ಥಿಕ ಶಕ್ತಿಯು ದೇಶವನ್ನು ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಆಕರ್ಷಕ ತಾಣವನ್ನಾಗಿ ಪರಿವರ್ತಿಸಿದೆ. ದೇಶದ ಮಧ್ಯಮ ವರ್ಗದವರು ಈಗ ಪ್ರವಾಸ ಮಾಡಲು ಮತ್ತು ಅನ್ವೇಷಿಸಲು ಬಯಸುತ್ತಿದ್ದಾರೆ. ಪ್ರವಾಸೋದ್ಯಮ, ಆಧ್ಯಾತ್ಮಿಕ ಪ್ರವಾಸೋದ್ಯಮ ಸೇರಿದಂತೆ, ಸ್ಥಳೀಯ ಉದ್ಯಮಶೀಲತೆಗೆ ಪ್ರಚಂಡ ಅವಕಾಶಗಳಿವೆ. ಐಕಾನಿಕ್ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಹೊಂದಾಣಿಕೆಯ ಆಧಾರದ ಮೇಲೆ ಹಣಕಾಸು ಒದಗಿಸಲು ಮತ್ತು ಅವುಗಳನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಮಾಡಲು ಮತ್ತು ಮಾರಾಟ ಮಾಡಲು ದೀರ್ಘಾವಧಿಯ ಬಡ್ಡಿರಹಿತ ಸಾಲಗಳನ್ನು ರಾಜ್ಯಗಳಿಗೆ ನೀಡಿ ಪ್ರೋತ್ಸಾಹಿಸಲಾಗುವುದು. ಸೌಲಭ್ಯ ಮತ್ತು ಸೇವೆಗಳ ಗುಣಮಟ್ಟದ ಆಧಾರದ ಮೇಲೆ ಕೇಂದ್ರಗಳ ರೇಟಿಂಗ್‌ಗೆ ಚೌಕಟ್ಟನ್ನು ಸ್ಥಾಪಿಸಲಾಗುವುದು. ಹೆಚ್ಚುವರಿಯಾಗಿ, ಲಕ್ಷದ್ವೀಪ ಸೇರಿದಂತೆ ದೇಶದ ದ್ವೀಪಗಳಲ್ಲಿ ಬಂದರು ಸಂಪರ್ಕ, ಪ್ರವಾಸೋದ್ಯಮ ಮೂಲಸೌಕರ್ಯ ಮತ್ತು ಸೌಕರ್ಯಗಳಿಗೆ ಯೋಜನೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಹೂಡಿಕೆಗಳನ್ನು ಉತ್ತೇಜಿಸುವುದು: ಇಂದಿನ ಮಧ್ಯಂತರ ಬಜೆಟ್ ಭಾಷಣದಲ್ಲಿ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಮಹತ್ವದ ಪಾತ್ರವನ್ನು ಸಹ ಸಚಿವೆ ಸೀತಾರಾಮನ್ ಒತ್ತಿ ಹೇಳಿದರು. ಅದನ್ನು 'ಮೊದಲ ಅಭಿವೃದ್ಧಿ ಭಾರತ' ಎಂದು ಕರೆಯುವ ಮೂಲಕ ಹೊಸ ದೃಷ್ಟಿಕೋನವನ್ನು ನೀಡಿದರು. 2014-23ರಲ್ಲಿ ಎಫ್‌ಡಿಐ ಒಳಹರಿವು USD 596 ಶತಕೋಟಿಯಾಗಿದ್ದು, ಇದು ಸುವರ್ಣ ಯುಗವನ್ನು ಗುರುತಿಸುತ್ತದೆ. 2005 ರಿಂದ 2014 ರವರೆಗೆ ದಾಖಲಾದ $298 ಶತಕೋಟಿಗೆ ಹೋಲಿಸಿದರೆ 2014 ರಿಂದ 2023 ರವರೆಗೆ $596 ಶತಕೋಟಿಯಷ್ಟು ಎಫ್‌ಡಿಐ ಒಳಹರಿವು ದ್ವಿಗುಣವಾಗಿದೆ. ಹೆಚ್ಚಿನ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ನಿರಂತರ ವಿದೇಶಿ ಹೂಡಿಕೆಯನ್ನು ಪ್ರೋತ್ಸಾಹಿಸಲು, ನಾವು ನಮ್ಮ ವಿದೇಶಿ ಪಾಲುದಾರರೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳ ಕುರಿತು ಮಾತುಕತೆ ನಡೆಸುತ್ತಿದ್ದೇವೆ ಎಂದು ಅವರು ಮೋದಿ ಸರ್ಕಾರದ ಸಮೃದ್ಧ ಅವಧಿಯನ್ನು ಸೂಚಿಸಿದರು.

ಸಾಮಾಜಿಕ ಬದಲಾವಣೆಗಳು: ನಮ್ಮ ಸರ್ಕಾರವು ಸರ್ವತೋಮುಖ, ಸರ್ವವ್ಯಾಪಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ. ಅದೇ ರೀತಿ ಜನಸಂಖ್ಯೆ ನಿಯಂತ್ರಣವು ಸಂಘಪರಿವಾರದ ಪ್ರಮುಖ ವಿಷಯಗಳಲ್ಲಿ ಒಂದಾಗಿರುವುದರಿಂದ, ವೇಗದ ಜನಸಂಖ್ಯೆಯ ಬೆಳವಣಿಗೆ ಮತ್ತು ಜನಸಂಖ್ಯಾ ಬದಲಾವಣೆಯಿಂದ ಉಂಟಾಗುವ ಸವಾಲುಗಳನ್ನು ಸಮಗ್ರವಾಗಿ ಪರಿಶೀಲಿಸಲು ಸರ್ಕಾರವು ಉನ್ನತ ಅಧಿಕಾರದ ಸಮಿತಿಯನ್ನು ರಚಿಸಲಿದೆ ಎಂದು ವಿತ್ತ ಸಚಿವೆ ಸೀತಾರಾಮನ್ ಹೇಳಿದರು.

ಅಮೃತ್ ಕಾಲ ಈಗ ಕರ್ತವ್ಯ ಕಾಲ: 'ಅಮೃತ್ ಕಾಲ್' ಎಂಬ ಪದವು ಹೊಸದಲ್ಲವಾದರೂ, ಇದನ್ನು ಮೊದಲು 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಸಚಿವೆ ಸೀತಾರಾಮನ್ ಅವರು ಇಂದಿನ ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಈ ಪದವನ್ನು ಹಲವು ಬಾರಿ ಪುನರುಚ್ಚರಿಸಿದರು. 'ಅಮೃತ್ ಕಾಲ್' ಭಾರತದ 75ನೇ ಮತ್ತು 100ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ನಡುವಿನ 25 ವರ್ಷಗಳನ್ನು ಉಲ್ಲೇಖಿಸುತ್ತದೆ. ನಮ್ಮ ಸರ್ಕಾರವು ಸರ್ವತೋಮುಖ, ಸರ್ವವ್ಯಾಪಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ. ಜನರ ಆಶೋತ್ತರಗಳನದನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಬದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿಜಿ ಅವರು ರಾಷ್ಟ್ರವನ್ನುದ್ದೇಶಿಸಿ ತಮ್ಮ ಭಾಷಣದಲ್ಲಿ ಈ ಮಾತನ್ನು ಹೇಳಿದ್ದರು. ಹೊಸ ಸ್ಫೂರ್ತಿಗಳು, ಹೊಸ ಪ್ರಜ್ಞೆ, ಹೊಸ ಸಂಕಲ್ಪಗಳೊಂದಿಗೆ ನಾವು ರಾಷ್ಟ್ರೀಯ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಅಪಾರವಾದ ಅವಕಾಶಗಳು ತೆರೆದುಕೊಳ್ಳುತ್ತಿದೆ. ಅದು ನಮ್ಮ ಕರ್ತವ್ಯ ಕಾಲ ಎಂದು ಅವರು ಹೇಳಿದರು.

ಇದನ್ನೂ ಓದಿ: 58 ನಿಮಿಷಗಳ ಬಜೆಟ್ ಭಾಷಣ: ಆ ನಾಲ್ಕು ವರ್ಗಗಳ ಮೇಲೆಯೇ ವಿತ್ತ ಸಚಿವರ ಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.