ETV Bharat / state

ಕಾರವಾರ: ಬಲೆಗೆ ಬಿದ್ದ ಬೃಹತ್ ಗಾತ್ರದ ಕುರುಡೆ ಮೀನು; ಜನವಸತಿ ಪ್ರದೇಶದಲ್ಲಿ ಮುಳ್ಳಂದಿ ಮರಿ ರಕ್ಷಣೆ

author img

By

Published : Jul 30, 2023, 12:32 PM IST

Karwar
ಕುರುಡೆ ಮೀನು, ಮುಳ್ಳಂದಿ

ಟಾಗೋರ್ ಕಡಲ ತೀರದಲ್ಲಿ 25 ಕೆ.ಜಿ ತೂಕದ ಬೃಹತ್ ಕುರಡೆ ಮೀನೊಂದು ಸಿಕ್ಕಿದೆ. ಮತ್ತೊಂದೆಡೆ, ಕಾರವಾರದ ರೈಲ್ವೆ ವಸತಿ ಗೃಹದ ಬಳಿ ಮುಳ್ಳು ಹಂದಿ ಮರಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು.

ಕಾರವಾರ: ನಗರದ ಟಾಗೋರ್ ಕಡಲ ತೀರದಲ್ಲಿ ಏಂಡಿ ಬಲೆಗೆ ಬೃಹತ್ ಕುರಡೆ ಮೀನೊಂದು ಸಿಕ್ಕಿದೆ. ಈ ಮೀನು ಖರೀದಿಗೆ ಗ್ರಾಹಕರು ಮುಗಿಬಿದ್ದ ಘಟನೆಯೂ ನಡೆಯಿತು. ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲ ವಾತಾವರಣವಿದೆ. ಹೀಗಾಗಿ ಸಾಂಪ್ರದಾಯಕ ಏಂಡಿ ಮೀನುಗಾರಿಕೆ ಬಿರುಸು ಪಡೆದಿದೆ. ಶನಿವಾರ ಉದಯ ಬಾನಾವಳಿ ಎನ್ನುವವರ ತಂಡ ಮೀನುಗಾರಿಕೆ ಮಾಡುವಾಗ ಈ ಮೀನು ಬಲೆ ಸೇರಿದೆ.

ಸಾಮಾನ್ಯವಾಗಿ ಏಂಡಿ ಬಲೆಗೆ ಸಣ್ಣ ಮೀನುಗಳು ಸೇರಿದಂತೆ ಏಡಿಗಳು ಸಿಗುತ್ತವೆ. ಆದರೆ ಅಪರೂಪವಾಗಿ ಸಿಗುವ ಕುರಡೆ ಮೀನು ಕಂಡು ಮೀನುಗಾರರು ಹರ್ಷ ವ್ಯಕ್ತಡಿಸಿದರು. ಬಲೆಗೆ ಸಿಕ್ಕ ಕುರಡೆ ಮೀನು 25 ಕೆ.ಜಿ ತೂಕವಿದೆ. ರುಚಿಕರವಾಗಿರುವ ಮೀನು ಖರೀದಿಗೆ ಸಮುದ್ರ ತೀರದಲ್ಲಿ ಗ್ರಾಹಕರು ಮುಗಿಬಿದ್ದರು. ಬಳಿಕ ಕೆ.ಜಿಗೆ 350 ರೂ.ಯಂತೆ ಮಾರಾಟ ಮಾಡಲಾಯಿತು.

ಇದನ್ನೂ ಓದಿ: ಭದ್ರಾ ಹಿನ್ನೀರಲ್ಲಿ 56 ಕೆಜಿ ತೂಕದ ಕ್ಯಾಟ್ಲಾ ಮೀನು ಬಲೆಗೆ; 12 ಸಾವಿರ ರೂಪಾಯಿಗೆ ಸೇಲ್‌- ವಿಡಿಯೋ

ಮುಳ್ಳು ಹಂದಿ ಮರಿ ರಕ್ಷಣೆ: ನಗರದ ರೈಲ್ವೆ ವಸತಿ ಗೃಹ ಬಳಿಯ ಜನವಸತಿ ಪ್ರದೇಶದಲ್ಲಿ ಮುಳ್ಳು ಹಂದಿಯ ಮರಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು. ಒಂಟಿ ಮುಳ್ಳಹಂದಿಯ ಮರಿ ನೋಡಿದ ಸ್ಥಳೀಯರಾದ ಮಾದೇವ ಗೌಡ ಎಂಬವರು ಗೋಣಿ ಚೀಲದ ಮೂಲಕ ಹಿಡಿದು ಮನೆಗೆ ತಂದಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಇಲಾಖೆ ಸಿಬ್ಬಂದಿ ಮುಳ್ಳು ಹಂದಿ ಮರಿ ರಕ್ಷಿಸಿ ಸುರಕ್ಷಿತ ಸ್ಥಳ ಸೇರಿಸಿದರು.

ವಿದ್ಯುತ್ ತಂತಿ ಸ್ಪರ್ಶಿಸಿ ಜಾನುವಾರು ಸಾವು: ಹೊನ್ನಾವರ ಪಟ್ಟಣದ ಜಡ್ಡಿಕೇರಿಯಲ್ಲಿ ಮೇಯಲು ಹೋದ 3 ಜಾನುವಾರು ತುಂಡಾಗಿ ಬಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಜಡ್ಡಿಕೇರಿಯ ನಿವಾಸಿ ಮಂಜುನಾಥ ನಾಯ್ಕ ಎಂಬವರಿಗೆ ಸೇರಿದ ಒಂದು ಹಸು ಹಾಗೂ ಇನ್ನೋರ್ವ ಸ್ಥಳೀಯರಿಗೆ ಸೇರಿದ ಎಮ್ಮೆ ಹಾಗೂ ಎಮ್ಮೆಯ ಕರು ಮೃತಪಟ್ಟಿವೆ.

ವಿದ್ಯುತ್ ತಂತಿಯಲ್ಲಿ ವಿದ್ಯುತ್‌ ಪ್ರಹರಿಸುತ್ತಿದ್ದರಿಂದ ಜಾನುವಾರುಗಳಿಗೆ ವಿದ್ಯುತ್ ಶಾಕ್ ತಗುಲಿದೆ ಎನ್ನಲಾಗಿದೆ. ಸ್ಥಳೀಯರೋರ್ವರು ನೀಡಿದ ಮಾಹಿತಿ ಪ್ರಕಾರ ಇದು ಜನಸಂಚಾರವಿರುವ ಸ್ಥಳವಾಗಿದೆ. ಸನಿಹದಲ್ಲೇ ಕೂಲಿಕಾರ ಮಹಿಳೆಯರು ಗದ್ದೆ ನಾಟಿ ಕಾರ್ಯದಲ್ಲಿ ತೊಡಗಿದ್ದರು. ಅದೃಷ್ಟವಶಾತ್ ಈ ಸಂದರ್ಭದಲ್ಲಿ ಬಾರದಿದ್ದರಿಂದ ಅವಘಡ ತಪ್ಪಿದಂತಾಗಿದೆ ಎಂದು ತಿಳಿಸಿದರು.

ಕೆಇಬಿಯವರು ತುಂಡಾದ ವಿದ್ಯುತ್ ಲೈನ್ ದುರಸ್ಥಿಗೊಳಿಸಿದ್ದು ಬಿಟ್ಟರೆ ಮೃತಪಟ್ಟ ಜಾನುವಾರು ಮಾಲೀಕರಿಗೆ ಮಾಹಿತಿ ನೀಡುವ ಕಾರ್ಯ ಮಾಡಿಲ್ಲ. ಕೊನೆಗೆ ಸ್ಥಳೀಯರು ಘಟನೆ ನೋಡಿ ಮೃತಪಟ್ಟ ಜಾನುವಾರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಘಟನೆ‌ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾರವಾರದಲ್ಲಿ ಬಲೆಗೆ ಬಿದ್ದ ಬೃಹತ್ ಕುಡಗೇರಿ ಮೀನು; ಕೆಜಿಗೆ 500 ರುಪಾಯಿಯಂತೆ ಮಾರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.