ETV Bharat / bharat

ಹಿಮಾಚಲ ರಾಜಕೀಯ ಗೊಂದಲ ಬಗೆಹರಿಸಲು ಕಣಕ್ಕಿಳಿದ ಟ್ರಬಲ್​ ಶೂಟರ್ಸ್: ಬಂಡಾಯ ಶಾಸಕರ ಜೊತೆ ಚರ್ಚೆ

author img

By PTI

Published : Feb 28, 2024, 7:40 PM IST

rebel Himachal Congress MLA  Himachal Political Crisis  DK Shivakumar meeting with MLAs  ಹಿಮಾಚಲಕ್ಕೆ ತೆರಳಿದ ಟ್ರಬಲ್​ ಶೂಟರ್ಸ್  ಶಾಸಕರ ಜೊತೆ ಡಿಕೆಶಿ ಚರ್ಚೆ
ಬಂಡಾಯ ಶಾಸಕರ ಜೊತೆ ಡಿಕೆಶಿ ಚರ್ಚೆ

ಹಿಮಾಚಲ ಪ್ರದೇಶದ ರಾಜಕೀಯ ಅಸ್ಥಿರತೆಯನ್ನು ಕಾಂಗ್ರೆಸ್ ನಾಯಕತ್ವ ಸರಿಪಡಿಸುವುದೇ?, ಬಂಡಾಯ ಶಾಸಕರನ್ನು ಶಮನಗೊಳಿಸಲು ಇದೀಗ ಹೈಕಮಾಂಡ್‌ ಡಿ.ಕೆ.ಶಿವಕುಮಾರ್ ಸೇರಿದಂತೆ ಇಬ್ಬರಿಗೆ ಹೊಸ ಟಾಸ್ಕ್‌ ನೀಡಿದ್ದು, ಕುತೂಹಲ ಕೆರಳಿಸಿದೆ.

ಶಿಮ್ಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ರಾಜಕೀಯ ಬಿಕ್ಕಟ್ಟು ಪರಿಹರಿಸಲು ಕಾಂಗ್ರೆಸ್ ಪಕ್ಷ ಇಬ್ಬರು ಟ್ರಬಲ್ ಶೂಟರ್‌ಗಳನ್ನು ಕಣಕ್ಕಿಳಿಸಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಕಾರ್ಯವೈಖರಿಯಿಂದ ನಮಗೆ ಬೇಸರವಾಗಿದೆಯೇ ಹೊರತು ಕಾಂಗ್ರೆಸ್ ವಿರುದ್ಧ ಅಲ್ಲ ಎಂದು ಕೈ ಪಕ್ಷದ 6 ಬಂಡಾಯ ಶಾಸಕರು ತಿಳಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮನವೊಲಿಸಲು ಹಿಮಾಚಲಕ್ಕೆ ಕರೆತಂದಿದೆ. ಈ ಮೂಲಕ ಬಂಡಾಯ ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಯುತ್ತಿವೆ ಎಂದು ಹಿಮಾಚಲ ಪ್ರದೇಶ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ತಜೀಂದರ್ ಪಾಲ್ ಸಿಂಗ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಮೈದಾನಕ್ಕಿಳಿದ ಟ್ರಬಲ್‌ ಶೂಟರ್‌ಗಳು: ಹಿಮಾಚಲ ಬಿಕ್ಕಟ್ಟು ಪರಿಹರಿಸಲು ಹೈಕಮಾಂಡ್ ನೇಮಿಸಿದ ಟ್ರಬಲ್ ಶೂಟರ್‌ಗಳಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ಡಿ.ಕೆ.ಶಿವಕುಮಾರ್ ಬುಧವಾರ ಶಿಮ್ಲಾ ತಲುಪಿದ್ದಾರೆ. ಇಬ್ಬರೂ ಬಂಡಾಯ ಶಾಸಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹಿಮಾಚಲದಲ್ಲಿ ಸದ್ಯ ಅಧಿವೇಶನ ನಡೆಯುತ್ತಿದ್ದು, ಸಂಜೆ ಬಂಡಾಯ ಶಾಸಕರು ಪಕ್ಷದ ವೀಕ್ಷಕರೊಂದಿಗೆ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.

ಬಂಡಾಯ ಶಾಸಕರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಹಿಮಾಚಲದ ರಾಜಕೀಯ ಬಿಕ್ಕಟ್ಟನ್ನು ನಿಯಂತ್ರಣಕ್ಕೆ ತರಬಹುದು ಎಂದು ನಾನು ಭಾವಿಸುತ್ತೇನೆ. ಆದರೆ, ಬಂಡಾಯ ಶಾಸಕರು, ಮುಖ್ಯಮಂತ್ರಿಯೊಂದಿಗೆ ಯಾವುದೇ ಸಮಸ್ಯೆಗಳಿದ್ದರೆ ಅವರು ನೇರವಾಗಿ ತಿಳಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಚೇತನ್ ಚೌಹಾಣ್ ಹೇಳಿದ್ದಾರೆ. "ಸುಖು ಕಳೆದ ಒಂದೂವರೆ ವರ್ಷದಿಂದ ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದಾರೆ. ಚುನಾವಣಾ ಭರವಸೆಗಳನ್ನು ಈಡೇರಿಸುತ್ತಿದ್ದಾರೆ. ಹೀಗಿದ್ದರೂ ಕಾಂಗ್ರೆಸ್​ನ ಕೆಲ ಶಾಸಕರು ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಈಗ ಅವರು ಸುಖು ಅವರನ್ನು ತೆಗೆದುಹಾಕಲು ಒತ್ತಾಯಿಸುತ್ತಿದ್ದಾರೆ" ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

'ಪರಿಶೀಲನಾ ವರದಿ ಬಂದ ನಂತರ ನಿರ್ಧಾರ': ಮತ್ತೊಂದೆಡೆ, ರಾಜ್ಯ ಸಚಿವ ವಿಕ್ರಮಾದಿತ್ಯ ಅವರು ಸುಖು ಅವರೊಂದಿಗೆ ಕೆಲಸ ಮಾಡಲು ಸಿದ್ಧರಿಲ್ಲ ಎಂದು ರಾಜೀನಾಮೆ ನೀಡುವ ಮೊದಲು ಹೈಕಮಾಂಡ್‌ಗೆ ತಿಳಿಸಿರುವಂತಿದೆ. ಬಂಡಾಯ ಶಾಸಕರು ಹಾಗೂ ಮುಖ್ಯಮಂತ್ರಿ ನಡುವೆ ಒಮ್ಮತ ಮೂಡಿಸಿ ಸರ್ಕಾರ ಉಳಿಸುವುದು ಪಕ್ಷದ ಮೊದಲ ಉದ್ದೇಶ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಉರುಳಿಸಲು ಬಿಜೆಪಿ ಮತ್ತೊಮ್ಮೆ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿಯನ್ನು ಪದಚ್ಯುತಿ ಮಾಡುವುದಾದರೆ ಅವರ ಒಪ್ಪಿಗೆ ಮೇರೆಗೆ ಮಾಡಬೇಕು. ಈಗ ಬಂಡಾಯ ಶಾಸಕರ ಬೇಡಿಕೆಗಳನ್ನು ಒಪ್ಪಿಕೊಂಡರೆ ಮುಂದೆ ಇನ್ನೂ ಕೆಲವು ಬೇಡಿಕೆಗಳನ್ನು ಮುಂದಿಡುತ್ತಾರೆ. ಪರಿಶೀಲನಾ ವರದಿ ಬಂದ ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಎಐಸಿಸಿ ಮುಖಂಡರು ಹೇಳಿದ್ದಾರೆ.

ಖರ್ಗೆ-ರಾಹುಲ್ ಜೊತೆ ಚರ್ಚೆ: ಹಿಮಾಚಲದ ರಾಜಕೀಯ ಪರಿಸ್ಥಿತಿ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಉನ್ನತ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಇದರ ನಡುವೆ ಹೈಕಮಾಂಡ್ ಆದೇಶದಂತೆ ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದೇನೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಶಾಸಕರು ಪಕ್ಷ ನಿಷ್ಠರಾಗಿರುತ್ತಾರೆ ಮತ್ತು ಆದೇಶವನ್ನು ಪಾಲಿಸುತ್ತಾರೆ ಎಂದು ನಾನು ನಂಬುತ್ತೇನೆ. ಬಿಜೆಪಿ ಉದ್ದೇಶಪೂರ್ವಕವಾಗಿ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಬಿಜೆಪಿ ಸಂಚು ವಿಫಲ': ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಸಂಚು ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದೆ ಎಂದು ತಿಳಿಸಿದ್ದಾರೆ.

ಸ್ಪೀಕರ್ ಮುಂದೆ ಬಂಡಾಯ ಶಾಸಕರು: ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಧಿಕ್ಕರಿಸಿದ್ದಕ್ಕೆ ಮಂಗಳವಾರ ಶೋಕಾಸ್ ನೋಟಿಸ್ ಜಾರಿಯಾದ ಹಿನ್ನೆಲೆಯಲ್ಲಿ ಆರು ಬಂಡಾಯ ಕಾಂಗ್ರೆಸ್ ಶಾಸಕರು ಸ್ಪೀಕರ್ ಮುಂದೆ ಹಾಜರಾದರು. ಈ ಸಂದರ್ಭದಲ್ಲಿ ಬಂಡಾಯ ಶಾಸಕರ ಪರವಾಗಿ ವಾದ ಮಂಡಿಸುತ್ತಿರುವ ವಕೀಲ ಸತ್ಯಪಾಲ್ ಜೈನ್ ಜೊತೆಗಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಮತದಾನಕ್ಕೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಹೇಳುತ್ತಿದೆ. ನಾವು ಉತ್ತರ ಸಲ್ಲಿಸಲು ನೈಸರ್ಗಿಕ ನ್ಯಾಯ ತತ್ವದ ಪ್ರಕಾರ ಕನಿಷ್ಠ ಒಂದು ವಾರ ಕಾಲಾವಕಾಶ ನೀಡುವಂತೆ ಸ್ಪೀಕರ್‌ಗೆ ಒತ್ತಾಯಿಸಿದ್ದೇವೆ ಎಂದು ಜೈನ್ ಹೇಳಿದರು.

ಇದನ್ನೂ ಓದಿ: ನಾನಿನ್ನೂ ರಾಜೀನಾಮೆ ನೀಡಿಲ್ಲ, 5 ವರ್ಷ ನಮ್ಮದೇ ಸರ್ಕಾರ: ಹಿಮಾಚಲ ಸಿಎಂ ಸುಖು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.