ETV Bharat / bharat

ಕೇಜ್ರಿವಾಲ್ ಭೇಟಿಗೆ ಅನುಮತಿ ನೀಡುತ್ತಿಲ್ಲ ಎಂದ ಆಪ್​: ಆರೋಪ ನಿರಾಕರಿಸಿದ ಜೈಲಧಿಕಾರಿಗಳು - Aravind Kejriwal in jail

author img

By PTI

Published : Apr 29, 2024, 9:37 AM IST

ಕೇಜ್ರಿವಾಲ್ ಭೇಟಿಗೆ ಅನುಮತಿ ನೀಡುತ್ತಿಲ್ಲ ಎಂದ ಆಪ್
ಕೇಜ್ರಿವಾಲ್ ಭೇಟಿಗೆ ಅನುಮತಿ ನೀಡುತ್ತಿಲ್ಲ ಎಂದ ಆಪ್

ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಭೇಟಿ ಬಗ್ಗೆ ತಿಹಾರ್​ ಜೈಲು ಅಧಿಕಾರಿಗಳು ಮತ್ತು ಆಪ್ ಮಧ್ಯೆ ವಾಗ್ವಾದ ಉಂಟಾಗಿದೆ.

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪರವಾಗಿ ಲೋಕಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಅವರ ಪತ್ನಿ ಸುನೀತಾ ಕೇಜ್ರಿವಾಲ್​ ಅವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಆರೋಪ ಹೊರಿಸಿದ್ದಾರೆ. ಜೈಲಿನಲ್ಲಿರುವ ಪತಿಯನ್ನು ಭೇಟಿ ಮಾಡಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.

ಕೇಜ್ರಿವಾಲ್ ಭೇಟಿಗೆ ಇಂದು (ಸೋಮವಾರ) ಅವಕಾಶ ಕೋರಲಾಗಿತ್ತು. ಆದರೆ, ತಿಹಾರ್ ಜೈಲು ಅಧಿಕಾರಿಗಳು ಅವಕಾಶ ನೀಡಿಲ್ಲ ಎಂದು ಆಮ್​ ಆದ್ಮಿ ಪಕ್ಷ ಆರೋಪಿಸಿದೆ. ಪಕ್ಷದ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಳ್ಳಲಾಗಿದ್ದು, "ಮೋದಿ ಸರ್ಕಾರದ ಆದೇಶದ ಮೇರೆಗೆ ತಿಹಾರ್ ಜೈಲು ಆಡಳಿತವು ಸುನೀತಾ ಕೇಜ್ರಿವಾಲ್ ಅವರಿಗೆ ಪತಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಅಮಾನವೀಯತೆಯ ಎಲ್ಲ ಮೇರೆಗಳನ್ನು ಮೀರುತ್ತಿದೆ" ಎಂದು ಆರೋಪಿಸಿದೆ.

ಇಂದು (ಸೋಮವಾರ) ಸುನೀತಾ ಅವರು ಕೇಜ್ರಿವಾಲ್​ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ, ತಿಹಾರ್ರ್​ ಜೈಲಿನ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಇದಕ್ಕೆ ಯಾವುದೇ ಕಾರಣವನ್ನೂ ಉಲ್ಲೇಖಿಸಿಲ್ಲ. ಚುನಾಯಿತ ಮುಖ್ಯಮಂತ್ರಿಯನ್ನು ಭಯೋತ್ಪಾದಕನಂತೆ ನಡೆಸಿಕೊಳ್ಳಲಾಗುತ್ತಿದೆ. ಯಾಕೆ ಭೇಟಿಗೆ ಅನುಮತಿ ನೀಡುತ್ತಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ದೇಶದ ಜನರಿಗೆ ತಿಳಿಸಬೇಕು? ಎಂದು ಆಗ್ರಹಿಸಿದೆ.

ಜೈಲಿನ ನಿಯಮಗಳ ಪ್ರಕಾರ, ಒಬ್ಬ ಕೈದಿ ವಾರಕ್ಕೆ ಎರಡು ಬಾರಿ ತಮ್ಮವರನ್ನು ಭೇಟಿ ಮಾಡಬಹುದು. ಅವರಲ್ಲಿ ಇಬ್ಬರನ್ನು ಒಂದೇ ಬಾರಿಗೆ ಸಂಧಿಸಬಹುದು. ಆದರೆ, ಈ ನಿಯಮವನ್ನು ಕೇಜ್ರಿವಾಲ್​ ವಿಚಾರದಲ್ಲಿ ಪಾಲನೆ ಮಾಡಲಾಗುತ್ತಿಲ್ಲ ಎಂದು ಆಪ್​ ಆರೋಪಿಸಿದೆ.

ಆರೋಪ ನಿರಾಕರಿಸಿದ ಜೈಲು: ಏಪ್ರಿಲ್ 29 ರಂದು ಕೇಜ್ರಿವಾಲ್ ಭೇಟಿ ಮಾಡಲು ದೆಹಲಿ ಸಚಿವೆ ಅತಿಶಿ ಅವರಿಗೆ ಅನುಮತಿ ನೀಡಲಾಗಿದೆ. ಅವರು ಒಂದು ವಾರ ಮುಂಚೆಯೇ ಅನುಮತಿ ಕೋರಿದ್ದಾರೆ. ಸುನೀತಾ ಅವರ ಮನವಿಯನ್ನು ಪರಿಶೀಲಿಸಲಾಗುತ್ತಿದೆ. ಜೈಲಿನ ನಿಯಮಗಳ ಪಾಲನೆಗಾಗಿ ಸದ್ಯಕ್ಕೆ ಅವಕಾಶ ನೀಡಿಲ್ಲ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಸುನೀತಾ ಅವರು ಕೇಜ್ರಿವಾಲ್​ರನ್ನು ಭೇಟಿಯಾಗಲಿದ್ದಾರೆ. ಅನುಮತಿ ನಿರಾಕರಿಸುವ ಪ್ರಶ್ನೆಯೇ ಇಲ್ಲ. ನಾವು ಪ್ರೋಟೋಕಾಲ್​ಗಳನ್ನು ಅನುಸರಿಸಬೇಕು. ಅತಿಶಿ ಅವರ ಭೇಟಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಹಾರ್ ಜೈಲಿನ ಮೂಲಗಳು ತಿಳಿಸಿವೆ.

ಸೋಮವಾರ ಮತ್ತು ಮಂಗಳವಾರ ಕ್ರಮವಾಗಿ ಕೇಜ್ರಿವಾಲ್ ಅವರನ್ನು ದೆಹಲಿ ಸಚಿವೆ ಅತಿಶಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಭೇಟಿಯಾಗಲಿದ್ದಾರೆ. ಭದ್ರತಾ ವ್ಯವಸ್ಥೆ ಮತ್ತು ಪ್ರೋಟೋಕಾಲ್ ಪ್ರಕಾರ ಸಂದರ್ಶಕರಿಗೆ ಅವಕಾಶ ನೀಡಲಾಗಿದೆ.

ಅಬಕಾರಿ ನೀತಿ ಹಗರಣ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಬಂಧಿಸಲಾಗಿದೆ. ಮೇ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: ಕೇಜ್ರಿವಾಲ್ ಬಂಧನವನ್ನು ಸಮರ್ಥಿಸಿಕೊಂಡ ಇಡಿ: ಸುಪ್ರೀಂ ಕೋರ್ಟ್​ಗೆ ಅಫಿಡವಿಟ್​ ಸಲ್ಲಿಕೆ - ED defends Kejriwals arrest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.