ETV Bharat / bharat

18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು 1000 ರೂ. ; ದೆಹಲಿ ಬಜೆಟ್​ನಲ್ಲಿ ಘೋಷಣೆ

author img

By PTI

Published : Mar 4, 2024, 1:29 PM IST

Updated : Mar 4, 2024, 1:34 PM IST

ನಮ್ಮ ಸರ್ಕಾರ ರಾಮ ರಾಜ್ಯದ ಕನಸನ್ನು ನನಸಾಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೇಜ್ರಿವಾಲ್​ ಸರ್ಕಾರ ಹೇಳಿದೆ.

delhi-budget-atishi-announces-rs-1000-monthly-assistance-scheme-for-women-aged-above-18
delhi-budget-atishi-announces-rs-1000-monthly-assistance-scheme-for-women-aged-above-18

ನವದೆಹಲಿ: ದೆಹಲಿ ಸರ್ಕಾರ ಮಹಿಳಾ ದಿನಾಚರಣೆಗೂ ಮುನ್ನ ನಾರಿಯರಿಗೆ ಸಿಹಿ ಸುದ್ದಿ ನೀಡಿದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಯುವತಿಯರು ಮತ್ತು ಮಹಿಳೆಯರಿಗೆ ಮಾಸಿಕ 1 ಸಾವಿರ ರೂ. ನೀಡುವುದಾಗಿ ದೆಹಲಿ ಸರ್ಕಾರದ ಆರ್ಥಿಕ ಸಚಿವೆ ಆತಿಶಿ ಇಂದು ಘೋಷಿಸಿದರು. ದೆಹಲಿ ಸರ್ಕಾರದ ಬಜೆಟ್​​ ಮಂಡಿಸುತ್ತಿರುವ ಅವರು, ಮುಖ್ಯಮಂತ್ರಿ ಮಹಿಳಾ ಸಮ್ಮಾನ್​ ಯೋಜನೆ ಅಡಿ ಪ್ರಸಕ್ತ ವರ್ಷದಿಂದ ಈ ಹಣ ನೀಡಲಾಗುವುದು. ಇದರಿಂದ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ ಎಂದರು.

2024-25ನೇ ಸಾಲಿನ ಬಜೆಟ್​ ಮಂಡಿಸುತ್ತಿರುವ ಅವರು, 76,000 ಕೋಟಿಯ ಆಯವ್ಯಯದ ಬಜೆಟ್​ ಮಂಡಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ನಮ್ಮ ಸರ್ಕಾರ ರಾಮ ರಾಜ್ಯದ ಕನಸನ್ನು ನನಸಾಗಿಸುವ ಪ್ರಯತ್ನ ಮಾಡುತ್ತಿದೆ ಎಂದರು.

ಕಳೆದ 10 ವರ್ಷದಲ್ಲಿ ಆಮ್​ ಆದ್ಮಿ ಪಕ್ಷ (ಎಎಪಿ) ಸರ್ಕಾರದ ಅಡಿಯಲ್ಲಿ ದೆಹಲಿ ಸಂಪೂರ್ಣವಾಗಿ ಬದಲಾಗಿದೆ. ಕೇಜ್ರಿವಾಲ್​ ಸರ್ಕಾರ 10ನೇ ಬಜೆಟ್​​ ಮಂಡಿಸುತ್ತಿದೆ. ನಾನು ಕೇವಲ ಬಜೆಟ್​ ಮಂಡಿಸುತ್ತಿಲ್ಲ. ಬದಲಾಗಿ ದೆಹಲಿಯ ಬದಲಾವಣೆ ಚಿತ್ರವನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಕೇಜ್ರಿವಾಲ್​ ಅವರು ಭರವಸೆಯ ಬೆಳಕನ್ನು ತಂದಿದ್ದಾರೆ. ನಾವೆಲ್ಲರೂ ರಾಮ ರಾಜ್ಯದಿಂದ ಪ್ರೇರಣೆಗೊಂಡಿದ್ದೇವೆ. ಈ ಕನಸನ್ನು ನಿಜವಾಗಿಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ವಿಧಾನಸಭೆಯಲ್ಲಿ ತಿಳಿಸಿದರು.

ಶಿಕ್ಷಣ ವಲಯಕ್ಕೆ 16,396 ಕೋಟಿಯನ್ನು ನೀಡಲಾಗಿದ್ದು, ಆರೋಗ್ಯ ವಲಯಕ್ಕೆ 8,685 ಕೋಟಿ ಮೀಸಲಿಡಲಾಗಿದೆ. ಯಾತ್ರಾರ್ಥಿಗಳ ಯೋಜನೆಗೆ 80 ಕೋಟಿ ರೂ. ನೀಡಲಾಗಿದೆ. ಮುಖ್ಯಮಂತ್ರಿ ಸಿಸಿಟಿವಿ ಯೋಜನೆಯಡಿ ದೆಹಲಿಯಲ್ಲಿ 2 ಲಕ್ಷದ 60 ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ದೆಹಲಿ ಜನರ ಅಭಿವೃದ್ಧಿಗೆ ಅನೇಕ ವಿಧದ ನೀತಿ ಮತ್ತು ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ. 2014 ಮತ್ತು 2024ರಿಂದ ದೆಹಲಿಯ ಭಾರೀ ಬದಲಾವಣೆ ಆಗಿದ್ದು, ಆರ್ಥಿಕತೆ ಬೆಳವಣಿಗೆ ಕಂಡಿದೆ. ತಲಾವಾರು ಆದಾಯ ದುಪ್ಪಟ್ಟು ಆಗಿದೆ. ಮಕ್ಕಳಿಗೆ ಶಾಲೆ, ಮೌಲಸೌಕರ್ಯ ಅಭಿವೃದ್ಧಿ ಮತ್ತು ಬಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಲಭ್ಯವಾಗುತ್ತಿದೆ ಎಂದರು.

ಫೆಬ್ರವರಿ 15ರಿಂದ ದೆಹಲಿ ವಿಧಾನಸಭಾ ಅಧಿವೇಶನ ಪ್ರಾರಂಭವಾಗಿದ್ದು, ಇದನ್ನು ಮಾರ್ಚ್​ 8ರ ವರೆಗೆ ವಿಸ್ತರಣೆ ಮಾಡಲಾಗಿದೆ. ಎಎಪಿ ಸರ್ಕಾರದ ಅವಧಿಯಲ್ಲಿ ಇದು ದೀರ್ಘಾವಧಿಯ ಸೆಷನ್​ ಆಗಿದೆ. ಇದೇ ಮೊದಲ ಬಾರಿಗೆ ಅತಿಶಿ ಬಜೆಟ್​ ಮಂಡಿಸುತ್ತಿದ್ದಾರೆ. ಕಳೆದ ವರ್ಷ ಮಾಜಿ ಉಪ ಮುಖ್ಯಮಂತ್ರಿಯಾಗಿದ್ದ ಮನಿಷ್​ ಸಿಸೋಡಿಯಾ ಬಜೆಟ್​ ಮಂಡಿಸಿದ್ದರು. ಮಧ್ಯಂತರ ಬಜೆಟ್​ ಮಂಡನೆಗೂ ಮುನ್ನ ಅತಿಶಿ, ಮನಿಶ್​​ ಸಿಸೋಡಿಯಾ ತಾಯಿ ಮತ್ತು ಪತ್ನಿಯನ್ನು ಭೇಟಿ ಆಗಿ, ಆಶೀರ್ವಾದ ಪಡೆದರು. (PTI)

ಇದನ್ನೂ ಓದಿ: 8ನೇ ಸಲ ಇಡಿ ವಿಚಾರಣೆಗೆ ಗೈರಾದ ಕೇಜ್ರಿವಾಲ್​; ಮಾರ್ಚ್​ 12 ರ ಬಳಿಕ ವರ್ಚುಯಲ್​ ಹಾಜರಿಗೆ ಕೋರಿಕೆ

Last Updated : Mar 4, 2024, 1:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.