ETV Bharat / sukhibhava

ದೇಶದಲ್ಲಿ 5 ವರ್ಷದ ಸ್ತನ ಕ್ಯಾನ್ಸರ್​​ ಉಳಿಯುವಿಕೆ ದರ ಶೇ.66: ಐಸಿಎಂಆರ್​

author img

By ETV Bharat Karnataka Team

Published : Jan 11, 2024, 12:33 PM IST

survival rate for breast cancer in india
survival rate for breast cancer in india

ಮಹಿಳೆಯಲ್ಲಿ ಸ್ತನ ಕ್ಯಾನ್ಸರ್​ ಪತ್ತೆಯಾಗಿ ಆಕೆ ತನ್ನ ಸಾವಿನ ಸಮಯದವರೆಗೆ ಉಳಿಯುವಿಕೆಯ ದರದ ಕುರಿತು ಐಸಿಎಂಆರ್ ವಿಶೇಷ​ ಅಧ್ಯಯನ ನಡೆಸಿದೆ.

ನವದೆಹಲಿ: ಭಾರತದಲ್ಲಿ ಸಾಮಾನ್ಯ ಕ್ಯಾನ್ಸರ್​ ಎಂದು ಪರಿಗಣಿಸುವ ಸ್ತನ ಕ್ಯಾನ್ಸರ್​​ನ ಐದು ವರ್ಷದ ಉಳಿಯುವಿಕೆ ದರವು ಶೇ 66.4ರಷ್ಟಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್‌) ತಿಳಿಸಿದೆ. ದೇಶದಲ್ಲಿ ಸ್ತನ ಕ್ಯಾನ್ಸರ್​ ಎಂಬುದು ಸಾಮಾನ್ಯ ಕ್ಯಾನ್ಸರ್​ ಆಗಿದ್ದು, 2022ರಲ್ಲಿ 2,16,108 ಪ್ರಕರಣಗಳು ದಾಖಲಾಗಿವೆ.

1990ರಿಂದ 2016ರವರೆಗೆ ಮಹಿಳೆಯರ ಸ್ತನ ಕ್ಯಾನ್ಸರ್​​ನ ವಯೋಪ್ರಮಾಣಿತ ಘಟನೆಗಳ ದರ ಶೇ.39.1ರಷ್ಟು ಹೆಚ್ಚಾಗಿದೆ. ಈ ದರ ಕಳೆದ 26 ವರ್ಷಗಳಿಂದ ಪ್ರತಿ ರಾಜ್ಯದಲ್ಲೂ ಕಾಣಬಹುದು ಎಂದು ಅಧ್ಯಯನ ಹೇಳಿದೆ. ಇಂಟರ್​ನ್ಯಾಷನಲ್​ ಇಂಟರ್​ಡಿಸಿಪ್ಲಿನರಿ ಜರ್ನಲ್​​ ಆಫ್​ ಅಮೆರಿಕನ್​ ಕ್ಯಾನ್ಸರ್​ ಸೊಸೈಟಿಯಲ್ಲಿ ಅಧ್ಯಯನ ವರದಿ ಪ್ರಕಟಿಸಲಾಗಿದೆ.

ಇದರಲ್ಲಿ 11 ಭೌಗೋಳಿಕ ಪ್ರದೇಶದ ಉಳಿಯುವಿಕೆ ದರವನ್ನು ತೋರಿಸಲಾಗಿದೆ. ಮಿಜೋರಾಂನಲ್ಲಿ ಸ್ತನ ಕ್ಯಾನ್ಸರ್​ ಉಳಿಯುವಿಕೆ ದರ ಶೇ 74.9ರಷ್ಟಿದ್ದರೆ, ಅಹಮದಬಾದ್​ ನಗರದಲ್ಲಿ ಶೇ 72.7, ಕೊಲ್ಲಂನಲ್ಲಿ ಶೇ 71.5 ಮತ್ತು ತಿರುವನಂತಪುರಂನಲ್ಲಿ ಶೇ.69.1ರಷ್ಟಿದೆ. ಈ ರಾಜ್ಯಗಳ ಉಳಿಯುವಿಕೆ ದರ ರಾಷ್ಟ್ರಮಟ್ಟದಲ್ಲಿನ ಸರಾಸರಿ ದರಕ್ಕಿಂತ ಜಾಸ್ತಿ ಇದೆ.

ಅರುಣಾಚಲ ಪ್ರದೇಶದ ಫಾಸಿಘಾಟ್​ನಲ್ಲಿ ಅತಿ ಕಡಿಮೆ ಶೇ 41.9ರಷ್ಟು, ಮಣಿಪುರ ಮತ್ತು ತ್ರಿಪುರಾದಲ್ಲಿ ಅತಿ ಕಡಿಮೆ ಉಳಿಯುವಿಕೆ ದರವಿದೆ. ಇದು ರಾಷ್ಟ್ರೀಯ ಉಳಿಯುವಿಕೆ ದರಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಐದು ವರ್ಷದ ಫಾಲೋ ಅಪ್​ ಅವಧಿಯಲ್ಲಿ ಫಾಸಿಘಾಟ್​ನಲ್ಲಿ ಸಾವಿನ ದರ (ಶೇ.53.6) ಹೆಚ್ಚಿದೆ. ಈ ಸಾಯುವಿಕೆ ದರ ಮಿಜೋರಾಂನಲ್ಲಿ ಕಡಿಮೆ.

ಸಮಗ್ರ ನಿಯಂತ್ರಣ ಕಾರ್ಯಕ್ರಮ: ಸ್ತನ ಕ್ಯಾನ್ಸರ್​ನ ಉಳಿಯುವಿಕೆ ದರವು ಭಾರತದಲ್ಲಿ ಅಲ್ಪಮಟ್ಟದ ಅಭಿವೃದ್ಧಿ ಕಾಣುತ್ತಿದೆ. ಆದರೂ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದಾಗ ತುಂಬಾ ಹಿಂದುಳಿದಿದೆ. ಸಮಗ್ರ ಕ್ಯಾನ್ಸರ್​ ನಿಯಂತ್ರಣದ ತಂತ್ರಾಂಶವನ್ನು ದೇಶದೆಲ್ಲೆಡೆ ವ್ಯಾಪಕವಾಗಿ ಅಳವಡಿಸಬೇಕಿದೆ ಎಂದು ಐಸಿಎಂಆರ್​ನ ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ತಂಡದ ಕೃಷ್ಣನ್​ ಸತೀಶ್​​ ಕುಮಾರ್​ ಮಾಹಿತಿ ನೀಡಿದರು.

ಸ್ತನ ಕ್ಯಾನ್ಸರ್​ ಆರಂಭಿಕ ಪತ್ತೆ ಕಾರ್ಯಕ್ರಮಗಳು, ಜಾಗೃತಿ, ವೆಚ್ಚದಾಯಕ ಸ್ಕ್ರೀನಿಂಗ್​ ಜೊತೆಗೆ ಕೈಗೆಟಕುವ ದರದಲ್ಲಿ ಬಹುಸುಧಾರಿತ ಚಿಕಿತ್ಸೆ ಸೇರಿದಂತೆ ಹಲವು ಸಂಗತಿಗಳು ಇದರ ಉಳಿಯುವಿಕೆ ದರ ಹೆಚ್ಚು ಮಾಡುವಲ್ಲಿ ಪ್ರಮುಖವಾಗಿವೆ. ಈ ಅಧ್ಯಯನದಲ್ಲಿ 2012ರಿಂದ 2015ರವರೆಗೆ 11 ಪ್ರದೇಶದಲ್ಲಿ 17,331 ಸ್ತನ ರೋಗಿಗಳನ್ನು ಪತ್ತೆ ಮಾಡಿ ಅಧ್ಯಯನ ಮಾಡಲಾಗಿದೆ. ಇವರ ಆರೋಗ್ಯದ ಕುರಿತು 2021ರ ಜೂನ್​ 30ರವರೆಗೆ ಫಾಲೋ ಅಪ್​ ಮಾಡಲಾಗಿದೆ. ರೋಗಿಯಲ್ಲಿ ರೋಗ ಪತ್ತೆಯ ದಿನದಿಂದ ಅವರ ಸಾವಿನವರೆಗೂ ಉಳಿಯುವಿಕೆ ದರವನ್ನು ಲೆಕ್ಕ ಹಾಕಲಾಗಿದೆ.

ಸ್ಥಳೀಯ ಹಂತದಲ್ಲೇ ಕ್ಯಾನ್ಸರ್​ ಪತ್ತೆಯಾದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅವರ ಉಳಿಯುವಿಕೆ ದರ ಶೇ 4.4ರಷ್ಟು ಹೆಚ್ಚಿದೆ. ಇದರ ಜೊತೆಗೆ 65 ವರ್ಷದವರಿಗೆ ಹೋಲಿಕೆ ಮಾಡಿದಾಗ 15-39 ವಯೋಮಾನದವರ ಉಳಿಯುವಿಕೆ ದರ ಹೆಚ್ಚಿದೆ.

ಅಮೆರಿಕಕ್ಕೆ ಹೋಲಿಸಿದಾಗ ಸ್ಥಳೀಯ, ಸ್ಥಳೀಯ ಪ್ರಾದೇಶಿಕ ಮತ್ತು ದೂರದ ಮೆಟಾಸ್ಪೇಸ್​​ಗಳ ಉಳಿಯುವಿಕೆ ದರ ಕಡಿಮೆ. ಭಾರತದಲ್ಲಿ ಬಹುತೇಕ ರೋಗಿಗಳಲ್ಲಿ ಸ್ತನ ಕ್ಯಾನ್ಸರ್​ ಸ್ಥಳೀಯ ಪ್ರಾದೇಶಿಕ ಹಂತದಲ್ಲಿ (ಶೇ.57) ಪತ್ತೆಯಾಗುತ್ತದೆ. ಆದರೆ, ಅಮೆರಿಕದಲ್ಲಿ ಈ ರೋಗವು ಸ್ಥಳೀಯ ಹಂತದಲ್ಲಿ ಶೇ.63ರಷ್ಟು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಮಗ್ರ ಕ್ಯಾನ್ಸರ್​ ನಿಯಂತ್ರಣ ತಂತ್ರಾಂಶವನ್ನು ದೇಶದೆಲ್ಲೆಡೆ ವ್ಯಾಪಕವಾಗಿ ಜಾರಿಗೆ ತರುವುದು ಅವಶ್ಯಕ ಎಂದು ಅಧ್ಯಯನ ತಂಡ ಸಲಹೆ ನೀಡಿದೆ. (ಐಎಎನ್​ಎಸ್​)

ಇದನ್ನೂ ಓದಿ: ಸ್ತನ ಕ್ಯಾನ್ಸರ್​ನ ಅಂತಿಮ ಹಂತದಲ್ಲಿ ಶೇ 60ರಷ್ಟು ಮಹಿಳೆಯರು; ಬೇಕಿದೆ ಜಾಗೃತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.