ETV Bharat / state

ಆಸ್ತಿ ವಿವಾದ.. ಅತ್ತಿಗೆ, ಮಕ್ಕಳೆದುರೇ ಒಡಹುಟ್ಟಿದ ಅಣ್ಣನನ್ನು ಕೊಚ್ಚಿ ಕೊಂದ ತಮ್ಮಂದಿರು

author img

By

Published : Jul 2, 2022, 8:59 PM IST

ಆಸ್ತಿ ವಿವಾದ- ದಾಯಾದಿ ಕಲಹದಲ್ಲಿ ಒಡಹುಟ್ಟಿದ ಅಣ್ಣನನ್ನೇ ಕೊಂದ ತಮ್ಮಂದಿರು- ಯಾದಗಿರಿ ಜಿಲ್ಲೆಯಲ್ಲಿ ಪ್ರಕರಣ.

property-dispute-older-brother-killed-by-younger-brothers
ಆಸ್ತಿ ವಿವಾದ : ಸ್ವಂತ ಅಣ್ಣನನ್ನು ಕೊಲೆಗೈದ ಸಹೋದರರು

ಯಾದಗಿರಿ : ಆಸ್ತಿ ವಿವಾದ ಹಾಗೂ ಕೌಟುಂಬಿಕ ಕಲಹದಿಂದಾಗಿ ಸಹೋದರಿಬ್ಬರು ಸ್ವಂತ ಅಣ್ಣನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ನಗರದ ರಂಗಂಪೇಟೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಪಂಪಾಪತಿ ಪತ್ತಾರ್ (44) ತಮ್ಮಂದಿರಿಂದಲೇ ಕೊಲೆಗೀಡಾದ ವ್ಯಕ್ತಿ.

ಆಸ್ತಿ ವಿವಾದ : ಸ್ವಂತ ಅಣ್ಣನನ್ನು ಕೊಲೆಗೈದ ಸಹೋದರರು

ಪ್ರಕರಣದ ವಿವರ : ಮೃತ ಪಂಪಾಪತಿ ಮೂಲತಃ ತಾಲೂಕಿನ ಪೇಠಾ ಅಮ್ಮಾಪುರದವರಾಗಿದ್ದು, ಸುರಪುರಕ್ಕೆ ಬಂದು ಸುಮಾರು 15 ವರ್ಷಗಳಿಂದ ಇಲ್ಲೇ ನೆಲೆಸಿದ್ದಾರೆ. ಅಕ್ಕಸಾಲಿಗ (ಪತ್ತಾರಿಕೆ) ವೃತ್ತಿಯನ್ನು ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದರು. ಮೃತರ ತಂದೆ ಮಾನಪ್ಪ ಪತ್ತಾರ್ ಅವರಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರು. ಮೃತ ಪಂಪಾಪತಿ ಪತ್ತಾರ್ ದ್ವಿತೀಯ ಪುತ್ರನಾಗಿದ್ದರು. ಈ ಅಣ್ಣ ತಮ್ಮಂದಿರು ಇಬ್ಬರು ಸುರಪುರದಲ್ಲೇ ವಾಸವಾಗಿದ್ದರು. ಸುಮಾರು 15 ವರ್ಷಗಳಿಂದಲೂ ಸಹೋದರರ ಮಧ್ಯೆ ಆಸ್ತಿ ಹಂಚಿಕೆ ವಿಷಯಕ್ಕಾಗಿ ಕೌಟುಂಬಿಕ ಕಲಹ ನಡೆಯುತ್ತಿತ್ತು.

ಆಸ್ತಿಯನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ, ಪಂಪಾಪತಿಯು ಹೆಚ್ಚಿನ ಆಸ್ತಿಯನ್ನು ಇಟ್ಟುಕೊಂಡಿದ್ದಾರೆ ಎಂಬುದು ಸಹೋದರರ ಆರೋಪವಾಗಿತ್ತು. ಇದರಿಂದಲೇ ಆಗಾಗ್ಗೆ ಸಹೋದರರ ಮಧ್ಯೆ ಜಗಳಗಳು ನಡೆಯುತ್ತಿದ್ದವು. ಪಂಪಾಪತಿ ಹೆಚ್ಚಿನ ಆಸ್ತಿ ಇಟ್ಟುಕೊಂಡಿದ್ದರಿಂದ ನಗರದಲ್ಲಿ ಹೆಚ್ಚಿನ ಲೇವಾದೇವಿ ವ್ಯವಹಾರ ಹೊಂದಿದ್ದರು. ಇದು ಸಹೋದರರ ಕೆಂಗಣ್ಣಿಗೆ ಗುರಿಯಾಗಿತ್ತು. ನಮಗೆ ಆಸ್ತಿ ಕಡಿಮೆ ನೀಡಿ, ಹೆಚ್ಚಿನ ಆಸ್ತಿ ಪಡೆದು ವ್ಯವಹಾರ ನಡೆಸುತ್ತಿದ್ದಾರೆ ಎಂದು ಇತರ ಸಹೋದರರು ಕೋಪಗೊಂಡಿದ್ದರು. ಅಲ್ಲದೇ ದಿನದಿಂದ ದಿನಕ್ಕೆ ಪಂಪಾಪತಿ ಏಳಿಗೆಯೂ ಹೆಚ್ಚಿತ್ತು. ಇದನ್ನು ಸಹಿಸದ ಸಹೋದರರು ಸಂಚು ಮಾಡಿ ಬೈಕಿನಲ್ಲಿ ಬಂದು ಅಣ್ಣ ಪಂಪಾಪತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾರೆ. ಆರೋಪಿ ಸಹೋದರರು ಅಣ್ಣನ ಪತ್ನಿ ಮತ್ತು ಮಕ್ಕಳೆದುರೇ ಅಣ್ಣನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ಪಂಪಾವತಿಗೆ ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪತ್ತೆಗೆ ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಹೈದರಾಬಾದ್ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಆರೋಪಿಗಳ ಭಾವಚಿತ್ರಗಳನ್ನು ಕಳುಹಿಸಿಕೊಡಲಾಗಿದೆ. ಆರೋಪಿಗಳ ಸೆರೆಗೆ ಬಲೆ ಬೀಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಡಿವೈಎಸ್ಪಿ ಮಂಜುನಾಥ್ ತಿಳಿಸಿದ್ದಾರೆ.

ಓದಿ :ಉದಯಪುರ ಟೈಲರ್ ಹತ್ಯೆ ಪ್ರಕರಣ.. ಕೋರ್ಟ್​ಗೆ ಬಂದ ಆರೋಪಿಗಳ ಮೇಲೆ ಹಲ್ಲೆ, ಬಟ್ಟೆ ಹರಿದು ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.