ETV Bharat / state

ಐಸಿಸ್ ಸಂಪರ್ಕ ಆರೋಪ: ಭಟ್ಕಳದಲ್ಲಿ ಶಂಕಿತನೊಬ್ಬ ಎನ್ಐಎ ವಶಕ್ಕೆ, ಗುಪ್ತ ಸ್ಥಳದಲ್ಲಿ ವಿಚಾರಣೆ

author img

By

Published : Aug 1, 2022, 10:02 AM IST

isis suspect
ಅಬ್ದುಲ್ ಮುಕ್ತಧೀರ್

ಭಟ್ಕಳ ಪಟ್ಟಣದಲ್ಲಿ ನಸುಕಿನ ಜಾವ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಒಬ್ಬ ಶಂಕಿತನನ್ನು ವಶಕ್ಕೆ ಪಡೆದು ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ. ಪಟ್ಟಣ ನಿವಾಸಿ ಅಬ್ದುಲ್ ಮುಕ್ತದೀರ್ ವಶಕ್ಕೆ ಪಡೆದ ಆರೋಪಿ.

ಕಾರವಾರ: ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಲಾಗಿದೆ ಎಂದು ಆರೋಪಿ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಓರ್ವ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಹಾಗೂ ದೆಹಲಿಯಿಂದ ಬಂದಂತಹ ಎನ್ಐಎ ಅಧಿಕಾರಿಗಳ ತಂಡ ಶಂಕಿತನನ್ನು ವಶಕ್ಕೆ ಪಡೆದು ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ.

ಹೌದು, ಭಟ್ಕಳ ಎಂದಾಕ್ಷಣ ನೆನಪಾಗೋದು ಹಲವು ಉಗ್ರರ ಹೆಸರು. ಯಾಸೀನ್, ರಿಯಾಜ್, ಇಕ್ಬಾಲ್ ಸೇರಿ ಹಲವು ಮೋಸ್ಟ್ ಟೆರರ್​ ಭಟ್ಕಳ ಮೂಲದ ಉಗ್ರರರು ಬಂಧನಕ್ಕೊಳಗಾಗುವ ಮೂಲಕ ಇಡೀ ದೇಶದಲ್ಲೇ ತಾಲೂಕಿನ ಹೆಸರು ಸದ್ದು ಮಾಡಿತ್ತು. ಇದೀಗ ಭಟ್ಕಳ ಮೂಲದ ಮತ್ತೋರ್ವ ಶಂಕಿತನನ್ನ ಎನ್ಐಎ ಅಧಿಕಾರಿಗಳು ಭಾನುವಾರ ಬೆಳಗಿನ ಜಾವ ವಶಕ್ಕೆ ಪಡೆದಿದ್ದಾರೆ.

ಭಟ್ಕಳ ಪಟ್ಟಣದ ಅರ್ಬನ್ ಬ್ಯಾಂಕ್ ಸಮೀಪದ ಮನೆಯೊಂದರಲ್ಲಿ ನೆಲಸಿದ್ದ 30 ವರ್ಷದ ಅಬ್ದುಲ್ ಮುಕ್ತಧೀರ್ ವಶಕ್ಕೆ ಪಡೆದ ಶಂಕಿತ. ಐಸಿಸ್ ಭಾಷೆಗಳನ್ನ ಭಾಷಾಂತರ ಮಾಡುತ್ತಿದ್ದ ಆರೋಪದ ಮೇಲೆ ನಸುಕಿನ 3 ಗಂಟೆ ವೇಳೆಗೆ ದೆಹಲಿ ಹಾಗೂ ಬೆಂಗಳೂರಿನಿಂದ ಬಂದಂತಹ ಎನ್ಐಎ ಅಧಿಕಾರಿಗಳ ತಂಡ ಪಟ್ಟಣದ ಚಿನ್ನದಪಳ್ಳಿಯಲ್ಲಿರುವ ಪತ್ನಿಯ ಮನೆಯಲ್ಲಿ ಆತ ಇರುವುದನ್ನ ಖಚಿತಪಡಿಸಿಕೊಂಡು ವಶಕ್ಕೆ ಪಡೆದು ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ವಿಷಯ ಇದೀಗ ಪಟ್ಟಣದ ಜನರನ್ನ ಮತ್ತೆ ಆತಂಕಕ್ಕೀಡು ಮಾಡಿದೆ.

ಇನ್ನು ಐಸಿಸ್ ಪ್ರಚಾರದ ಆನ್‌ಲೈನ್ ಮ್ಯಾಗಜೀನ್ 'ವಾಯ್ಸ್ ಆಫ್ ಹಿಂದ್'ನ ಪ್ರಕಟಣೆ ಮತ್ತು ಪ್ರಸರಣದಲ್ಲಿ ಸಕ್ರಿಯ ಪಾತ್ರವಹಿಸಿದ್ದ ಆರೋಪದ ಮೇರೆಗೆ 2021ರ ಆಗಸ್ಟ್‌ನಲ್ಲಿ ಭಟ್ಕಳದಲ್ಲಿ ಜುಫ್ರಿ ಜವಾಹರ್ ದಾಮುದಿ ಅಲಿಯಾಸ್ ಅಬು ಹಾಜಿರ್ ಅಲ್ ಬದರಿಯನ್ನು ಎನ್‌ಐಎ ಮತ್ತು ರಾಜ್ಯ ಪೊಲೀಸರ ನೇತೃತ್ವದ ತಂಡ ಬಂಧಿಸಿತ್ತು.

ಈತ ಐಸಿಸ್ ಪ್ರಚಾರ ಮತ್ತು ಮಾಧ್ಯಮ ಚಟುವಟಿಕೆಗಳ ಹೊರತಾಗಿ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಖರೀದಿ, ಮುಜಾಹಿದ್ದೀನ್‌ಗಳಿಗೆ ನಿಧಿ ಸಂಗ್ರಹಣೆ ಮತ್ತು ನೇಮಕಾತಿ ಸೇರಿದಂತೆ ವಿವಿಧ ರೀತಿಯ ಬೆಂಬಲ ನೀಡುತ್ತಿದ್ದ ಎಂಬುದು ಎನ್ಐಎ ವಿಚಾರಣೆಯ ವೇಳೆ ತಿಳಿದುಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಅಬ್ದುಲ್ ಮುಕ್ತಧೀರ್​ನನ್ನ ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಭಟ್ಕಳ ಹಾಗೂ ತುಮಕೂರು ಸೇರಿ ಗುಜರಾತ್, ಮಹಾರಾಷ್ಟ್ರ, ಬಿಹಾರ ಹಾಗೂ ಮದ್ಯ ಪ್ರದೇಶದಲ್ಲೂ ಎನ್ಐಎ ದಾಳಿ ನಡೆಸಿದ್ದು, 2021ರಲ್ಲಿ ಬಂಧನಕ್ಕೊಳಗಾಗಿದ್ದ ಜುಫ್ರಿ ಜವಾಹರ್ ದಾಮುದಿ ಎಂಬಾತನ ಹೇಳಿಕೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ವಶಕ್ಕೆ ಪಡೆದ ಶಂಕಿತರು ಐಸಿಸ್‌ನ ಹಿಂಸಾತ್ಮಕ, ಜಿಹಾದಿ ಸಿದ್ಧಾಂತವನ್ನು ಪ್ರಚಾರ ಮಾಡಲು ಟೆಲಿಗ್ರಾಂ, ಹೂಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿವಿಧ ಐಸಿಸ್ ಪ್ರಚಾರ ಚಾನೆಲ್‌ಗಳನ್ನು ನಡೆಸುತ್ತಿದ್ದು, ಭಯೋತ್ಪಾದಕ ಶಾಖೆಗಳಿಗೆ ಹೊಸ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಈ ಆರೋಪಿತರು ಕೂಡ ಸಹಕಾರ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಸದ್ಯ ಎನ್ಐಎ ಅಧಿಕಾರಿಗಳು ವಿಚಾರಣೆ ಪ್ರಾರಂಭಿಸಿದ್ದು ತನಿಖೆಯ ನಂತರವೇ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳಲಿದೆ. ಇನ್ನು ಇಂತಹ ಕೆಲವರ ಉಗ್ರ ಚಟುವಟಿಕೆಯಿಂದಾಗಿ ಇಡೀ ಜಿಲ್ಲೆಗೆ ಕೆಟ್ಟಹೆಸರು ಬರುತ್ತಿದ್ದು ಈ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆ ಸೂಕ್ತ ಗಮನಹರಿಸಿ ಇಂತವರ ಮೇಲೆ ನಿಗಾ ಇರಿಸಿ ಕ್ರಮ ಕೈಗೊಳ್ಳುಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಾರಾಮುಲ್ಲಾದಲ್ಲಿ ಬೆಳ್ಳಂಬೆಳಗ್ಗೆಯೇ ಗುಂಡಿನ ಮೊರೆತ..ಎನ್​ಕೌಂಟರ್​ಗೆ ಉಗ್ರ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.