ETV Bharat / state

ರಂಗೇರಿದ ಪರಿಷತ್ ಚುನಾವಣೆ ಪ್ರಚಾರ: ಭುಗಿಲೆದ್ದ ಕೈ ಕಾರ್ಯಕರ್ತರ ಅಸಮಾಧಾನ

author img

By

Published : Dec 2, 2021, 10:16 AM IST

congress leaders election campaign meeting
ಕಾರವಾರದಲ್ಲಿ ಕಾಂಗ್ರೆಸ್​ ಪ್ರಚಾರ ಸಭೆ

ನಿನ್ನೆ ಶಾಸಕ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಕಾರವಾರದಲ್ಲಿ ಪಕ್ಷದ ಸದಸ್ಯರೊಂದಿಗೆ ಪ್ರಚಾರ ಸಭೆ ನಡೆಸಲಾಯಿತು. ಈ ವೇಳೆ ಪಕ್ಷದ ಕೆಲ ಚುನಾಯಿತ ಸದಸ್ಯರು ಎದ್ದು ನಿಂತು ಪ್ರಚಾರ ಕಾರ್ಯ ಕೈಗೊಳ್ಳುವಲ್ಲಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರುಗಳಲ್ಲಿ ಹೊಂದಾಣಿಕೆ ಇಲ್ಲ. ಈ ಕಾರಣದಿಂದ ಅಭ್ಯರ್ಥಿ ಪರ ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರವಾರ: ವಿಧಾನಪರಿಷತ್ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದ್ದು ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ರಾಜಕೀಯ ಪಕ್ಷಗಳು ಭರದ ಪ್ರಚಾರದಲ್ಲಿ ತೊಡಗಿವೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದ ಘಟನೆ ಜರುಗಿತು.

ಪರಿಷತ್ ಚುನಾವಣೆಗೆ ದಿನ ಹತ್ತಿರವಾಗುತ್ತಿರುವಂತೆ ಚುನಾವಣಾ ಕಣ ರಂಗು ಪಡೆದುಕೊಳ್ಳುತ್ತಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ಶತಾಯಗತಾಯ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರಲು ಪಕ್ಷಗಳು ಹರಸಾಹಸ ಪಡುತ್ತಿದ್ದು ಕಾಂಗ್ರೆಸ್ ಸಹ ಸದ್ದಿಲ್ಲದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.


ನಿನ್ನೆ ಕಾಂಗ್ರೆಸ್‌ನ ಹಿರಿಯ ಮುಖಂಡ, ಶಾಸಕ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಕಾರವಾರದಲ್ಲಿ ಪಕ್ಷದ ಸದಸ್ಯರೊಂದಿಗೆ ಪ್ರಚಾರ ಸಭೆಯನ್ನ ನಡೆಸಲಾಯಿತು. ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ಭೀಮಣ್ಣ ನಾಯ್ಕ ಸೇರಿದಂತೆ ಸ್ಥಳೀಯ ಮುಖಂಡರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಭಾಗವಹಿಸಿದ್ದರು.

ಇದನ್ನೂ ಓದಿ: ಗೋ ಹತ್ಯೆ ಮಾಡುವವರನ್ನು ಬಲೆ ಹಾಕಿ ಬಲಿ ಪಡೆಯುತ್ತೇವೆ: ಸಚಿವ ಈಶ್ವರಪ್ಪ

ಈಗಾಗಲೇ ಜಿಲ್ಲೆಯ ಹನ್ನೊಂದು ತಾಲೂಕುಗಳ ಪೈಕಿ ಕಾಂಗ್ರೆಸ್ ಬಹುತೇಕ ಎಲ್ಲ ತಾಲೂಕುಗಳಲ್ಲೂ ಪ್ರಚಾರವನ್ನ ಕೈಗೊಂಡಿದ್ದು, ನಿನ್ನೆ ಕಾರವಾರ, ಅಂಕೋಲಾ ತಾಲೂಕಿನಲ್ಲಿ ಪ್ರಚಾರ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು. ಆರ್.ವಿ ದೇಶಪಾಂಡೆ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಪ್ರಚಾರ ಕೈಗೊಳ್ಳುವಂತೆ ಸದಸ್ಯರಿಗೆ ಸಲಹೆ ಸೂಚನೆಗಳನ್ನ ನೀಡಿ, ಮನವಿ ಮಾಡಿದರು. ಆದ್ರೆ ಈ ವೇಳೆ ಪಕ್ಷದ ಕೆಲ ಚುನಾಯಿತ ಸದಸ್ಯರು ಎದ್ದು ನಿಂತು ಪ್ರಚಾರಕಾರ್ಯ ಕೈಗೊಳ್ಳುವಲ್ಲಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರುಗಳಲ್ಲಿ ಹೊಂದಾಣಿಕೆ ಇಲ್ಲ. ಈ ಕಾರಣದಿಂದ ಅಭ್ಯರ್ಥಿ ಪರ ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ದೇಶಪಾಂಡೆ, ಕೆಲವೊಂದು ವಿಚಾರದಿಂದ ಗೊಂದಲ ಉಂಟಾಗಿದ್ದು ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ವಿಧಾನ ಪರಿಷತ್‌ ಫೈಟ್: ಇಂದಿನಿಂದ ದೇವೇಗೌಡರ ಮತಬೇಟೆ

ಕಾಂಗ್ರೆಸ್ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಐವತ್ತಕ್ಕಿಂತ ಕಡಿಮೆ ಸದಸ್ಯರು ಭಾಗವಹಿಸಿದ್ದು, ಬಹುತೇಕ ಪಂಚಾಯತ್‌ಗಳಿಂದ ಕೇವಲ ಮುಖಂಡರು ಮಾತ್ರ ಆಗಮಿಸಿದ್ದರು. ಸಭೆಯ ಕುರಿತು ಸೂಕ್ತ ಮಾಹಿತಿ ನೀಡಿ ಎಲ್ಲರನ್ನೂ ಆಹ್ವಾನಿಸಿದ್ದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸದಸ್ಯರು ಸಹ ಆಗಮಿಸುತ್ತಿದ್ದರು. ಪಕ್ಷದ ಕೆಲ ಹಿರಿಯ ಮುಖಂಡರ ನಡುವಿನ ಹೊಂದಾಣಿಕೆ ಕೊರತೆಯಿಂದಲೇ ಸಭೆಗೆ ಸದಸ್ಯರು ಬಾರದಂತಾಗಿದೆ ಅಂತಾ ಚುನಾಯಿತ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ದೇಶಪಾಂಡೆ ಅವರನ್ನ ಸಮಾಧಾನಪಡಿಸಿದರು.

ಪ್ರಚಾರ ಕಾರ್ಯದ ಕುರಿತು ಪ್ರತಿಕ್ರಿಯಿಸಿದ ಅಭ್ಯರ್ಥಿ ಭೀಮಣ್ಣ ನಾಯ್ಕ, ಸ್ಥಳೀಯ ಸಂಸ್ಥೆಗಳನ್ನ ಬಲಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಯಾವುದೇ ಕ್ರಮಗಳನ್ನ ಕೈಗೊಂಡಿಲ್ಲವಾಗಿದ್ದು, ಹಲವೆಡೆ ಈ ಕುರಿತು ಚುನಾಯಿತ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮತದಾರರು ನನಗೆ ಮತ ನೀಡಿ ಗೆಲ್ಲಿಸಿಕೊಂಡು ಬರಲಿದ್ದಾರೆ ಅಂತಾ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.