ETV Bharat / bharat

58 ನಿಮಿಷಗಳ ಬಜೆಟ್ ಭಾಷಣ: ಆ ನಾಲ್ಕು ವರ್ಗಗಳ ಮೇಲೆಯೇ ವಿತ್ತ ಸಚಿವರ ಗಮನ

author img

By ETV Bharat Karnataka Team

Published : Feb 1, 2024, 5:28 PM IST

ಲೋಕಸಭೆ ಚುನಾವಣೆಯ ವರ್ಷದಲ್ಲಿ ಮಧ್ಯಂತರ ಬಜೆಟ್​ ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 58 ನಿಮಿಷಗಳ ಭಾಷಣದಲ್ಲಿ ಬಡವರು, ರೈತರು, ಮಹಿಳೆಯರು ಮತ್ತು ಯುವಕರ ಮೇಲೆ ಕೇಂದ್ರೀಕರಿಸಿದ್ದಾರೆ.

report-card-election-year-budget-reaches-out-to-4-key-groups-farmers-women-youth-and-poor
58 ನಿಮಿಷಗಳ ಬಜೆಟ್ ಭಾಷಣ; ಆ ನಾಲ್ಕು ವರ್ಗಗಳ ಮೇಲೆಯೇ ವಿತ್ತ ಸಚಿವರ ಹೆಚ್ಚು ಗಮನ

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 17ನೇ ಲೋಕಸಭೆಯ ಕೊನೆಯ ಮಧ್ಯಂತರ ಬಜೆಟ್​ನಲ್ಲಿ ಯುವಕರು, ಬಡವರು, ಮಹಿಳೆಯರು ಹಾಗೂ ರೈತರ ಬಗ್ಗೆ ಹೆಚ್ಚು ಕೇಂದ್ರೀಕರಿಸಿದ್ದು, ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಮುಖವಾದ ಈ ನಾಲ್ಕು ವರ್ಗಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಲೋಕಸಭೆಯಲ್ಲಿ ಇಂದು ಮಧ್ಯಂತರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ನಮ್ಮ ಸರ್ಕಾರವು ಸರ್ವತೋಮುಖ, ಸರ್ವವ್ಯಾಪಿ ಮತ್ತು ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಯ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ. ಪ್ರತಿಯೊಂದು ಎಲ್ಲ ಹಂತಗಳಲ್ಲಿ ಎಲ್ಲ ಜಾತಿಗಳು ಮತ್ತು ಎಲ್ಲ ವರ್ಗದ ಜನರನ್ನು ಒಳಗೊಂಡಿದೆ. ನಮ್ಮ ಪ್ರಧಾನಿ ದೃಢವಾಗಿ ನಂಬಿರುವಂತೆ ನಾಲ್ಕು ಪ್ರಮುಖ ಜಾತಿಗಳಾದ ಬಡವರು, ಮಹಿಳೆಯರು, ಯುವಕರು, ರೈತರ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಗರೀಬ್ ಕಲ್ಯಾಣ (ಬಡವರ ಕಲ್ಯಾಣ): ಬಡವರ ಕಲ್ಯಾಣವೇ ದೇಶದ ಕಲ್ಯಾಣ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಹಣಕಾಸು ಸಚಿವರು, ಬಹು ಆಯಾಮದ ಬಡತನದಿಂದ ಮುಕ್ತಿ ಪಡೆಯಲು ಸರ್ಕಾರವು 25 ಕೋಟಿ ಜನರಿಗೆ ಸಹಾಯ ಮಾಡಿದೆ. ಜನರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ ಜನ್ - ಧನ್ ಖಾತೆಗಳಿಗೆ ಸರ್ಕಾರದಿಂದ 34 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಲು ನೇರ ಲಾಭ ವರ್ಗಾವಣೆ (ಡಿಬಿಟಿ)ಯನ್ನು ಬಳಸಿಕೊಂಡ ಪರಿಣಾಮ 2.7 ಲಕ್ಷ ಕೋಟಿ ರೂಪಾಯಿಗಳ ಉಳಿತಾಯಕ್ಕೆ ಕಾರಣವಾಗಿದೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

78 ಲಕ್ಷ ಬೀದಿ ವ್ಯಾಪಾರಿಗಳು ಸರ್ಕಾರದ ಯೋಜನೆಯಡಿ ಆರ್ಥಿಕ ನೆರವು ಪಡೆದಿದ್ದಾರೆ. ಇವರಲ್ಲಿ 2.3 ಲಕ್ಷ ಜನರು ಮೂರನೇ ಬಾರಿಗೆ ಸಾಲವನ್ನು ಪಡೆದಿದ್ದಾರೆ. ವಿಶೇಷವಾಗಿ ದುರ್ಬಲ ಬುಡಕಟ್ಟು ಜನರನ್ನು ತಲುಪಲು ಪಿಎಂ ಜನ್​-ಮನ್​ ಯೋಜನೆ ಮತ್ತು 18 ಕ್ಷೇತ್ರಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗಾಗಿ ಪಿಎಂ ವಿಶ್ವಕರ್ಮ ಯೋಜನೆಯ ಬಗ್ಗೆ ಸಚಿವೆ ನಿರ್ಮಲಾ ಹೆಚ್ಚು ಗಮನ ಸೆಳೆದಿದ್ದಾರೆ.

ರೈತರ ಕಲ್ಯಾಣ: 2019ರ ಲೋಕಸಭೆ ಚುನಾವಣೆಗೆ ಮೊದಲು ಘೋಷಿಸಲಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ಉಲ್ಲೇಖಿಸಿದ ಸಚಿವರು, ಈ ಯೋಜನೆಯ ಮೂಲಕ 11.8 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. 4 ಕೋಟಿ ರೈತರು ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಎಲೆಕ್ಟ್ರಾನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆಯು 1,361 ಮಾರುಕಟ್ಟೆಗಳನ್ನು ಸಂಯೋಜಿಸಿದ್ದು, 1.8 ಕೋಟಿ ರೈತರಿಗೆ 3 ಲಕ್ಷ ಕೋಟಿ ರೂಪಾಯಿಗಳ ವ್ಯಾಪಾರದ ಪ್ರಮಾಣವನ್ನು ಒದಗಿಸಿದೆ. ಇದರೊಂದಿಗೆ ಹಲವಾರು ಇತರ ಕಾರ್ಯಕ್ರಮಗಳು, ದೇಶ ಮತ್ತು ಜಗತ್ತಿಗೆ ಆಹಾರವನ್ನು ಉತ್ಪಾದಿಸುವಲ್ಲಿ ಅನ್ನದಾತರಿಗೆ ಸಹಾಯ ಮಾಡುತ್ತಿವೆ ಎಂದು ಹೇಳಿದ್ದಾರೆ.

ಇದೇ ವೇಳೆ, ಎಲ್ಲ ಕೃಷಿ - ಹವಾಮಾನ ವಲಯಗಳಲ್ಲಿನ ವಿವಿಧ ಬೆಳೆಗಳಿಗೆ ನ್ಯಾನೋ ಡಿಎಪಿ ಯೋಜನೆ ವಿಸ್ತರಿಸುವುದಾಗಿ ಅವರು ಘೋಷಿಸಿದ್ದಾರೆ. ಸಾಸಿವೆ, ಕಡಲೆಕಾಯಿ, ಎಳ್ಳು, ಸೋಯಾಬೀನ್ ಮತ್ತು ಸೂರ್ಯಕಾಂತಿಗಳಂತಹ ಎಣ್ಣೆ ಬೀಜಗಳಲ್ಲಿ ಸ್ವಾವಲಂಬನೆ ಸಾಧಿಸಲು ಎಣ್ಣೆ ಬೀಜಗಳ ಮಿಷನ್ ಕಾರ್ಯಕ್ರಮವನ್ನೂ ಪ್ರಕಟಿಸಿದ್ದಾರೆ. ಇದಲ್ಲದೇ, ಡೈರಿ ಮತ್ತು ಮೀನುಗಾರಿಕೆ ಅಭಿವೃದ್ಧಿ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಭರವಸೆ ನೀಡಿದ್ದಾರೆ.

ನಾರಿ ಶಕ್ತಿ: ತಮ್ಮ ಬಜೆಟ್ ಭಾಷಣದಲ್ಲಿ ಸರ್ಕಾರದ ಮಹಿಳಾ ಕಲ್ಯಾಣ ಕ್ರಮಗಳ ಕುರಿತು ಮಾತನಾಡಿರುವ ಸಚಿವೆ ನಿರ್ಮಲಾ, ಕಳೆದ ಹತ್ತು ವರ್ಷಗಳಲ್ಲಿ ಉದ್ಯಮಶೀಲತೆ, ಸುಲಭವಾದ ಜೀವನ ಮತ್ತು ಘನತೆಯ ಮೂಲಕ ಮಹಿಳೆಯರ ಸಬಲೀಕರಣವು ವೇಗವನ್ನು ಪಡೆದುಕೊಂಡಿದೆ. ಮಹಿಳಾ ಉದ್ಯಮಿಗಳಿಗೆ 30 ಕೋಟಿ ಮುದ್ರಾ ಯೋಜನೆಯ ಸಾಲಗಳನ್ನು ನೀಡಲಾಗಿದೆ ಮತ್ತು ಹತ್ತು ವರ್ಷಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿ ಶೇ.28ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ತ್ರಿವಳಿ ತಲಾಖ್ ರದ್ದು, ಮಹಿಳೆಯರಿಗೆ ಮೀಸಲಾತಿಯಂತಹ ಕ್ರಮಗಳ ಬಗ್ಗೆ ಉಲ್ಲೇಖಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ನಿರ್ಮಿಸಲಾದ ಶೇ.70ರಷ್ಟು ಮನೆಗಳಿಗೆ ಮಹಿಳೆಯರು ತಾವೇ ಅಥವಾ ಜಂಟಿ ಮಾಲೀಕರಾಗಿದ್ದಾರೆ. ಸ್ವಸಹಾಯ ಸಂಘಗಳ ಸಬಲೀಕರಣ ಮತ್ತು ಸ್ವಾವಲಂಬನೆಗಾಗಿ ಲಖಪತಿ ದೀದಿ ಯೋಜನೆಯಡಿ ಒಂದು ಕೋಟಿ ಮಹಿಳೆಯರು ಪ್ರಯೋಜನೆ ಪಡೆದಿದ್ದಾರೆ. ಈ ಗುರಿಯನ್ನು 2 ಕೋಟಿಯಿಂದ 3 ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಸುಧಾರಿತ ಪೌಷ್ಠಿಕಾಂಶ ವಿತರಣೆ, ಬಾಲ್ಯದ ಆರೈಕೆ ಮತ್ತು ಅಭಿವೃದ್ಧಿಗಾಗಿ ಸಕ್ಷಮ್ ಅಂಗನವಾಡಿ ಮತ್ತು ಪೋಷಣೆ 2.0 ಅಡಿಯಲ್ಲಿ ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕೆ ವೇಗ ನೀಡಲಾಗುವುದು ಎಂದಿದ್ದಾರೆ.

ಯುವ ಕಲ್ಯಾಣ: ಭಾರತವು ಯುವಕರ ರಾಷ್ಟ್ರವಾಗಿದ್ದು, ನಮ್ಮ ಜನಸಂಖ್ಯೆಯ ಶೇ.58ಕ್ಕಿಂತ ಹೆಚ್ಚು ಜನರು 29 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ನಮ್ಮ ಏಳಿಗೆಯು ಯುವಕರನ್ನು ಸಮರ್ಪಕವಾಗಿ ಸಜ್ಜುಗೊಳಿಸುವ ಮತ್ತು ಸಬಲೀಕರಣದ ಮೇಲೆ ಅವಲಂಬಿತವಾಗಿದೆ. ಸ್ಕಿಲ್ ಇಂಡಿಯಾ ಮಿಷನ್ ಮೂಲಕ 1.4 ಕೋಟಿ ಯುವಕರಿಗೆ ತರಬೇತಿ, 54 ಲಕ್ಷ ಯುವಕರಿಗೆ ಕೌಶಲ್ಯ ಮತ್ತು ಪುನರ್ ಕೌಶಲ್ಯವನ್ನು ತರಬೇತಿ ನೀಡಿದ್ದು, 3,000 ಹೊಸ ಐಟಿಐಗಳನ್ನು ಸ್ಥಾಪಿಸಲಾಗಿದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ.

ಐವತ್ತು ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಕಾರ್ಪಸ್ ಸ್ಥಾಪಿಸುವ ಪ್ರಸ್ತಾವನೆ ಮಾಡಿದ ಅವರು, ನಮ್ಮ ಬುದ್ಧಿವಂತ ಟೆಕ್​ ಯುವಕರಿಗೆ ಇದು ಸುವರ್ಣ ಯುಗವಾಗಿದೆ. ಈ ಕಾರ್ಪಸ್​ ಕಡಿಮೆ ಅಥವಾ ಶೂನ್ಯ ಬಡ್ಡಿದರದ ಹಣಕಾಸು ನೆರವು ಒದಗಿಸುತ್ತದೆ. ಇದು ಹೊಸ ವಲಯದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸಲು ಖಾಸಗಿ ವಲಯವನ್ನು ಉತ್ತೇಜಿಸುತ್ತದೆ. ನಮ್ಮ ಯುವ ಶಕ್ತಿ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಇಂತಹ ಕಾರ್ಯಕ್ರಮಗಳು ನಮಗೆ ಬೇಕಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಬಾರಿಯ ಬಜೆಟ್​ನಿಂದ ಯುವಕರು, ಬಡವರು, ಮಹಿಳೆಯರು, ರೈತರ ಸಬಲೀಕರಣ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.