ETV Bharat / bharat

ತೆಲಂಗಾಣದಲ್ಲಿ ಗುಟ್ಕಾ, ಪಾನ್​ ಮಸಾಲಾ ಬ್ಯಾನ್: ಸರ್ಕಾರದ ಆದೇಶ - TELANGANA BANS GUTKHA

author img

By ETV Bharat Karnataka Team

Published : May 26, 2024, 6:53 PM IST

ತೆಲಂಗಾಣದಲ್ಲಿ ಒಂದು ವರ್ಷದ ಅವಧಿಗೆ ಗುಟ್ಕಾ ಮತ್ತು ಪಾನ್ ಮಸಾಲಾಗಳ ಮಾರಾಟವನ್ನು ನಿಷೇಧಿಸಲಾಗಿದೆ.

ತೆಲಂಗಾಣದಲ್ಲಿ ಗುಟ್ಕಾ, ಪಾನ್​ ಮಸಾಲಾ ಬ್ಯಾನ್: ಸರ್ಕಾರದ ಆದೇಶ
ತೆಲಂಗಾಣದಲ್ಲಿ ಗುಟ್ಕಾ, ಪಾನ್​ ಮಸಾಲಾ ಬ್ಯಾನ್: ಸರ್ಕಾರದ ಆದೇಶ (IANS image)

ಹೈದರಾಬಾದ್ : ತೆಲಂಗಾಣದಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶಗಳನ್ನು ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ ಮತ್ತು ಮಾರಾಟವನ್ನು ಮತ್ತೊಮ್ಮೆ ನಿಷೇಧಿಸಲಾಗಿದೆ. ಈ ಕುರಿತು ತೆಲಂಗಾಣ ಆಹಾರ ಸುರಕ್ಷತಾ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. ತಂಬಾಕು ಮತ್ತು ನಿಕೋಟಿನ್ ಒಳಗೊಂಡಿರುವ ಗುಟ್ಕಾ ಮತ್ತು ಪಾನ್ ಮಸಾಲಾಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.

"ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ ಸೆಕ್ಷನ್ 30 ರ ಉಪ-ವಿಭಾಗ (2) ರ ಕಲಂ (ಎ) ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ತೆಲಂಗಾಣ ರಾಜ್ಯವು ಈ ಮೂಲಕ ತಂಬಾಕು ಮತ್ತು ನಿಕೋಟಿನ್ ಅನ್ನು ಒಳಗೊಂಡಿರುವ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ನಿಷೇಧಿಸುತ್ತದೆ." ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸ್ಯಾಚೆಟ್​ಗಳು, ಪೌಚ್​ಗಳು ಅಥವಾ ಪ್ಯಾಕೇಜುಗಳಲ್ಲಿ ಪ್ಯಾಕ್ ಮಾಡಲಾದ ಗುಟ್ಕಾ ಮತ್ತು ಪಾನ್ ಮಸಾಲಾವನ್ನು 2024 ರ ಮೇ 24 ರಿಂದ ಜಾರಿಗೆ ಬರುವಂತೆ ಇಡೀ ತೆಲಂಗಾಣ ರಾಜ್ಯದಲ್ಲಿ ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ ಎಂದು ಅದು ಹೇಳಿದೆ.

2014 ರಲ್ಲಿ ತೆಲಂಗಾಣ ರಾಜ್ಯ ಸ್ಥಾಪನೆಯಾದಾಗಿನಿಂದ ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧಿಸಲಾಗಿದೆ. ಈ ನಿಷೇಧವನ್ನು ತೆಲಂಗಾಣ ಹೈಕೋರ್ಟ್ 2021 ರ ನವೆಂಬರ್​ನಲ್ಲಿ ಎತ್ತಿಹಿಡಿದಿತ್ತು. ಈ ನಿಷೇಧವನ್ನು ಗುಟ್ಕಾ ತಯಾರಕರು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಈ ನಿಷೇಧ ಅಧಿಸೂಚನೆಗೆ ಮಾರ್ಚ್ 2022 ರಲ್ಲಿ ಸುಪ್ರೀಂ ಕೋರ್ಟ್​ ತಡೆ ನೀಡಿತ್ತು.

ಸೆಪ್ಟೆಂಬರ್ 2022 ರಲ್ಲಿ, ಸುಪ್ರೀಂ ಕೋರ್ಟ್ ತಡೆಯಾಜ್ಞೆ ಜಾರಿಯಲ್ಲಿರುವವರೆಗೆ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ದಂಡನಾತ್ಮಕ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಅಧಿಕಾರಿಗಳನ್ನು ನಿರ್ಬಂಧಿಸಿತು.

ಗುಟ್ಕಾವನ್ನು ನಿಷೇಧಿಸಿ ರಾಜ್ಯ 2023 ರ ಜನವರಿಯಲ್ಲಿ ಮತ್ತೆ ಅಧಿಸೂಚನೆ ಹೊರಡಿಸಿತು. ಆದರೆ ಇದನ್ನು ಕೂಡ ಸುಪ್ರೀಂ ಕೋರ್ಟ್ ತಡೆಹಿಡಿದಿದೆ.

ಗುಟ್ಕಾ ನಿಷೇಧಿಸುವ ಸರ್ಕಾರದ ನಿರ್ಧಾರವು ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತಂಬಾಕು ಮತ್ತು ನಿಕೋಟಿನ್ ಭರಿತ ಉತ್ಪನ್ನಗಳ ಸೇವನೆಯನ್ನು ನಿಗ್ರಹಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಹಿಂದಿನ ನಿಷೇಧಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದನ್ನು ನೋಡಿದರೆ ಈ ಬಾರಿ ಹೊಸ ನಿಷೇಧ ಆದೇಶವನ್ನು ತೆಲಂಗಾಣ ಸರ್ಕಾರ ಹೇಗೆ ಜಾರಿಗೆ ತರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ಕೇರಳದಲ್ಲಿ ಯುಡಿಎಫ್​, ಎಲ್​ಡಿಎಫ್​ ಮಧ್ಯೆ 'ಡ್ರೈ ಡೇ' ವಾರ್: ಏನಿದು ವಿವಾದ? - Kerala Liquor Policy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.