ETV Bharat / state

ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ : ರಾಹುಲ್​ ಗಾಂಧಿ ವಾಗ್ದಾಳಿ

author img

By

Published : Apr 23, 2023, 8:30 PM IST

congress-leader-rahul-gandhi-slams-state-bjp-govt
ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ : ರಾಹುಲ್​ ಗಾಂಧಿ ವಾಗ್ದಾಳಿ

ರಾಜ್ಯ ಬಿಜೆಪಿ ಸರ್ಕಾರವು 40% ಕಮಿಷನ್​ ಪಡೆಯುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ : ರಾಹುಲ್​ ಗಾಂಧಿ ವಾಗ್ದಾಳಿ

ವಿಜಯಪುರ : ರಾಜ್ಯ ಬಿಜೆಪಿ ಸರ್ಕಾರವು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಈ ಸರ್ಕಾರ 40% ಕಮಿಷನ್ ಪಡೆಯುತ್ತಿದೆ. ಯಾವುದೇ ಕೆಲಸ ಮಾಡಿದರೂ 40% ಕಮಿಷನ್​​ ಪಾವತಿ ಮಾಡಬೇಕು. ಪೊಲೀಸ್ ಸಬ್ ಇನ್ಸಪೆಕ್ಟರ್ ಆಗಬೇಕಾದರೆ 80 ಲಕ್ಷ ಲಂಚ ಪಡೆಯುತ್ತಾರೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದರು.

ನಗರದಲ್ಲಿ ರೋಡ್​ ಶೋ ನಡೆಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಸ್ಕಾರ ಎಂದು ಭಾಷಣ ಪ್ರಾರಂಭಿಸಿದರು. ಇಂದು ಬಸವಣ್ಣನ ಜಯಂತಿ ಆಚರಿಸುತ್ತಿದ್ದೇವೆ. ಬಸವಣ್ಣನ ಐಕ್ಯ ಸ್ಥಳಕ್ಕೆ ಭೇಟಿ ನೀಡಿದ್ದೆ. ಬಸವ ಜನ್ಮಭೂಮಿಯಲ್ಲಿ ಸ್ವಾಗತ ಕೋರಿದ್ದಕ್ಕೆ ಧನ್ಯವಾದ ಎಂದು ತಿಳಿಸಿದರು.

ಕೆಲ ದಿನಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ನಾವೆಲ್ಲರೂ ಬಸವಣ್ಣನ ಪ್ರಜಾಪ್ರಭುತ್ವವನ್ನು ನೆನಪು ಮಾಡಿಕೊಳ್ಳಬೇಕು. ಲೋಕಸಭಾ, ರಾಜ್ಯಸಭಾ, ಲೋಕತಂತ್ರದ ವ್ಯವಸ್ಥೆಯನ್ನು ಬಸವಣ್ಣನವರ ಆಶಯದಂತೆ ಹುಟ್ಟುಹಾಕಲಾಗಿದೆ. ಅವರ ಆಶಯ ಸಮಾಜದಲ್ಲಿ ಸಮಾನತೆ ಇರಬೇಕು ಎಂಬುದಾಗಿತ್ತು. ಶ್ರೀಮಂತರು, ಬಡವರು ಯಾವುದೇ ಧರ್ಮದ ಜನರು ಸಮಾನತೆಯಿಂದ ಬದುಕಬೇಕು ಎಂಬುದು ಬಸವಣ್ಣನ ಆಸೆಯಾಗಿತ್ತು ಎಂದು ಹೇಳಿದರು.

ಬಿಜೆಪಿ, ಆರ್​​ಎಸ್​​ಎಸ್​ನವರು ದೇಶದ ಪರಿಸ್ಥಿತಿಯನ್ನು ಅಯೋಮಯ ಮಾಡಿದ್ದಾರೆ. ಬಿಜೆಪಿ, ಪ್ರಧಾನಿಗಳು ಬಸವಣ್ಣನವರ ಬಗ್ಗೆ ಮಾತನಾಡುತ್ತಾರೆ. ಬಳಿಕ ಅವರ ಆಶಯದ ವಿರುದ್ಧ ನಡೆದುಕೊಳ್ಳುತ್ತಾರೆ. ದೊಡ್ಡ ದೊಡ್ಡವರಿಗೆ ಸಹಾಯ ಮಾಡಿ ಎಂದು ಬಸವಣ್ಣನವರು ಹೇಳಿಲ್ಲ. ಅದಾನಿಗೆ ಬೆಂಬಲ‌ ಕೊಡಿ ಎಂದು ಬಸವಣ್ಣನವರು ಎಲ್ಲಿಯೂ ಹೇಳಿಲ್ಲ ಎಂದು ರಾಹುಲ್​ ಗಾಂಧಿ ಟೀಕಿಸಿದರು.

ನಾನು ಪ್ರಧಾನಿ ಅವರಲ್ಲಿ ಅದಾನಿಗೆ ನಿಮಗೆ ಏನು ಸಂಬಂಧ ಎಂದು ಕೇಳಿದೆ. ಎಲ್ಲಾ ಏರ್​​ಪೋರ್ಟ್​ ನ್ನು ಅದಾನಿಗೆ ಕೊಡುತ್ತಿದ್ದೀರಿ. ಎಲ್​ಐಸಿಯ ಹಣವನ್ನು ಅದಾನಿಗೆ ಕೊಡುತ್ತಿದ್ದೀರಿ. ಯಾಕೆ ಈ ರೀತಿ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಇದಕ್ಕೆ ಪ್ರತಿಯಾಗಿ, ಮೊದಲು ಪಾರ್ಲಿಮೆಂಟ್ ನಲ್ಲಿ ನಾನು ಮಾತನಾಡದಂತೆ ಮಾಡಿದರು. ನನ್ನ ಭಾಷಣವನ್ನು ಪಾರ್ಲಿಮೆಂಟ್ ನಿಂದ ತೆಗೆದು ಹಾಕಿದರು. ಕೊನೆಗೆ ನನ್ನನ್ನೇ ಪಾರ್ಲಿಮೆಂಟ್ ನಿಂದ ಹೊರಹಾಕಿದರು. ಸತ್ಯವನ್ನು ಕೇವಲ ಲೋಕಸಭೆಯಲ್ಲಿ ಮಾತ್ರವಲ್ಲ, ಎಲ್ಲಿಯೂ ಮಾತನಾಡಬಹುದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಉಚಿತ 200 ಯೂನಿಟ್ ವಿದ್ಯುತ್, ಯುವ ನಿಧಿ, ಅನ್ನಭಾಗ್ಯ ಯೋಜನೆ ನೀಡುತ್ತೇವೆ ಎಂದು ಕಾಂಗ್ರೆಸ್​ ನಾಯಕ ಭರವಸೆ ನೀಡಿದರು.

ಗುತ್ತಿಗೆದಾರರು ಪ್ರಧಾನಿಯವರಿಗೆ ಸ್ವತಃ 40% ಕಮಿಷನ್ ಕುರಿತು ಪತ್ರ ಬರೆದರು. ಇದಕ್ಕೆ ಪ್ರಧಾನಿ ಮೋದಿ ಅವರು ಇದುವರೆಗೂ ಉತ್ತರಿಸಿಲ್ಲ, ಉತ್ತರಿಸುವುದೂ ಇಲ್ಲ. ಬದಲಾಗಿ ವೇದಿಕೆಗಳ ಮೇಲೆ ಭ್ರಷ್ಟಾಚಾರದ ವಿರೋಧಿ ಎಂದು ಹೇಳುತ್ತಾರೆ. ನಿಮ್ಮ ಎಡ ಬಲದ ಜನರೇ 40% ಕಮಿಷನ್ ತಿನ್ನುತ್ತಿದ್ದಾರೆ. ಇದೇ ಕಮಿಷನ್ ಹಣದಿಂದ ಎಂಎಲ್ಎಗಳ ಕುದುರೆ ವ್ಯಾಪಾರ ಮಾಡಿ ಸರ್ಕಾರ ರಚಿಸುತ್ತಾರೆ. ಪ್ರಧಾನಿ ಅವರೇ ಶಾಸಕರನ್ನು ಖರೀದಿಸಲು ಹಣ ಎಲ್ಲಿಂದ ಬರುತ್ತದೆ ಎಂದು ರಾಹುಲ್​ ಪ್ರಶ್ನಿಸಿದರು.

ಈ ಸಲ ಕಾಂಗ್ರೆಸ್​​ 150 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸುತ್ತದೆ. 40% ಕಮಿಷನ್ ತೆಗೆದುಕೊಳ್ಳುವ ಸರ್ಕಾರಕ್ಕೆ 40 ಸೀಟ್​ಗಳು ಬರುವುದಿಲ್ಲ. ಅವರು ನನ್ನ ಮೇಲೆ ನೂರಾರು ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ಸಂಸತ್​ ಭವನದಲ್ಲಿನ ಮನೆ ಕಸಿದುಕೊಂಡರು. ಆದರೆ ಸಾವಿರಾರು ಅಭಿಮಾನಿಗಳು ನಮ್ಮ‌ ಮನೆಗೆ ಬನ್ನಿ ಎಂದು ಪತ್ರ ಬರೆದರು ಎಂದು ರಾಹುಲ್​ ಗಾಂಧಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ : ಲಿಂಗಾಯತರೆಲ್ಲ ಭ್ರಷ್ಟರು ಎಂದು ನಾನು ಹೇಳಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.