ETV Bharat / bharat

ರೈತರ ದೆಹಲಿ ಚಲೋ: ಶಂಭು ಗಡಿಯಿಂದಲೇ 2ನೇ ದಿನದ ಹೋರಾಟ ಪುನಾರಂಭ, ಇಂಟರ್​​ನೆಟ್​ ಬಂದ್​

author img

By ETV Bharat Karnataka Team

Published : Feb 14, 2024, 11:07 AM IST

Updated : Feb 14, 2024, 11:46 AM IST

ರೈತರ ದೆಹಲಿ ಚಲೋ
ರೈತರ ದೆಹಲಿ ಚಲೋ

2ನೇ ದಿನದ ರೈತರ ದೆಹಲಿ ಚಲೋ ಪ್ರತಿಭಟನೆ ಶಂಭು ಗಡಿಯಿಂದ ಪುನಾರಂಭವಾಗಿದೆ. ಹರಿಯಾಣದಲ್ಲಿ ನಡೆದ ಘರ್ಷಣೆಯ ಬಳಿಕ ರೈತರು ಹೋರಾಟವನ್ನು ತೀವ್ರಗೊಳಿಸಿದ್ದು, ಇತ್ತ ಸರ್ಕಾರವೂ ಬಿಗಿ ಬಂದೋಬಸ್ತ್​ ಕೂಡಾ ಹೆಚ್ಚಿಸಿದೆ.

ನವದೆಹಲಿ: ರೈತರ ದೆಹಲಿ ಚಲೋ ಹೋರಾಟ 2ನೇ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾರು ಅನ್ನದಾತರು ದೆಹಲಿಯತ್ತ ನುಗ್ಗಿ ಬರುತ್ತಿದ್ದಾರೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಕೂಡ ಸರ್ವ ಸನ್ನದ್ಧವಾಗಿದೆ. ದಿಲ್ಲಿ, ಹರಿಯಾಣದ ಗಡಿಗಳಲ್ಲಿ ಭಾರೀ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಮಂಗಳವಾರ ಘರ್ಷಣೆ ನಡೆದ ಶಂಭು ಗಡಿಯಿಂದಲೇ ಇಂದಿನ ಪ್ರತಿಭಟನೆಯನ್ನು ಪುನಾರಂಭಿಸಲಾಗಿದೆ.

ಮಂಗಳವಾರ ಹರಿಯಾಣದಲ್ಲಿ ನಡೆದ ಸಣ್ಣ ಸಂಘರ್ಷದ ಬಳಿಕ ತೀವ್ರ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು ದೆಹಲಿಗೆ ಬರುವ ಎಲ್ಲಾ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡುತ್ತಿದ್ದಾರೆ. ಬ್ಯಾರಿಕೇಡ್​ಗಳನ್ನು ಇನ್ನಷ್ಟು ಭದ್ರಪಡಿಸಲಾಗಿದ್ದು, ಪೊಲೀಸರ ಪಹರೆ ಹಾಕಲಾಗಿದೆ.

ಪಂಜಾಬ್ - ಹರಿಯಾಣ ಗಡಿಯಲ್ಲಿ ಹಾಕಲಾಗಿರುವ ಬ್ಯಾರಿಕೇಡ್​ಗಳನ್ನು ಮುರಿದು ಮುಂದೆ ಸಾಗಲು ಯತ್ನಿಸಿದ ವೇಳೆ ಪ್ರತಿಭಟನಾಕಾರ ಮೇಲೆ ಪೊಲೀಸರು ಅಶ್ರುವಾಯು, ಜಲಫಿರಂಗಿ ಬಳಸಿದ್ದಾರೆ. ಇದರಿಂದ ಕೆಲ ಹೊತ್ತು ಘರ್ಷಣೆ ನಡೆದು, ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಯಿತು. ಬಳಿಕ ರೈತರು ಮಂಗಳವಾರ ರಾತ್ರಿವರೆಗೂ ಕದನ ವಿರಾಮ ನೀಡಿದ್ದರು. ಇದೀಗ ಮತ್ತೆ ದೆಹಲಿ ಕಡೆಗೆ ತಮ್ಮ ಮೆರವಣಿಗೆಯನ್ನು ಪುನರಾರಂಭಿಸಿದ್ದಾರೆ.

ಇಂಟರ್​ನೆಟ್​​​ ಬಂದ್​: ರೈತ ಹೋರಾಟ ಹಿನ್ನೆಲೆಯಲ್ಲಿ ಹರಿಯಾಣ ರಾಜ್ಯದ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಧ್ವನಿ ಕರೆಗಳನ್ನು ಹೊರತುಪಡಿಸಿ ಮೊಬೈಲ್ ಇಂಟರ್​​ನೆಟ್​​​ ಬಂದ್​ ಮಾಡಲಾಗಿದೆ. ಸಂದೇಶ ರವಾನೆ, ಡೋಂಗಲ್ ಬಳಸಿ ಅಂತರ್ಜಾಲ ಬಳಕೆಯನ್ನು ಫೆಬ್ರವರಿ 15 ರವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

2020-21 ರ ಪ್ರತಿಭಟನೆಯ ವೇಳೆ ನಡೆದ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ತೀವ್ರ ಮುನ್ನೆಚ್ಚರಿಕೆ ವಹಿಸಿದೆ. ಕೆಂಪುಕೋಟೆ ಬಂದ್​ ಮಾಡಲಾಗಿದೆ. ಸಂಸತ್​ ಭವನಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಪ್ರಮುಖ ರಸ್ತೆಗಳಿಗೆ ಜನ ಸಂಚಾರವನ್ನು ಬಂದ್ ಮಾಡಲಾಗಿದೆ.

ರೈತರ ವಿರುದ್ಧ ಡ್ರೋನ್​ ಬಳಕೆಗೆ ಆಕ್ರೋಶ: ಹರಿಯಾಣದ ಶಂಭು ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಶ್ರುವಾಯು ಸಿಡಿಸಲಾಗಿದ್ದು, ಇದಕ್ಕೆ ಡ್ರೋನ್​ ಬಳಕೆ ಮಾಡಿದ್ದರ ವಿರುದ್ಧ ಪಂಜಾಬ್​ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ರೈತರ ಮೇಲೆ ಡ್ರೋನ್​ಗಳಿಂದ ಟಿಯರ್ ಗ್ಯಾಸ್​ ಬಿಸಾಡಲಾಗಿದೆ. ಹೀಗಾಗಿ ಡ್ರೋನ್​ಗಳನ್ನು ಪಂಜಾಬ್​ನ ಪ್ರದೇಶದೊಳಗೆ ಕಳುಹಿಸದಂತೆ ಪಂಜಾಬ್‌ನ ಪಟಿಯಾಲ ಡೆಪ್ಯುಟಿ ಕಮಿಷನರ್ (ಡಿಸಿ) ಶೋಕತ್ ಅಹ್ಮದ್ ಪರ್ರೆ ಅವರು ಅಂಬಾಲಾ ಡೆಪ್ಯೂಟಿ ಕಮಿಷನರ್‌ಗೆ ಪತ್ರ ಬರೆದಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್​ಪಿ) ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರೈತರು ಜನವರಿ 13 ರಂದು ದೆಹಲಿ ಚಲೋ ಚಳವಳಿ ಆರಂಭಿಸಿದ್ದಾರೆ. ಈ ವೇಳೆ, ಹರಿಯಾಣದ ಗಡಿಯಲ್ಲಿ ದೆಹಲಿಯತ್ತ ತೆರಳುತ್ತಿದ್ದ ರೈತರು ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಚದುರಿಸಲು ಹರಿಯಾಣದ ಪೊಲೀಸ್​ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಬೀಳಿಸಲು ಡ್ರೋನ್ ಅನ್ನು ನಿಯೋಜಿಸಿದ್ದರು.

ಪೊಲೀಸರು ಬಳಸಿದ ಅಶ್ರುವಾಯು, ಜಲಫಿರಂಗಿಯಿಂದಾಗಿ 60 ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ರೈತರ ಪ್ರತಿದಾಳಿಯಲ್ಲಿ 24 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕ್ರೀಡಾಂಗಣ ಜೈಲಾಗಿ ಪರಿವರ್ತಿಸಲ್ಲ ಎಂದ ದೆಹಲಿ ಸರ್ಕಾರ; ರೈತರ ಮೇಲೆ ಆಶ್ರುವಾಯು ಸಿಡಿಸಿದ ಪೊಲೀಸರು

Last Updated :Feb 14, 2024, 11:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.