ETV Bharat / state

ಗೊಂದಲದ ಗೂಡಾದ ಹೆದ್ದಾರಿ ಸಂಚಾರ.. ದಾರಿ ಹೆಣವಾಗುತ್ತಿರುವ ಅಮಾಯಕ ಜನರು!

author img

By

Published : Jan 3, 2023, 8:55 PM IST

Unscientific work of National Highway 66
ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿ.. ಹೆಚ್ಚುತ್ತಿರುವ ಅಪಘಾತಗಳು

ವರ್ಷಗಳೇ ಕಳೆದರು ಮುಗಿಯದ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ- ಖಾಸಗಿ ಕಂಪನಿಯ ಕಾಮಗಾರಿ ವಿರುದ್ಧ ಜನರ ಆಕ್ರೋಶ -ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ವಾಹನ ಸವಾರರ ಆಗ್ರಹ

ಏಳೆಂಟು ವರ್ಷ ಕಳೆದರು ಮುಗಿಯದ ರಸ್ತೆ ಕಾಮಗಾರಿ

ಕಾರವಾರ(ಉತ್ತರ ಕನ್ನಡ): ಕಾರವಾರ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಹಿನ್ನೆಲೆಯಲ್ಲಿ ಸುರಂಗ ಮತ್ತು ಫ್ಲೈ ಓವರ್ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಕಾಮಗಾರಿ ಗುತ್ತಿಗೆ ಪಡೆದ ಖಾಸಗಿ ಕಂಪನಿಯೊಂದರ ಈ ಕಾಮಗಾರಿಯಿಂದಾಗಿ ಜನರ ಓಡಾಟಕ್ಕೆ ಸಮಸ್ಯೆಯಾಗಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸುತ್ತಿದ್ದಾರೆ.

ಏಳೆಂಟು ವರ್ಷ ಕಳೆದರು ಮುಗಿಯದ ರಸ್ತೆ ಕಾಮಗಾರಿ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಕಳೆದ ಏಳೆಂಟು ವರ್ಷದಿಂದ ನಡೆಯುತ್ತಲೇ ಇದೆ. ಇನ್ನೂ ಕಾಮಗಾರಿಯ ಭಾಗವಾಗಿ ಜಿಲ್ಲಾಕೇಂದ್ರ ಕಾರವಾರದಲ್ಲಿ ಸುರಂಗ ಹಾಗೂ ಫ್ಲೈ ಓವರ್ ನಿರ್ಮಾಣ ಕಾರ್ಯವನ್ನು ಮಾಡಲಾಗುತ್ತಿದೆ. ಕಾಮಗಾರಿ ಪ್ರಾರಂಭವಾಗಿ ಏಳೆಂಟು ವರ್ಷಗಳೇ ಕಳೆದರು ಕೆಲಸ ಮಾತ್ರ ಪೂರ್ಣಗೊಂಡಿಲ್ಲ.

ಹೆಚ್ಚುತ್ತಿರುವ ಅಪಘಾತಗಳು: ಇದರಿಂದ ವಾಹನ ಸವಾರರು ಅರೆ ಬರೆ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು, ಹೆದ್ದಾರಿ ಅಗಲೀಕರಣಕ್ಕಾಗಿ ನಿರ್ಮಾಣ ಮಾಡಿರುವ ಸುರಂಗಮಾರ್ಗ ಕಾಮಗಾರಿ ಮುಗಿದರೂ ವಾಹನ ಓಡಾಟಕ್ಕೆ ಮಾತ್ರ ಸರಿಯಾಗಿ ಅವಕಾಶ ಮಾಡಿಕೊಟ್ಟಿಲ್ಲ. ಎಡ ಬದಿಯ ಸುರಂಗ ಮಾರ್ಗಕ್ಕೆ ಬಂಡೆಗಳನ್ನು ಅಡ್ಡಹಾಕಿ ದ್ವಿಚಕ್ರ ವಾಹನಕ್ಕೆ ಓಡಾಡಲು ಮಾತ್ರ ಅವಕಾಶ ಮಾಡಿಕೊಟ್ಟರೇ, ಇನ್ನೊಂದೆಡೆ ಇತರೇ ವಾಹನ ಸವಾರರು ಸುರಂಗ ಮಾರ್ಗದಿಂದ ತೆರಳಬೇಕಾ ಅಥವಾ ಹಳೆಯ ರಸ್ತೆಯಲ್ಲಿಯೇ ತೆರಳಬೇಕಾ ಎನ್ನುವ ಗೊಂದಲ ಉಂಟಾಗಿದೆ. ಪ್ರತಿನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಿವೆ.

ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರು ಟೋಲ್ ವಸೂಲಿ: ಈ ಕುರಿತು ಪ್ರತಿಕ್ರಿಯಿಸಿರುವ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಹೆದ್ದಾರಿ ಕಾಮಗಾರಿ 2012ರಲ್ಲಿಯೇ ಪ್ರಾರಂಭವಾದರೂ ಇನ್ನೂ ಕೂಡ ಮುಗಿದಿಲ್ಲ. ಆದರೆ ಜನರಿಂದ ಟೋಲ್ ವಸೂಲಿ ಮಾಡಿ ಸುಲಿಗೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಹೆದ್ದಾರಿಗಳನ್ನು ಅಪಘಾತ ನಿಯಂತ್ರಿಸಲು ಮಾಡಲಾಗುತ್ತದೆ. ಆದರೆ ವರ್ಷದಲ್ಲಿ 10ಕಿಮೀ ವ್ಯಾಪ್ತಿಯ ಹೆದ್ದಾರಿಯಲ್ಲಿಯೇ ನೂರಾರು ಅಪಘಾತಗಳು ಸಂಭವಿಸಿವೆ ಎಂದು ಆರೋಪಿಸಿದರು.

ನಗರದಲ್ಲಿ ಸುರಂಗ ಕಾಮಗಾರಿ ಪ್ರಾರಂಭವಾಗಿಯೂ ಆರೇಳು ವರ್ಷ ಆಗಿದೆ. ಆದರೂ ಇನ್ನೂ ಪೂರ್ಣಗೊಂಡಿಲ್ಲ. ಟನಲ್ ಬಳಿ ಒಂದು ಸೇತುವೆ ಮಾಡಿ ಹಾಗೆ ಅರ್ಧಕ್ಕೆ ಬಿಡಲಾಗಿದೆ. ಇದೀಗ ಮಾರ್ಗ ಬೇರೆಡೆ ಬಂದಿದೆ ಎಂದು ಮತ್ತೊಂದು ಕಡೆ ಹೆದ್ದಾರಿ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಿ ಕಾಮಗಾರಿ ತ್ವರಿತವಾಗಿ ಮುಗಿಸಲು ಕ್ರಮ ಕೈಗೊಳ್ಳುವ ಮೂಲಕ ಅಮಾಯಕರ ಜೀವ ಹೋಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ದ್ವಿಚಕ್ರವಾಹನ ಓಡಾಟಕ್ಕೆ ಮಾತ್ರ ಅವಕಾಶ: ಇನ್ನು, ಕಾರವಾರ ತಾಲೂಕಿನ ಬಿಣಗಾ ಗ್ರಾಮದಿಂದ ಕಾರವಾರ ನಗರದವರೆಗೆ ಎರಡು ಸುರಂಗ ಮಾರ್ಗ ಮಾಡಲಾಗಿದೆ. ಒಂದು ಸುರಂಗ ಮಾರ್ಗದ ರಸ್ತೆ ಸಂಪೂರ್ಣ ಮುಗಿದಿದ್ದರು ಕೇವಲ ದ್ವಿಚಕ್ರವಾಹನ ಓಡಾಟಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ ಕಾರು, ಇನ್ನಿತರ ವಾಹನಗಳು ನಾಲ್ಕೈದು ಕಿಲೋ ಮೀಟರ್ ಸುತ್ತುವರೆದು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಎರಡೆರಡು ರಸ್ತೆಗಳು ಆಗಿರುವುದರಿಂದ ಯಾವ ರಸ್ತೆಗೆ ಹೋಗಬೇಕು ಎನ್ನುವ ಗೊಂದಲದಲ್ಲಿ ವಾಹನ ಸವಾರರು ಸಿಲುಕಿದ್ದು ಕೆಲವು ಕಡೆ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಾರವಾರದಿಂದ ಬಿಣಗಾ ಸಂಪರ್ಕಕ್ಕೆ ಸುರಂಗ ಮಾರ್ಗದ ಮೂಲಕ ಹಾಗೂ ಬಿಣಗಾ ಭಾಗದಿಂದ ಕಾರವಾರ ಸಂಪರ್ಕಿಸುವವರಿಗೆ ಹಳೆ ಹೆದ್ದಾರಿ ಮೂಲಕ ಏಕ ಮುಖ ಸಂಚಾರ ಮಾಡಿ ಅಪಘಾತಗಳಾಗುವುದನ್ನು ತಪ್ಪಿಸಬೇಕು ಎಂದು ಮಾಜಿ ಶಾಸಕ ಸತೀಶ್ ಸೈಲ್ ಆಗ್ರಹಿಸಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಇದೇ ಗೊಂದಲದಿಂದ ಅಪಘಾತವೊಂದು ಸಂಭವಿಸಿ ಬಾಲಕಿಯೋರ್ವಳು ಮೃತಪಟ್ಟಿದ್ದಳು. ಇದು ಕೇವಲ ಕಾರವಾರ ಮಾತ್ರವಲ್ಲ, ರಾಷ್ಟ್ರೀಯ ಹೆದ್ದಾರಿ66ರ ಅಗಲೀಕರಣ ಮಾಡಿರುವ ಜಿಲ್ಲೆಯ ಇತರೇ ಭಾಗದಲ್ಲೂ ಇಂತಹ ಸಮಸ್ಯೆಗಳಿದ್ದು, ಒಂದಿಲ್ಲೊಂದು ಅಪಘಾತಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಕೂಡಲೇ ಅಪಘಾತಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ:ಗೋವಾದಿಂದ ಹೊಸ ವರ್ಷಾಚರಣೆ ಮುಗಿಸಿ ಬರುತ್ತಿದ್ದ ಕಾರು ಅಪಘಾತ: ನಾಲ್ವರು ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.