ETV Bharat / state

ಟವರ್ ನಿರ್ಮಾಣಕ್ಕೆ ಜಾಗ ಕೊಟ್ಟು ವಾಪಸ್ ಪಡೆದ ಜಿಲ್ಲಾಡಳಿತ: ಸಮಸ್ಯೆ ಬಗೆಹರಿಸಿ 'BSNL'ಸಂಪರ್ಕಕ್ಕೆ ಆಗ್ರಹ

author img

By ETV Bharat Karnataka Team

Published : Sep 2, 2023, 2:31 PM IST

Uttara Kannada people demand for solve the network issues
qವರ್​

Mobile Network: ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ 232 ಟವರ್ ಮಂಜೂರಿಯಾಗಿತ್ತು. ಆದರೆ, ಅರಣ್ಯ ಕಾಯ್ದೆ ಅಡ್ಡಿಯಾದ್ದರಿಂದ ಮೊದಲ ಹಂತದಲ್ಲಿ ಶಿರಸಿಯ 06 ಹಾಗೂ ಜಿಲ್ಲೆಯ ಒಟ್ಟು 72 ಸ್ಥಳಗಳಲ್ಲಿ ನೀಡಿದ್ದ ಜಾಗದ ಮಂಜೂರಾತಿ ಆದೇಶವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಹಿಂಪಡೆದುಕೊಂಡಿದ್ದಾರೆ.

ನೆಟ್‌ವರ್ಕ್‌ ಸಮಸ್ಯೆ..ಜಿಲ್ಲಾಧಿಕಾರಿ ಹಾಗೂ ಸ್ಥಳೀಯರ ಪ್ರತಿಕ್ರಿಯೆ..

ಕಾರವಾರ: ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಒಬ್ಬರನ್ನೊಬ್ಬರು ಸಂಪರ್ಕ ಮಾಡುವುದೇ ದೊಡ್ಡ ಸವಾಲು. ಅದರಲ್ಲಿಯೂ ಸರ್ಕಾರಿ ಯೋಜನೆಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ನೆಟ್‌ವರ್ಕ್‌ ಪ್ರಮುಖ ಸಾಧನವಾಗಿದ್ದರೂ ಸಂಪರ್ಕ ಸಾಧ್ಯವಾಗದೆ ಜನ ಪರದಾಡುವಂತಾಗಿದೆ. ಆದರೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಸರ್ಕಾರ ದೂರಸಂಪರ್ಕ ಇಲಾಖೆಯಿಂದ 232 ಹೊಸ ಮೊಬೈಲ್‌ ಟವರ್‌ಗಳನ್ನು ಮಂಜೂರು ಮಾಡಲಾಗಿತ್ತಾದರೂ ಇದೀಗ ಈ ಯೋಜನೆಗೂ ವಿಘ್ನ ಎದುರಾಗಿದೆ.

ಹೌದು, ಬಹುಭಾಗ ಅರಣ್ಯ ಪ್ರದೇಶಗಳಿಂದಲೇ ಕೂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ 232 ಟವರ್ ಮಂಜೂರಿಯಾಗಿತ್ತು. ಈ ಪೈಕಿ 18 ಟವರ್‌ಗಳನ್ನು 2G ಯಿಂದ 3G ಮೇಲ್ದರ್ಜೆಗೆ ಏರಿಸಲಾಗಿದೆ. ಈವರೆಗೂ ಮೊಬೈಲ್‌ ಸಿಗ್ನಲ್‌ ಸಿಗದ 196 ಹಳ್ಳಿಗಳನ್ನು ಗುರುತಿಸಿ ಟವರ್‌ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇವುಗಳಲ್ಲಿ ಕಾರವಾರ -8, ಅಂಕೋಲಾ-12,‌ ಜೋಯಿಡಾ- 42, ಕುಮಟಾ-19, ಹೊನ್ನಾವರ-8, ಭಟ್ಕಳ-13, ಸಿದ್ದಾಪುರ-17, ಶಿರಸಿ-24, ಮುಂಡಗೋಡು- 10 ಹೊಸ ಟವರ್​ ನಿರ್ಮಾಣಕ್ಕೆ ಮಂಜೂರು ದೊರಕಿದ ನಂತರ ಜಿಲ್ಲಾಡಳಿತ ಉಚಿತವಾಗಿ ಅರಣ್ಯ ಭೂಮಿಯನ್ನು ಆಯಾ ತಾಲೂಕು ವ್ಯಾಪ್ತಿಯಲ್ಲಿ ಟವರ್ ನಿರ್ಮಾಣಕ್ಕೆ 30 ವರ್ಷದ ಲೀಸ್​​ನೊಂದಿಗೆ ನೀಡಿತ್ತು.

ಮಂಜೂರಾತಿ ಆದೇಶ ಹಿಂಪಡೆದ ಜಿಲ್ಲಾಧಿಕಾರಿ: ಆದರೆ ಇದೀಗ ಅರಣ್ಯ ಕಾಯ್ದೆ ಅಡ್ಡಿಯಾದ್ದರಿಂದ ಮೊದಲ ಹಂತದಲ್ಲಿ ಶಿರಸಿಯ 06 ಹಾಗೂ ಜಿಲ್ಲೆಯ ಒಟ್ಟು 72 ಸ್ಥಳಗಳಲ್ಲಿ ನೀಡಿದ್ದ ಜಾಗದ ಮಂಜೂರಾತಿ ಆದೇಶವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಹಿಂಪಡೆದುಕೊಂಡಿದ್ದಾರೆ. ಇದರಿಂದ ಹಲವು ವರ್ಷದಿಂದ ನೆಟ್‌ವರ್ಕ್‌ ಸಮಸ್ಯೆ ಎದುರಿಸುತಿದ್ದ ಗ್ರಾಮಗಳಿಗೆ ಟವರ್ ನಿರ್ಮಾಣವಾಗುವ ಮುಂಚೆಯೇ ವಿಘ್ನ ಎದುರಾದಂತಾಗಿದೆ.

ಹೀಗೆ ವಾಪಸ್ ಪಡೆಸ ಜಾಗಗಳ ಪೈಕಿ ಶಿರಸಿಯ ಹುಲೇಕಲ್ ಭಾಗದ-3, ಸಂಪಖಂಡ ಭಾಗದ-2, ಬನವಾಸಿ ಭಾಗದ-1 ಟವರ್​​ಗಳನ್ನು ಜಿಲ್ಲಾಧಿಕಾರಿ ಆದೇಶದಿಂದ ನಿರ್ಮಾಣ ಹಂತದಲ್ಲೇ ಕೈ ಬಿಡಲಾಗಿದೆ. ಇದರಿಂದ ಬಿಎಸ್​​​ಎನ್​ಎಲ್​ಗೂ ದೊಡ್ಡ ನಷ್ಟ ಎದುರಾಗುವ ಜತೆ ಮೊಬೈಲ್ ನೆಟ್‌ವರ್ಕ್‌ ಆಗುವ ಆಸೆ ಹೊಂದಿದ್ದ ಜಿಲ್ಲೆಯ ಜನರು ಇದೀಗ ಬೇಸರ ವ್ಯಕ್ತಪಡಿಸುವಂತಾಗಿದೆ.

ಜಿಲ್ಲಾಧಿಕಾರಿ ಹೇಳುವುದೇನು?: "ಜಿಲ್ಲಾಡಳಿತದ ವತಿಯಿಂದ ಮುಖ್ಯವಾಗಿ ಶಿರಸಿ ಸೇರಿದಂತೆ ಜಿಲ್ಲೆಯ 12 ಭಾಗಗಳಲ್ಲಿ ಟವರ್ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲಾಗಿತ್ತು. ಅಲ್ಲಿ ಬಿಎಸ್​ಎನ್​ಎಲ್​ ಟವರ್​ಗಾಗಿ ಸರ್ಕಾರಿ ಬೆಟ್ಟವನ್ನು ಗುರುತು ಮಾಡಿ ಲಭ್ಯತೆ ಇರುವ ಸ್ಥಳದಲ್ಲಿ ಪ್ರತಿ ಟವರ್​ಗೆ 2 ಗುಂಟೆ ಜಾಗ ನಿಗಧಿ ಪಡಿಸಿ ಮಂಜೂರಾತಿ ಮಾಡಲಾಗಿತ್ತು. ಆದರೆ ಅರಣ್ಯ ಇಲಾಖೆಯವರು ಈಗ ಸುಪ್ರೀಂ ಕೋರ್ಟ್​ ಮಾರ್ಗಸೂಚಿ ಪ್ರಕಾರ 'ಅಧಿಸೂಚಿತ ರಕ್ಷಿತಾ ಅರಣ್ಯ ಪ್ರದೇಶದಲ್ಲಿ ಬರುತ್ತದೆ. ಹಾಗಾಗಿ ಮಂಜೂರಾತಿ ತಿರಸ್ಕರಿಸಿ' ಎಂದು ಮನವಿ ಮಾಡಿದ್ದಾರೆ. ಹಾಗಾಗಿ ಮಂಜೂರಾತಿ ಆದೇಶವನ್ನು ಹಿಂಪಡೆಯಲಾಗಿದೆ"- ಗಂಗೂಬಾಯಿ ಮಾನಕರ್, ಜಿಲ್ಲಾಧಿಕಾರಿ.

ಜಿಲ್ಲೆಯಲ್ಲಿ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಟವರ್ ನಿರ್ಮಾಣಮಾಡಬೇಕೆಂಬ ಕೂಗು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಲೆ‌ ಇದೆ. ಸರ್ಕಾರದ ಬಹುತೇಕ ಯೋಜನೆಗಳು ಆನ್​ಲೈನ್​ ಮೂಲಕವೇ ಲಭ್ಯವಾಗುವುದರಿಂದ ನಿಜವಾದ ಫಲಾನುಭವಿಗಳಿಗೆ ಯೋಜನೆ ಲಾಭ ಸಿಗದಂತಾಗಿದೆ. ಅದೇಷ್ಟೊ ಗ್ರಾಮೀಣ ಭಾಗಗಳಿಗೆ ಟಿವಿ, ಪೇಪರ್ ಯಾವುದು ಇಲ್ಲ. ಇಂತಹ ಗ್ರಾಮಗಳಲ್ಲಿ ಸರ್ಕಾರದ ಯಾವ ಯೋಜನೆಗಳು ಸರಿಯಾಗಿ ತಲುಪುವುದಿಲ್ಲ. ಈ ಕಾರಣಕ್ಕೆ ನೆಟ್‌ವರ್ಕ್‌ ತುಂಬಾ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ದೂರ ಸಂಪರ್ಕ ಇಲಾಖೆ ಅಗತ್ಯ ಕ್ರಮ‌ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಒಟ್ಟಾರೆ ಸಂಪರ್ಕವೇ ಸಾಧ್ಯವಾಗದೆ ಪರದಾಡುತ್ತಿದ್ದ ಜನ ಬಿಎಸ್ಎನ್ಎಲ್ ಟವರ್ ಮಂಜೂರಿಯಾಗಿದ್ದರಿಂದ ಇಂದಲ್ಲ ನಾಳೆ ನೆಟ್‌ವರ್ಕ್‌ ಬರಬಹುದು ಎಂದು ಕಾದು ಕುಳಿತಿದ್ದವರಿಗೆ ನಿರಾಸೆ ಉಂಟಾಗಿದೆ.

ಇದನ್ನೂ ಓದಿ: ನೆಟ್‌ವರ್ಕ್‌ ಸಿಗದೆ ಮರ ಏರುವ ವಿದ್ಯಾರ್ಥಿಗಳು: ಬಾಳುಗೋಡು ಮಕ್ಕಳ ಗೋಳು ಕೇಳೋರಿಲ್ಲ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.