ETV Bharat / bharat

ಮೋದಿ, ಖರ್ಗೆ, ರಾಹುಲ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಬಿಜೆಪಿ, ಕಾಂಗ್ರೆಸ್​ ಪ್ರತಿಕ್ರಿಯೆ ಕೇಳಿದ ಚು.ಆಯೋಗ - MCC Violation

author img

By ETV Bharat Karnataka Team

Published : Apr 25, 2024, 4:06 PM IST

EC seeks reply from BJP on Congress' complaint over PM Modi's Speech
ಮೋದಿ, ಖರ್ಗೆ, ರಾಹುಲ್ ವಿರುದ್ಧದ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಪ್ರಧಾನಿ ಮೋದಿ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ವಿರುದ್ಧದ ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಂಬಂಧ ಚುನಾವಣಾ ಆಯೋಗವು ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷದಿಂದ ಪ್ರತ್ಯೇಕ ಪ್ರತಿಕ್ರಿಯೆ ಕೇಳಿದೆ.

ನವದೆಹಲಿ: ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರ ವಿರುದ್ಧ ಚುನಾವಣಾ ಮಾದರಿ ಸಂಹಿತೆ ಉಲ್ಲಂಘನೆ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ಪರಿಗಣನೆಗೆ ತೆಗೆದುಕೊಂಡಿದೆ. ಪ್ರಧಾನಿ ಮೋದಿ ವಿಭಜನೆ ಮತ್ತು ಮಾನಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಸಲ್ಲಿಸಿರುವ ದೂರುಗಳ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಆಡಳಿತಾರೂಢ ಬಿಜೆಪಿಗೆ ಆಯೋಗ ಗುರುವಾರ ಸೂಚಿಸಿದೆ. ಇದೇ ವೇಳೆ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ನೀಡಿರುವ ದೂರುಗಳ ಕುರಿತು ಕೂಡಾ ಪ್ರತಿಕ್ರಿಯಿಸುವಂತೆ ಕಾಂಗ್ರೆಸ್‌ಗೂ ಸೂಚನೆ ನೀಡಿದೆ.

ಮೋದಿ ವಿರುದ್ಧ ಆರೋಪವೇನು?: ರಾಜಸ್ಥಾನದ ಬನ್ಸ್ವಾರಾದಲ್ಲಿ ಏಪ್ರಿಲ್ 21ರಂದು ಪ್ರಧಾನಿ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಕಾಂಗ್ರೆಸ್ ಜನತೆ ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ಒಳನುಸುಳುಕೋರರು ಮತ್ತು ಯಾರು ಹೆಚ್ಚಿನ ಮಕ್ಕಳು ಹೊಂದಿದ್ದರೋ ಅವರಿಗೆ ಹಂಚಿಕೆ ಮಾಡಲು ಹೊರಟಿದೆ ಎಂದು ಗಂಭೀರವಾದ ಆರೋಪ ಮಾಡಿದ್ದರು. ಪ್ರಧಾನಿಯ ಈ ಹೇಳಿಕೆ ಕುರಿತಂತೆ ಕಾಂಗ್ರೆಸ್, ಸಿಪಿಐ ಮತ್ತು ಸಿಪಿಐ (ಎಂಎಲ್) ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದವು.

ಇದೀಗ ಈ ದೂರುಗಳ ಬಗ್ಗೆ ಪ್ರತಿಕ್ರಿಯೆ ಕೋರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಚುನಾವಣಾ ಆಯೋಗವು ಪತ್ರ ಬರೆದು, ಸೋಮವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಇದರ ಜೊತೆಗೆ "ರಾಜಕೀಯದಲ್ಲಿ ಭಾಷೆ ಉನ್ನತ ಗುಣಮಟ್ಟದಿಂದ ಇರಬೇಕು. ನುಡಿ ಮತ್ತು ನಡೆಯಲ್ಲಿ ಮಾದರಿ ನೀತಿ ಸಂಹಿತೆಯ ನಿಬಂಧನೆಗಳ ಬಗ್ಗೆಯೂ ಗಮನ ಹರಿಸುವಂತೆ ಪಕ್ಷದ ಎಲ್ಲ ಸ್ಟಾರ್ ಪ್ರಚಾರಕರಿಗೂ ತಿಳಿಸಬೇಕು'' ಎಂದು ಬಿಜೆಪಿ ಅಧ್ಯಕ್ಷರಿಗೆ ಆಯೋಗ ನಿರ್ದೇಶನ ಮಾಡಿದೆ. ಈ ಮೂಲಕ ಪ್ರಧಾನಿಯೊಬ್ಬರ ವಿರುದ್ಧದ ದೂರಿನ ಬಗ್ಗೆ ಆಯೋಗ ಗಮನಹರಿಸಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ಖರ್ಗೆ ಮತ್ತು ರಾಹುಲ್​ ಗಾಂಧಿ ವಿರುದ್ಧದ ಬಿಜೆಪಿ ದೂರುಗಳ ಬಗ್ಗೆಯೂ ಚುನಾವಣಾ ಆಯೋಗ ಇದೇ ರೀತಿಯಾದ ಪ್ರತ್ಯೇಕವಾದ ಪತ್ರ ಬರೆದಿದೆ. ಎರಡು ಪ್ರಮುಖ ಪಕ್ಷಗಳ ಅಧ್ಯಕ್ಷರಿಗೆ ಬಂದಿರುವ ಪತ್ರಗಳಲ್ಲಿ ನೇರವಾಗಿ ಮೋದಿ, ಖರ್ಗೆ ಅಥವಾ ರಾಹುಲ್​ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಮೂವರು ನಾಯಕರ ವಿರುದ್ಧದ ಆರೋಪಗಳ ವಿವರಗಳನ್ನು ಆಯಾ ಪತ್ರಗಳ ಮೂಲಕ ಅವರಿಗೂ ಲಗತ್ತಿಸಲಾಗಿದೆ.

ಕಾಂಗ್ರೆಸ್ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲು ಬಯಸುತ್ತಿದೆ ಮತ್ತು ಮಹಿಳೆಯರ ಮಂಗಳಸೂತ್ರವನ್ನು ಸಹ ಬಿಡುವುದಿಲ್ಲ ಎಂದು ಮೋದಿ ತಮ್ಮ ಭಾಷಣದಲ್ಲಿ ಆರೋಪಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಮುಖವಾಗಿ ದೂರಿದೆ.

ರಾಹುಲ್‌, ಖರ್ಗೆ ವಿರುದ್ಧ ಬಿಜೆಪಿ ದೂರೇನು?: ಮತ್ತೊಂದೆಡೆ, ತಮಿಳುನಾಡಿನ ಕೊಯಮತ್ತೂರಿನ ಭಾಷಣದಲ್ಲಿ ರಾಹುಲ್​ ಗಾಂಧಿ, ಮೋದಿ ವಿರುದ್ಧ ದುರುದ್ದೇಶಪೂರಿತ ಮತ್ತು ಕೆಟ್ಟ ಆರೋಪಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ದೂರು ಸಲ್ಲಿಸಿದೆ. ಎಸ್‌ಸಿ ಮತ್ತು ಎಸ್‌ಟಿಗಳ ವಿರುದ್ಧದ ತಾರತಮ್ಯದಿಂದಾಗಿ ರಾಮ ಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಖರ್ಗೆ ಹೇಳುವ ಮೂಲಕ ಮಾದರಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಮತ್ತೊಂದು ದೂರು ನೀಡಿದೆ.

ಇದನ್ನೂ ಓದಿ: ಕೇಜ್ರಿವಾಲ್ ಬಂಧನವನ್ನು ಸಮರ್ಥಿಸಿಕೊಂಡ ಇಡಿ: ಸುಪ್ರೀಂ ಕೋರ್ಟ್​ಗೆ ಅಫಿಡವಿಟ್​ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.